More

    ಮಳೆ ಅಬ್ಬರಕ್ಕೆ ಯಲ್ಲಾಪುರ ತಾಲೂಕು ತತ್ತರ

    ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ ಸಂಜೆ ಏಕಾಏಕಿ ಭಾರಿ ಮಳೆ ಸುರಿದಿದ್ದು, ಗಣೇಶ ಚತುರ್ಥಿ ಸಂಭ್ರಮಕ್ಕೆ ನೀರೆರಚಿದೆ. ಬುಧವಾರ ಸಂಜೆ 4 ಗಂಟೆಯ ಹೊತ್ತಿಗೆ ಏಕಾಏಕಿ ಗುಡುಗು ಸಹಿತ ಭಾರಿ ಮಳೆ ಸುರಿಯಿತು.

    ಪಟ್ಟಣದ ವಿಶ್ವದರ್ಶನ ಸಂಸ್ಥೆ ಎದುರು, ಸಬಗೇರಿ ಬಳಿ, ದೇವಿ ಮೈದಾನದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯ ನೀರು ತುಂಬಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಸರ್ಕಾರಿ ಪಿಯು ಕಾಲೇಜ್ ಬಳಿ ಎರಡು ವಿದ್ಯುತ್ ಕಂಬಗಳು ಮುರಿದಿದ್ದು, ವಿದ್ಯುತ್ ವ್ಯತ್ಯಯ ಉಂಟಾಯಿತು.

    ಗ್ರಾಮೀಣ ಭಾಗದಲ್ಲೂ ಮಳೆ ಅಬ್ಬರಿಸಿದ್ದು, ಅನಗೋಡ, ದೋಣಗಾರ, ಇಡಗುಂದಿ, ನಂದೊಳ್ಳಿ ಹಾಗೂ ಹುತ್ಕಂಡ ಭಾಗದಲ್ಲಿ ಹಳ್ಳಗಳು ತುಂಬಿ ಹರಿದವು. ಅಡಕೆ ತೋಟ, ಭತ್ತದ ಗದ್ದೆಗಳು ಜಲಾವೃತವಾದವು. ಇಡಗುಂದಿ ಗ್ರಾ.ಪಂ. ವ್ಯಾಪ್ತಿಯ ಅರಬೈಲಿನಿಂದ ಕೆಳಾಸೆಗೆ ಹೋಗುವ ರಸ್ತೆಯಲ್ಲಿ ಹಳ್ಳ ಸೇತುವೆಯ ಮೇಲೆ ಹರಿದು ಸಂಚಾರಕ್ಕೆ ತೊಂದರೆ ಉಂಟಾಯಿತು.

    ಹೆದ್ದಾರಿಯಲ್ಲೇ ಬಿರುಕು: ಚವತ್ತಿ ಬಳಿ ಯಲ್ಲಾಪುರ- ಶಿರಸಿ ರಾಜ್ಯ ಹೆದ್ದಾರಿಯೇ ಬಿರುಕು ಬಿಟ್ಟಿದ್ದು, ಲಾರಿ, ಬಸ್​ನಂತಹ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ಚವತ್ತಿ ಬಳಿ ರಸ್ತೆ ಪಕ್ಕದ ಗದ್ದೆ, ತೋಟಗಳಿಗೆ ನುಗ್ಗಿದ ನೀರು ರಭಸದಿಂದ ರಸ್ತೆಯತ್ತ ನುಗ್ಗಿದ್ದು, ಬಿರುಕು ಮೂಡಿ ರಸ್ತೆ ಕಿತ್ತು ಹೋಗಿದೆ.

    ಮತ್ತೆ ಕುಸಿದ ಸೂರಿಮನೆ ರಸ್ತೆ: ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯ ತುಡಗುಣಿ- ಸೂರಿಮನೆ ಸಂಪರ್ಕ ರಸ್ತೆ ಮತ್ತೆ ಕುಸಿತಕ್ಕೊಳಗಾಗಿದ್ದು, ಸೂರಿಮನೆಗೆ ಸಂಪರ್ಕ ಕಡಿತಗೊಂಡಿದೆ. ಗ್ರಾ.ಪಂ. ಅಧ್ಯಕ್ಷೆ ರೂಪಾ ಪೂಜಾರಿ, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಬಂಟ, ಗ್ರಾ.ಪಂ. ಮಾಜಿ ಸದಸ್ಯ ರಾಮಚಂದ್ರ ಭಟ್ಟ ಸೂರಿಮನೆ, ಗ್ರಾ.ಪಂ. ಸದಸ್ಯರಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ, ಕುಪ್ಪಯ್ಯ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಮಳೆಗಾಲದಲ್ಲಿ ಸೂರಿಮನೆ ರಸ್ತೆ ಕುಸಿತ ಉಂಟಾಗಿತ್ತು. ತಾತ್ಕಾಲಿಕವಾಗಿ ದುರಸ್ತಿ ಕೈಗೊಳ್ಳಲಾಗಿತ್ತು. ಅದಾದ ನಂತರ ಈ ಬಾರಿಯ ಬೇಸಿಗೆಯಲ್ಲೂ ಜೋರಾದ ಮಳೆಯ ಪರಿಣಾಮ ಮತ್ತೆ ಕುಸಿತ ಉಂಟಾಗಿತ್ತು. ಇದೀಗ ಮೂರನೇ ಬಾರಿ ಸೇತುವೆ ಕುಸಿದಿದೆ.

    ಹಾಸ್ಪುರ ಬಳಿ ಗಣಪತಿ ಹಾಸ್ಪುರ ಎಂಬ ರೈತರ ಗದ್ದೆಯ ಏರಿ ಒಡೆದು ಹಳ್ಳದ ನೀರು ನುಗ್ಗಿ ನಾಟಿ ಮಾಡಿದ ಭತ್ತದ ಗದ್ದೆಗೆ ಹಾನಿಯಾಗಿದೆ. ಗದ್ದೆಯ ತುಂಬ ಕಲ್ಲು, ಮಣ್ಣಿನ ರಾಶಿ ಬಂದು ಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts