More

    ಮಲ್ಟಿಪಲ್ ಮೈಲೋಮಾ ರೋಗಿಗೆ ಯಶಸ್ವಿ ಚಿಕಿತ್ಸೆ, ಎಚ್​ಸಿಜಿ- ಸುಚಿರಾಯು ಆಸ್ಪತ್ರೆಯಿಂದ ಅಪರೂಪ ಸಾಧನೆ

    ಹುಬ್ಬಳ್ಳಿ: ಇಲ್ಲಿಯ ಎಚ್​ಸಿಜಿ ಎನ್​ಎಂಆರ್ ಕ್ಯಾನ್ಸರ್ ಸೆಂಟರ್ ಹಾಗೂ ಸುಚಿರಾಯು ಆಸ್ಪತ್ರೆಯ ವೈದ್ಯರು ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಹಿಳೆಗೆ ಹೊಸ ವೈದ್ಯಕೀಯ ವಿಧಾನದ ಮೂಲಕ ಚಿಕಿತ್ಸೆ ನೀಡಿ ಗುಣಮುಖ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಚ್​ಸಿಜಿ ಆಸ್ಪತ್ರೆ ಉತ್ತರ ಕರ್ನಾಟಕ ಮುಖ್ಯಸ್ಥ ಡಾ. ಜೈಕಿಶನ್ ಅವರು, ಅತ್ಯಂತ ಕ್ಲೀಷ್ಟಕರವಾಗಿದ್ದ ಹಾಗೂ ಬೃಹನ್ ನಗರಗಳಲ್ಲಿ ಮಾತ್ರ ಸಿಗುತ್ತಿದ್ದ ಈ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳನ್ನು ಇಲ್ಲಿಯೇ ನಿರ್ಮಾಣ ಮಾಡಿಕೊಂಡು 40 ವರ್ಷದ ಮಹಿಳೆಗೆ ವೈದ್ಯಕೀಯ ಪದ್ಧತಿ ಮೂಲಕ ರೋಗ ಗುಣಪಡಿಸಲಾಗಿದೆ. ಮಲ್ಟಿಪಲ್ ಮೈಲೋಮಾ ಎಂಬ ಬಿಳಿ ರಕ್ತ ಕಣದ ಕ್ಯಾನ್ಸರ್ ಇದಾಗಿದ್ದು, ಕಾಯಿಲೆ ಕಂಡು ಬಂದ ಕೂಡಲೇ ಇಂಡಕ್ಷನ್ ಕೀಮೋಥೆರಪಿಗೆ ಒಳಪಡಿಸಲಾಯಿತು. ರೋಗಿಯ ದೇಹ ಚಿಕಿತ್ಸೆಗೆ ಸ್ಪಂದಿಸಲು ಆರಂಭಿಸಿದ ಮೇಲೆ ಸುಧಾರಿತ ಬಿಎಂಟಿ ವಿಧಾನವನ್ನು ಬಳಸಿ ಯಶಸ್ವಿ ಚಿಕಿತ್ಸೆ ನೀಡಲಾಯಿತು ಎಂದರು.

    ಎಚ್​ಸಿಜಿ ಆಸ್ಪತ್ರೆಯ ಹೆಮಟಾಲಜಿ ಮತ್ತು ಅಸ್ಥಿಮಜ್ಜೆ ಕಸಿ ವಿಭಾಗದ ಮುಖ್ಯಸ್ಥ ಡಾ. ಸಚಿನ್ ಜಾಧವ್ ಮತ್ತು ವೈದ್ಯಕೀಯ ಆಂಕಾಲಜಿಸ್ಟ್ ವಿಭಾಗದ ತಜ್ಞ ಡಾ. ವಿಶಾಲ್ ಕುಲಕರ್ಣಿ ನೇತೃತ್ವದ ವೈದ್ಯರ ತಂಡ ಈ ಚಿಕಿತ್ಸೆ ನಡೆಸಿದೆ.

    ಕೆಳ ಬೆನ್ನು ನೋವಿನಿಂದ ಬಳಲುತ್ತಿದ್ದ ಈ ಮಹಿಳೆಯ ತಪಾಸಣೆ ನಡೆಸಿದಾಗ ಕ್ಯಾನ್ಸರ್​ನ ಎರಡನೇ ಹಂತ ಇರುವುದು ಕಂಡು ಬಂತು. ಅತ್ಯಂತ ಆಧುನಿಕವಾದ ವಿಧಾನದ ಮೂಲಕ ಚಿಕಿತ್ಸೆ ನೀಡಲಾಯಿತು. ಆಟೊಲೋಗಸ್ ಸ್ಟೆಮ್ೆಲ್ ಟ್ರಾನ್ಸಪ್ಲಾಂಟೇಶನ್ ಎಂದು ಕರೆಯಲ್ಪಡುವ ಬಿಎಂಟಿ ವಿಧಾನ ಬಳಸಲಾಗಿದೆ. ಇದು ಮೂಳೆ ಮಜ್ಜೆ ಕಸಿ ವಿಧಾನ. ರೋಗಿಯ ದೇಹದಿಂದಲೇ ಕಾಂಡಕೋಶಗಳನ್ನು ಪಡೆದು ಯಶಸ್ವಿಯಾಗಿ ಬಾಧಿತ ಬೆನ್ನುಮೂಳೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಡಾ. ಸಚಿನ್ ಜಾಧವ್ ತಿಳಿಸಿದರು.

    ರೋಗಿಯು ಇದೀಗ ಆರಾಮವಾಗಿದ್ದು, ಇನ್ನೊಂದು ತಿಂಗಳಲ್ಲಿ ಸಾಮಾನ್ಯ ಜೀವನ ನಡೆಸಬಹುದು. ಸಾಮಾನ್ಯವಾಗಿ ಬೆನ್ನು ನೋವು, ಮೂಳೆ ಮುರಿತ ಇತ್ಯಾದಿಗಳು ಈ ಕಾಯಿಲೆಯ ಲಕ್ಷಣಗಳಾಗಿದ್ದು, ತಪಾಸಣೆ ನಡೆಸಿದರೆ ಈ ರೋಗ ಪತ್ತೆ ಮಾಡಬಹುದು ಎಂದು ವೈದ್ಯರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts