More

    ಮಳೆಗಾಗಿ ಮುಗಿಲಿನತ್ತ ರೈತರ ಚಿತ್ತ

    ರೋಣ: ಅಕಾಲಿಕ ಮಳೆಗೆ ಹೆಸರು ಬೀಜ ಬಿತ್ತನೆ ಮಾಡಿದ ರೈತರು ಮಳೆಗಾಗಿ ಮುಗಿಲಿನತ್ತ ಚಿತ್ತ ನೆಟ್ಟಿದ್ದಾರೆ. ಎರಡು ವಾರಗಳ ಹಿಂದೆ ಮಳೆಯಾಗಿದ್ದರಿಂದ ಹೆಸರು ಕಾಳು ಬಿತ್ತನೆ ಮಾಡಿದ್ದು, ಬೀಜ ಮೊಳಕೆಯೊಡೆದು ಮೇಲೆದ್ದಿದೆ. ಆದರೆ, ಸದ್ಯ ತೇವಾಂಶದ ಕೊರತೆಯಿಂದ ಬೆಳೆಯೆಲ್ಲ ಬಾಡುವ ಹಂತದಲ್ಲಿದೆ.

    ಹೆಸರು ಬೀಜ ಬಿತ್ತನೆಗೆ ರೈತರು ಅವಸರ ಮಾಡಬಾರದು, ಮುಂದೆ ಮಳೆಯಾಗದಿದ್ದರೆ ತೊಂದರೆ ಎದುರಾಗುತ್ತದೆ. ರೋಹಿಣಿ ಮಳೆಗೆ ಮುಂಗಾರು ಬಿತ್ತನೆ ಮಾಡಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ರೈತರಿಗೆ ಸೂಚನೆ ನೀಡಿದ್ದರು. ಆದರೆ, ಅವಧಿಗಿಂತ ಮೊದಲೇ ಹೆಸರು ಬಿತ್ತನೆ ಮಾಡಿದರೆ ಮೂರು ತಿಂಗಳಲ್ಲಿ ಅದು ಕಟಾವಿಗೆ ಬರುತ್ತದೆ. ನಂತರ ಬಿಳಿಜೋಳ, ಕಡಲೆ, ಗೋದಿ, ಸಜ್ಜೆ, ಕುಸುಬೆ ಸೇರಿ ಮತ್ತಿತರ ಹಿಂಗಾರು ಬೆಳೆ ಬಿತ್ತನೆ ಮಾಡುವ ಮೂಲಕ ಎರಡನೇ ಬೆಳೆ ಪಡೆದುಕೊಳ್ಳಬಹುದು ಎನ್ನುವುದು ರೈತರ ಲೆಕ್ಕಾಚಾರವಾಗಿತ್ತು.

    ಬಿತ್ತನೆಗೆ ಅಗತ್ಯವಾಗುವಷ್ಟು ಭೂಮಿ ಹಸಿಯಾಗಿದ್ದರಿಂದ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಕೃತಿಕಾ ಮಳೆಗೆ ಬಿತ್ತನೆಯಾಗಿರುವ ಹೆಸರು ಈಗಾಗಲೇ ಎರಡು ಎಲೆಗಳದ್ದಾಗಿದೆ. ಬಿತ್ತನೆಯ ಬಳಿಕ ಒಮ್ಮೆಯೂ ಮಳೆಯಾಗಿಲ್ಲ. ಬಿಸಿಲಿನ ತಾಪ ಹೆಚ್ಚುತ್ತಿದೆ. ಮೋಡವಾಗುತ್ತಿದೆಯಾದರೂ ಮಳೆಯ ಸುಳಿವಿಲ್ಲದಿರುವುದು ಹೆಸರು ಬಿತ್ತನೆ ಮಾಡಿದ ರೈತರನ್ನು ಚಿಂತೆಗೀಡು ಮಾಡಿದೆ.

    ಕರೊನಾ ಸಂಕಷ್ಟದ ನಡುವೆಯೂ ರೈತರು ಬೀಜ, ಗೊಬ್ಬರ, ಬಿತ್ತನೆ ಖರ್ಚು ಸೇರಿ ಸಾವಿರಾರು ರೂ. ವ್ಯಯಿಸಿ ಹೆಸರು ಬಿತ್ತನೆ ಮಾಡಿದ್ದಾರೆ. ಎರಡ್ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ರೈತರು ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ.

    | ಪುಟ್ಟಪ್ಪ ನವಲಗುಂದ, ರೋಣ ರೈತ

    ಬಿತ್ತನೆ ಮಾಡಿರುವ ಹೆಸರು ಚಿಗುರೊಡೆದಿದ್ದು, ಅದನ್ನು ತಿನ್ನಲು ಚಿಗರಿಗಳ ಹಾವಳಿ ಹೆಚ್ಚಾಗಿದೆ. ಸಂಜೆ ಮತ್ತು ನಸುಕಿನಜಾವ ಹಿಂಡುಹಿಂಡಾಗಿ ದಾಳಿ ಇಡುವ ಚಿಗರಿಗಳು ಇಡೀ ಬೆಳೆ ತಿಂದು ಹೋಗುತ್ತಿರುವುದು ಮತ್ತೊಂದು ಚಿಂತೆಗೆ ಕಾರಣವಾಗಿದೆ.

    | ಮಲ್ಲಣ್ಣ ಗಡಗಿ, ರೈತ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts