More

    ಮಳೆಯಿಂದ 1476 ಕಿಮೀ ರಸ್ತೆ ಹಾನಿ

    ಸುಭಾಸ ಧೂಪದಹೊಂಡ ಕಾರವಾರ

    ಸೆಪ್ಟೆಂಬರ್​ನಲ್ಲೂ ಈ ಬಾರಿ ಜಿಲ್ಲೆಯಲ್ಲಿ ಹದವಾದ ಮಳೆ ಮುಂದುವರಿದಿದೆ. ಮುಂಗಾರಿನ ವಾರ್ಷಿಕ ಸರಾಸರಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿವೃಷ್ಟಿ ಸಂಭವಿಸಿಲ್ಲ. ಕೆಲ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ, ಆಗಾಗ ಅಬ್ಬರಿಸುತ್ತಿರುವ ಮಳೆರಾಯ ಸೃಷ್ಟಿಸಿದ ಅವಾಂತರಗಳು ಕಡಿಮೆಯೇನಿಲ್ಲ. ಮುಖ್ಯವಾಗಿ ರಸ್ತೆಗಳು ಹಾಗೂ ಸೇತುವೆಗಳಿಗೆ ಭಾರಿ ಹಾನಿಯಾಗಿದೆ. ಇದರಿಂದ ಸಂಚಾರ ದುಸ್ತರವಾಗಿದೆ.

    ಕಳೆದ ಜೂನ್​ನಿಂದ ಇದುವರೆಗೆ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಒಟ್ಟು 1,476 ಕಿಲೋ ಮೀಟರ್ ರಸ್ತೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅದರ ಮೌಲ್ಯ ಸುಮಾರು 346 ಕೋಟಿ ರೂ. ಎಂದು ಜಿಲ್ಲಾಡಳಿತ ಲೆಕ್ಕ ಹಾಕಿದೆ. ಪ್ರಮುಖವಾಗಿ 106 ಕೋಟಿ ರೂ.ಗಳ 698 ಕಿ.ಮೀ. ಗ್ರಾಮೀಣ ರಸ್ತೆಗಳು, 88 ಕೋಟಿ ರೂ. ಮೌಲ್ಯದ 292 ಕಿಮೀ ರಾಜ್ಯ ಹೆದ್ದಾರಿ. 140 ಕೋಟಿ ರೂ. ಮೌಲ್ಯದ 422 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳು, 11 ಕೋಟಿ ಮೌಲ್ಯದ 64 ಕಿಮೀ ನಗರ ರಸ್ತೆಗಳಿಗೆ ಹಾನಿಯಾಗಿದೆ ಎಂದು ವರದಿ ಮಾಡಲಾಗಿದೆ. ಪ್ರಮುಖವಾಗಿ 257 ಸೇತುವೆ ಹಾಗೂ ಕಲ್ವರ್ಟ್​ಗಳು ನಷ್ಟವಾಗಿವೆ. ಅವುಗಳಲ್ಲಿ 102 ಗ್ರಾಮೀಣ ಭಾಗದ ಸೇತುವೆಗಳಿಗೆ ಹಾನಿಯಾಗಿವೆ ಎಂದು ತಿಳಿಸಲಾಗಿದೆ.

    ಎಲ್ಲೆಲ್ಲಿ ಎಷ್ಟು ಹಾಳು: ಅಂಕೋಲಾದಲ್ಲಿ 25.50 ಕಿ.ಮೀ., ಭಟ್ಕಳ- 54.91, ದಾಂಡೇಲಿ- 0.90, ಹಳಿಯಾಳ- 15.40, ಹೊನ್ನಾವರ- 26.56, ಕಾರವಾರ-10.58, ಕುಮಟಾ- 50.95, ಮುಂಡಗೋಡ- 29.70, ಸಿದ್ದಾಪುರ- 115.80, ಶಿರಸಿ- 132.80, ಜೊಯಿಡಾ-ಯಲ್ಲಾಪುರ- 123.10 ಕಿಮೀ ಗ್ರಾಮೀಣ ರಸ್ತೆಗಳು ಕಿತ್ತು ಹೋಗಿವೆ. ಅಂಕೋಲಾದಲ್ಲಿ 28, ಭಟ್ಕಳದಲ್ಲಿ 11.15, ದಾಂಡೇಲಿ- 7.55, ಹಳಿಯಾಳ- 23.1, ಕಾರವಾರ- 37.85, ಕುಮಟಾ- 4.05, ಮುಂಡಗೋಡ- 5.60, ಸಿದ್ದಾಪುರ- 73.53, ಶಿರಸಿ- 16.20, ಜೊಯಿಡಾ- 51.50, ಯಲ್ಲಾಪುರ- 33.75 ಕಿ.ಮೀ. ರಾಜ್ಯ ಹೆದ್ದಾರಿ ಹಾಳಾಗಿದೆ. ಸಿದ್ದಾಪುರದಲ್ಲಿ 112.65 ಕಿ.ಮೀ. ರಸ್ತೆ ಹಾಳಾಗಿದೆ.

    ನೆರೆಯಿಂದ ಹಾನಿಯಾದ ಸಾರ್ವಜನಿಕ ಆಸ್ತಿಗಳ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಈಗಲೂ ಮಳೆ ಮುಂದುವರಿದಿದೆ. ಒಮ್ಮೆ ಮಳೆ ಕಡಿಮೆಯಾದ ನಂತರ ರಸ್ತೆಗಳ ರಿಪೇರಿಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗುವುದು.
    ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿ ಉತ್ತರ ಕನ್ನಡ

    ಜನಪ್ರತಿನಿಧಿಗಳಿಗೆ ಹಿಡಿಶಾಪ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳೂ ಹಾಳಾಗಿವೆ. ಹಲವು ರಸ್ತೆಗಳಲ್ಲಿ ವಾಹನ ಚಲಾಯಿಸುವುದೇ ಸವಾಲು ಎಂಬಂತಾಗಿದೆ. ಚಾಲಕರು, ಪ್ರಯಾಣಿಕರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತ ತಿರುಗುಗುತ್ತಿದ್ದಾರೆ. ‘ಉತ್ತರ ಕನ್ನಡದಲ್ಲಿ ಮಳೆ ಹೆಚ್ಚು. ಹಾಗಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತದೆ. ಇದು ಗೊತ್ತಿದ್ದೂ ಹೆಚ್ಚು ಮಳೆ ತಾಳಿಕೊಳ್ಳುವ ಗುಣಮಟ್ಟದ ರಸ್ತೆ ಅಥವಾ ಆಧುನಿಕ ತಂತ್ರಜ್ಞಾನವನ್ನು ಪಿಡಬ್ಲ್ಯುಡಿ, ಜಿಪಂ ಇಂಜಿನಿಯರಿಂಗ್ ಇಲಾಖೆಗಳು ಇನ್ನೂ ಅಳವಡಿಸಿಕೊಳ್ಳದಿರುವುದು ದುರಂತ. ನೆರೆ ಪರಿಹಾರ ಕಾಮಗಾರಿ ನೆಪದಲ್ಲಿ ಟೆಂಡರ್ ಕರೆಯದೇ ತಮ್ಮ ಪರಿಚಯದವರಿಂದಲೇ ಕಳಪೆ ಕಾಮಗಾರಿ ಮಾಡಿಸುವ ವ್ಯವಹಾರ ಇದಕ್ಕೆ ಕಾರಣ. ಇದಕ್ಕೆ ಜನಪ್ರತಿನಿಧಿಗಳೂ ಸಾಥ್ ನೀಡುತ್ತಾರೆ.’ ಎಂದು ಪ್ರಯಾಣಿಕ ಗಜೇಂದ್ರ ನಾಯ್ಕ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts