More

    ಮಳೆಗೆ ಜನಜೀವನ ತತ್ತರ

    ಗದಗ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಿಂದಾಗಿ ಬೆಳೆ ಹಾನಿ ಯಾಗಿದೆ. ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ರಸ್ತೆಗಳು ಹದಗೆಟ್ಟು ಹೋಗಿ ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

    ಗದಗ-ಬೆಟಗೇರಿ ಅವಳಿ ನಗರ, ನರಗುಂದ, ಗಜೇಂದ್ರಗಡ, ಮುಳಗುಂದ, ಶಿರಹಟ್ಟಿ, ರೋಣ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಾಗಿದೆ. ಬೆಟಗೇರಿ ಕೆಲ ಭಾಗ, ರೈಲ್ವೆ ಕೆಳಸೇತುವೆ, ಹಾತಲಗೇರಿ ನಾಕಾ, ಹಳೇ ಡಿಸಿ ಆ?ೕಸ್ ಮೊದಲಾದೆಡೆ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿದು ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಲಂಗಳ ರಸ್ತೆಗಳಲ್ಲಂತೂ ನಡೆದಾಡಲೂ ಆಗದಷ್ಟು ನೀರು ಹರಿಯುತ್ತಿದೆ. ಇಲ್ಲಿ ವಾಹ ನ ಸ ವಾರಿ ಮಾಡುವುದು ಸಾಹಸದ ಕೆಲಸವಾಗಿದೆ. ಬೆಟಗೇರಿಯಲ್ಲಿ ಮಣ್ಣಿನ ಮನೆಯೊಂದು ಬಿದ್ದಿದೆ. ಆದರೆ, ಪ್ರಾಣಾಪಾಯವಾಗಿಲ್ಲ. ಗಂಗಿಮಡಿಯಲ್ಲಿ ಒಳಚರಂಡಿ ಪೈಪ್ ಮೂಲಕ ಮಳೆಯ ನೀರು, ಚರಂಡಿ ನೀರು ಒಟ್ಟಿಗೆ ಮನೆಯ ಸ್ನಾನಗೃಹ, ಶೌಚಗೃಹಕ್ಕೆ ನುಗ್ಗಿದ್ದರಿಂದ ಮನೆ ಜಲಾವೃತವಾಗಿತ್ತು. ನೀರು ಹೊರಹಾಕಲು ಮನೆಯವರು ಹರಸಾಹಸಪಟ್ಟರು.

    ಆಳೆತ್ತರ ಬೆಳೆದ ಕಸ, ಹಿಂಗಾರು ಬಿತ್ತನೆಗೆ ಅಡ್ಡಿ

    ಬೆಳವಣಿಕಿ(ತಾ.ರೋಣ): ತಿಂಗಳಿಂದ ಸತತ ಸುರಿಯುತ್ತಿರುವ ಮಳೆಯಿಂದ ಉಳ್ಳಾಗಡ್ಡಿ, ಮೆಣಸಿನಗಿಡ, ಹತ್ತಿ, ಶೇಂಗಾ, ಗೋವಿನಜೋಳ, ಗುರೆಳ್ಳು, ಎಳ್ಳು ಬೆಳೆಗಳಲ್ಲಿ ನೀರು ನಿಂತು ಕೊಳೆಯುತ್ತಿವೆ.

    ಮಳೆಯಿಂದಾಗಿ ಹೊಲದಲ್ಲಿ ರೈತರು ಕೆಲಸ ಮಾಡಲಾಗುತ್ತಿಲ್ಲ. ಉಳ್ಳಾಗಡ್ಡಿ ಬೆಳೆಗೆ ಮೊದಲೇ ರೋಗ ಕಾಣಿಸಿತ್ತು. ಔಷಧ ಸಿಂಪಡಿಸಿದರೂ ಸುಧಾರಿಸಲಿಲ್ಲ. ಉಳಿದ ಬೆಳೆಯೂ ಮಳೆಯಿಂದಾಗಿ ಕೊಳೆತು ನಾರುತ್ತಿದೆ. ಮೆಣಸಿನಗಿಡಗಳ ಬೆಳವಣಿಗೆ ಕುಂಠಿತವಾಗಿ ಕಾಯಿಗಳು ಉದುರುತ್ತಿವೆ.

    ಮಳೆಯಿಂದಾಗಿ ಹೊಲದಲ್ಲಿ ಆಳೆತ್ತರ ಕಸ ಬೆಳೆದಿದ್ದು, ಹಿಂಗಾರು ಬೆಳೆಗಳ ಬಿತ್ತನೆಗೂ ಅಡ್ಡಿಯಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಕೃಷಿ ಪಂಡಿತ ಪುರಸ್ಕೃತ ಗ್ರಾಮದ ರೈತ ಶರಣಪ್ಪ ಹದ್ಲಿ, ಮಲ್ಲಣ್ಣ ದಾದ್ಮಿ, ಶಿವಣ್ಣ ಅರಹುಣಸಿ, ಧರ್ಮಣ್ಣ ಮಾಢಳ್ಳಿ, ನೆಹರು ಕಂಬಳಿ, ಬಸವಂತಪ್ಪ ಸುಣಗದ, ಮಲ್ಲಪ್ಪ ಸಜ್ಜನರ, ಶಂಕ್ರಪ್ಪ ಇಟ್ಟನಾಯಕರ, ನಿಂಗಪ್ಪ ಮರಿಗೌಡರ ಮತ್ತಿತರರು ಅಲವತ್ತುಕೊಳ್ಳುತ್ತಿದ್ದಾರೆ.

    ನೆಲಕಚ್ಚಿದ ಗೋವಿನಜೋಳ

    ಮುಂಡರಗಿ: ನಿರಂತರ ಮಳೆಯಿಂದ ತಾಲೂಕಿನ ಪೇಠಾಲೂರ ಗ್ರಾಮದ ಹಾಲಪ್ಪ ಕಬ್ಬೇರಳ್ಳಿ, ಬಸವ್ವ ಕಬ್ಬೇರಳ್ಳಿ ಅವರ ಹೊಲದಲ್ಲಿನ ಗೋವಿನಜೋಳ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹಾಲಪ್ಪ, ಬಸವ್ವ ಅವರು 8 ಎಕರೆ ಭೂಮಿಯಲ್ಲಿನ ಗೋವಿನಜೋಳ ಬೆಳೆದ ಮಳೆಯಿಂದ ಹಾಳಾಗಿದೆ. ತೇವಾಂಶ ಹೆಚ್ಚಾಗಿ ಬೆಳೆಗಳು ರೋಗಬಾಧೆಗೆ ತುತ್ತಾಗುತ್ತಿವೆ. ಕೆಲವೆಡೆ ಭತ್ತ ಬೆಳೆ ಹಾಳಾಗುತ್ತಿದೆ. ನಿರಂತರ ಮಳೆಯಿಂದಾಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ರೈತರು ಪರದಾಡುವಂತಾಗಿದೆ. ಪ್ರತಿ ಎಕರೆಗೆ 20 ಕ್ವಿಂಟಾಲ್​ನಂತೆ 160 ಕ್ವಿಂಟಾಲ್ ಗೋವಿನಜೋಳ ಬೆಳೆ ನಿರೀಕ್ಷಿಸಲಾಗಿತ್ತು. ಈಗ ಮಳೆಯಿಂದ ಬೆಳೆ ನೆಲಕಚ್ಚಿದೆ. ಅಧಿಕಾರಿಗಳು ಬೆಳೆ ಹಾನಿ ಪರಿಶೀಲಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋದಾತ ಶವವಾಗಿ ಪತ್ತೆ

    ನರಗುಂದ: ಮಲಪ್ರಭಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ತಾಲೂಕಿನ ಕೊಣ್ಣೂರ ಗ್ರಾಮದ ವೆಂಕನಗೌಡ (ಬಾಪುಗೌಡ) ರಾಮನಗೌಡ ಸಾಲಿಗೌಡ್ರ (40) ಅವರ ಶವ 3 ದಿನಗಳ ಕಾರ್ಯಾಚರಣೆ ಬಳಿಕ ಬುಧವಾರ ಪತ್ತೆಯಾಗಿದೆ. ಮೃತ ವೆಂಕನಗೌಡ ಸಾಲಿಗೌಡ್ರ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಇವರು ಭಾನುವಾರ ಮಧ್ಯಾಹ್ನ 1ರ ಸುಮಾರಿಗೆ ಮಲಪ್ರಭಾ ನದಿ ಪಕ್ಕದ ತಮ್ಮ ಹೊಲಕ್ಕೆ ತೆಂಗಿನಕಾಯಿ ತುಂಬಿದ ಚೀಲಗಳನ್ನು ತರಲು ಹೋಗಿದ್ದರು. ಆಗ ನದಿಯಲ್ಲಿ ಅಷ್ಟೊಂದು ನೀರು ಹರಿಯುತ್ತಿರಲಿಲ್ಲ. ಆದರೆ, ಶನಿವಾರ ರಾತ್ರಿಯಿಡೀ ಸುರಿದ ಮಳೆ, ಜಲಾಶಯದಿಂದ ಹರಿಬಿಟ್ಟ ನೀರಿನಿಂದ ಮಾರ್ಗಮಧ್ಯದ ಸೇತುವೆ ತುಂಬಿ ಹರಿಯುತ್ತಿತ್ತು. ಸೇತುವೆ ದಾಟುವಾಗ ಕಾಲು ಜಾರಿಬಿದ್ದು ಕೊಚ್ಚಿಹೋಗಿದ್ದರು. 2 ದಿನಗಳಿಂದ ನರಗುಂದ, ಬಾದಾಮಿ ತಾಲೂಕಾಡಳಿತ ಅಧಿಕಾರಿಗಳು, ಸಿಬ್ಬಂದಿ ಸ್ಥಳೀಯರೊಂದಿಗೆ ಹುಡುಕಾಟ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಕೊಣ್ಣೂರಿನ ಖ್ಯಾತ ಈಜು ಪಟುಗಳಾದ ಸಯ್ಯದ್ ನದಾಫ್, ಮಹೆಬೂಬ್ ನದಾಫ್, ಹಸನ್​ಸಾಬ್ ನದಾಫ್ ಅವರು ಬುಧವಾರ ಮತ್ತೆ ಹುಡುಕಾಡಿದಾಗ ತಾಲೂಕಿನ ಬೂದಿಹಾಳದ ಬ್ಯಾಳಿ ಅವರ ಜಮೀನಿನ ಪಕ್ಕದ ಜಾಲಿ ಕಂಟಿಗಳಲ್ಲಿ ಶವ ಪತ್ತೆಯಾಗಿದೆ. ಮೃತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ ಮೇಲೆ ಬಾಗಲಕೋಟೆ ಅಗ್ನಿಶಾಮಕ ಸಿಬ್ಬಂದಿ ಶವ ಹೊರಗೆ ತೆಗೆದಿದ್ದಾರೆ. ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ದುರ್ನಾತ ಬೀರುತ್ತಿತ್ತು. ಬಾದಾಮಿ ತಹಸೀಲ್ದಾರ್ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಿ ರಾತ್ರಿಯೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts