More

    ಮಳೆ, ಗಾಳಿಗೆ ಕಂಗೆಟ್ಟ ಬೆಳೆಗಾರ

    ಶಿರಸಿ: ತಾಲೂಕಿನ ಪೂರ್ವ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಗಾಳಿಯ ಅಬ್ಬರ ಜೋರಾಗಿದೆ. ಇದರಿಂದಾಗಿ ಫಲಭರಿತ ಬಾಳೆ ಮರಗಳು ಧರೆಗುರುಳುತ್ತಿದ್ದು, ಬೆಳೆಗಾರರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

    ತಾಲೂಕಿನ ಬನವಾಸಿ, ಗುಡ್ನಾಪುರ, ಸಂತೊಳ್ಳಿ, ಕಾಳಂಗಿ, ವದ್ದಲ, ಅಂಡಗಿ ಭಾಗಗಳಲ್ಲಿ ಗಾಳಿಯ ರಭಸಕ್ಕೆ ಸಾವಿರಾರು ಬಾಳೆ ಮರಗಳು ನೆಲಕ್ಕುರುಳಿವೆ. ಇನ್ನೆರಡು ವಾರಗಳಲ್ಲಿ ಮಾರುಕಟ್ಟೆಗೆ ತಲುಪುತ್ತಿದ್ದ ಬಾಳೆಯ ಗೊನೆಗಳು ನೆಲಕ್ಕೊರಗಿವೆ. ಈ ಹಿಂದೆ ಬಾಳೆಗೊನೆ ಕಟಾವಿನ ವೇಳೆ ಕರೊನಾ ಕಾರಣಕ್ಕೆ ಮಾಡಿದ ಲಾಕ್​ಡೌನ್ ನಷ್ಟಕ್ಕೆ ನೂಕಿದ್ದರೆ ಇದೀಗ ಮಳೆಯೊಟ್ಟಿಗೆ ಭಾರಿ ಗಾಳಿ ಬೆಳೆಗಾರರ ನಿದ್ದೆಗೆಡಿಸಿದೆ.

    ರಭಸದ ಗಾಳಿಯಿಂದ ಹಾನಿ: ಬನವಾಸಿ ಹೋಬಳಿಯ ಗ್ರಾಮ ಪಂಚಾಯಿತಿಗಳಲ್ಲಿ 2 ಸಾವಿರ ಹೆಕ್ಟೇರ್​ಗೂ ಹೆಚ್ಚು ಬಾಳೆ ಬೆಳೆಯಲಾಗುತ್ತಿದೆ. ಈ ವರ್ಷ ಕೂಡ ಬಾಳೆಯತ್ತ ಒಲವು ತೋರಿದ್ದ ರೈತರಿಗೆ ಈ ಬಾರಿ ಮಳೆಯೊಂದಿಗೆ ಬಂದ ಗಾಳಿಯ ವೇಗ ಹಾನಿಯತ್ತ ನೂಕಿದೆ. ಈ ಭಾಗದ 150 ಹೆಕ್ಟೇರ್​ಗೂ ಹೆಚ್ಚು ಬಾಳೆ ಪ್ರದೇಶ ನಾಶವಾಗಿದೆ. ತಾಲೂಕಿನ ದಾಸನಕೊಪ್ಪ ಸಮೀಪದ ವದ್ದಲ ಒಂದೇ ಗ್ರಾಮದಲ್ಲಿ ಕನಿಷ್ಠ 20 ಎಕರೆಯಷ್ಟು ಬಾಳೆ ನಾಶವಾಗಿದೆ. ಈ ಭಾಗದ 15ಕ್ಕೂ ಹೆಚ್ಚು ಬಾಳೆ ಬೆಳೆಗಾರರು ನಷ್ಟದ ಕೂಪಕ್ಕೆ ಬಿದ್ದಿದ್ದಾರೆ. ಇಲ್ಲಿನ ವಸಂತ ಗೌಡರ ತೋಟದಲ್ಲಿ ಸಾವಿರಕ್ಕೂ ಹೆಚ್ಚು ಫಲಭರಿತ ಬಾಳೆ ಗಿಡಗಳು ಬುಡಮೇಲಾಗಿ ಬಿದ್ದಿವೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಬಾಳೆ ಕೃಷಿ ಮಾಡಿದ್ದ ರೈತರು ಇದೀಗ ಸಾಲ ತೀರಿಸುವುದು ಹೇಗೆಂದು ಯೋಚಿಸುವಂತಾಗಿದೆ.

    ಸೂಕ್ತ ಪರಿಹಾರ ನೀಡಿ: ಸಾಲ ಮಾಡಿ ಬಾಳೆ ಕೃಷಿ ಮಾಡಿದ್ದು, ಪ್ರಕೃತಿ ವಿಕೋಪದ ಕಾರಣಕ್ಕೆ ನಷ್ಟವಾಗಿದೆ. ತಕ್ಷಣ ಸರ್ಕಾರ ಸೂಕ್ತ ಪರಿಹಾರ ಬಿಡುಗಡೆ ಮಾಡಿ ನೊಂದ ರೈತರಿಗೆ ಸಾಂತ್ವನ ಹೇಳಬೇಕು ಎಂದು ಈ ಬಾಗದ ಬಾಳೆ ಬೆಳೆಗಾರರಾದ ಸದಾನಂದ ಗೌಡ, ಶಂಕ್ರಪ್ಪ, ನೀಲಪ್ಪ ಮಾದರ, ಮಲ್ಲಿಕಾರ್ಜುನ ಗೌಡ, ಗುತ್ಯಪ್ಪ ಚನ್ನಯ್ಯ ಹಾಗೂ ಇತರರು ಒತ್ತಾಯಿಸಿದ್ದಾರೆ.

    ಪ್ರಸಕ್ತ ವರ್ಷ ಬಾಳೆಗೆ ಕಂಟಕದ ವರ್ಷವಾಗಿದೆ. ಲಾಕ್​ಡೌನ್ ಸಮಯದಲ್ಲಿ ಬಾಳೆ ಗೊನೆಗಳಿಗೆ ಮಾರುಕಟ್ಟೆಯಿಲ್ಲದೆ ಬೆಳೆಗಾರರು ಕಂಗಾಲಾಗಿದ್ದರು. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಗಾಳಿಯ ವೇಗಕ್ಕೆ ಮರ ಸಹಿತ ಗೊನೆಗಳು ನೆಲಕ್ಕೆ ಬಿದ್ದಿವೆ. ಇದರೊಂದಿಗೆ ರೈತರ ಬದುಕು ಬರಡಾಗಿದೆ.

    | ವಸಂತ ಗೌಡ ವದ್ದಲ ಬಾಳೆ ಬೆಳೆಗಾರ

    ಸ್ಥಳ ಪರಿಶೀಲಿಸಿ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಪರಿಹಾರ ಬಿಡುಗಡೆಯಾದ ತಕ್ಷಣ ಸಂತ್ರಸ್ತ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು.

    | ಸತೀಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts