More

    ಮಳೆಹಾನಿಯ ವರದಿ ಸಿದ್ಧ ; ಅಧಿವೇಶನದಲ್ಲಿ ಚರ್ಚಿಸಿ ಶೀಘ್ರ ಪರಿಹಾರ: ಶಾಸಕ ಹಾಲಪ್ಪ ಭರವಸೆ

    ರಿಪ್ಪನ್‌ಪೇಟೆ: ಕಡಿಮೆ ಸಮಯದಲ್ಲಿ ಅಧಿಕ ಮಳೆ ಸುರಿದ ಪರಿಣಾಮ ಸಾಕಷ್ಟು ಹಾನಿಯುಂಟಾಗಿದೆ. ಅತಿವೃಷ್ಠಿ ಸಂತ್ರಸ್ತರ ನೆರವಿಗಾಗಿ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದೆಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ಅರಸಾಳು-ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿ ಮಾತನಾಡಿದ ಅವರು, ಈ ಬಾರಿಯ ಹೆಚ್ಚು ಮಳೆಯಿಂದ ಜಮೀನುಗಳು, ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಇದರಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕೆಲವು ಮನೆಗಳಿಗೂ ಹಾನಿಯಾಗಿದ್ದು, ನಷ್ಟದ ಬಗ್ಗೆ ಅಧಿಕಾರಿಗಳು ವರದಿ ತಯಾರಿಸಿದ್ದಾರೆ. ಸಮಗ್ರ ಮಾಹಿತಿಯ ಜತೆ ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಕಾರ್ಯದ ಅನುದಾನ ಮಂಜೂರಾತಿಗೆ ಪ್ರಯತ್ನಿಸುತ್ತೇನೆ ಹಾಗೂ ಗೋಡೆ ಕುಸಿತದಿಂದ ಗಾಯಗೊಂಡ ನಾಲ್ಕು ಜನರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಕ್ರಮವಹಿಸುತ್ತೇನೆ ಎಂದರು.
    ಶಾಶ್ವತ ಕುಡಿಯುವ ನೀರು:
    ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು, ಬೇಸಿಗೆಯಲ್ಲಿ ಹಕ್ಕಿ ಕುಡಿಯಲು ನೀರಿರದ ವಾತಾವರಣ ಮಲೆನಾಡಿನ ಈ ಭಾಗದಲ್ಲಿದೆ. ಆದ್ದರಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ನಾನು ಸೇರಿ ಹೊಸನಗರ ತಾಲೂಕಿನ ಪ್ರತಿ ಗ್ರಾಮಕ್ಕೂ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿದ್ದೇವೆ. 395 ಕೋಟಿ ರೂ. ವೆಚ್ಚದಲ್ಲಿ ಚಕ್ರಾ ಡ್ಯಾಂನಿಂದ ತಾಲೂಕಿನಾದ್ಯಂತ ನೀರು ಸರಬರಾಜು ವ್ಯವಸ್ಥೆ ಸಿದ್ಧವಾಗಿದ್ದು, ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆಗೊಂಡು ಯೋಜನೆ ಕಾರ್ಯಾರಂಭಗೊಳ್ಳಲಿದೆ ಎಂದರು.
    ಬೆಳ್ಳೂರು ಗ್ರಾಪಂ ಹೊಗರ ಹಳ್ಳ ರಸ್ತೆ, ಗಾಮನಗದ್ದೆ, ನಾರಾಯಣಪ್ಪನವರ ಮನೆ, ಅರಸಾಳು ಗ್ರಾ.ಪಂನ ಮಚಲಿಜೆಡ್ಡು ಸೇತುವೆ ಹಾಗೂ ಬೆಳೆ ಹಾನಿ ವೀಕ್ಷಿಸಿದರು.
    ಬಗರ್ ಹುಕುಂ ರೈತರ ಒಕ್ಕಲೆಬ್ಬಿಸುವುದಿಲ್ಲ:
    ಬಗರ್‌ಹುಕುಂ ರೈತರಿಗೆ ಮಾರಕವಾಗಿದ್ದ 192(ಎ) ಕಾಯ್ದೆಯನ್ನು ಮಾರ್ಪಾಡು ಪಡಿಸುವುದರೊಂದಿಗೆ ಸರ್ಕಾರ ಭೂಒತ್ತುವರಿ ಪ್ರಖರಣಕ್ಕೆ ಬೆಂಗಳೂರಿಗೆ ರೈತರು ಅಲೆಯುವುದನ್ನು ತಪ್ಪಿಸಿದೆ. ಈಗಿನ ಕಾನೂನಿನನ್ವಯ ಅರಣ್ಯ ರೈತರಿಗೆ ಹಕ್ಕುಪತ್ರ ಕೊಡುವುದು ಕಷ್ಟ ಸಾಧ್ಯವಾಗಿದೆ. ಆದರೆ ಯಾವುದೇ ರೈತರಿಗೆ ಒಕ್ಕಲ್ಲೆಬ್ಬಿಸದಂತೆ ಕ್ರಮ ಕೈಗೊಳ್ಳಲಾಗಿದ್ದು ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts