More

    ಮರೀಚಿಕೆಯಾಯಿತೇ ಸರ್ಕಾರಿ ಮೆಡಿಕಲ್ ಕಾಲೇಜ್ ಕ್ಷಣ?

    ವಿಜಯಪುರ: ರಾಜ್ಯದ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಪ್ರಾರಂಭಿಸಬೇಕೆಂಬ ಭಾರತ ಸರ್ಕಾರದ ನೀತಿ ಜಿಲ್ಲೆಯ ಪಾಲಿಗೆ ನೀತಿಯಾಗಿಯೇ ಉಳಿಯುವ ಅನುಮಾನ ಶುರುವಾಗಿದೆ !

    ಹೌದು, ಪ್ರಸ್ತುತ ವರ್ಷದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿಲ್ಲವೆಂಬ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ ಹೇಳಿಕೆ ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಚುಕ್ಕೆ ಗುರುತಿನ ಪ್ರಶ್ನೆಗೆ ಡಾ.ಶರಣಪ್ರಕಾಶ ಪಾಟೀಲ ಪ್ರತಿಕ್ರಿಯೆ ನೀಡಿದ್ದು, ಅನುದಾನದ ಲಭ್ಯತೆ ಆಧರಿಸಿ ವೈದ್ಯಕೀಯ ಕಾಲೇಜ್ ಪ್ರಾರಂಭಿಸುವುದಾಗಿಯೂ ಸದ್ಯಕ್ಕೆ ಆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲವೆಂದು ಹೇಳಿದ್ದಾರೆ.

    ವೈದ್ಯಕೀಯ ಶಿಕ್ಷಣ ಸಚಿವರ ಈ ಪ್ರತಿಕ್ರಿಯೆ ಗಮನಿಸಿದರೆ ಜಿಲ್ಲೆಯ ಪಾಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಮರೀಚಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ಹಿಂದೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ಲಾಬಿ ಇರಬಹುದಾ? ಎಂಬ ಅನುಮಾನವೂ ಶುರುವಾಗಿದೆ.

    ಪ್ರಸ್ತುತ ರಾಜ್ಯದಲ್ಲಿ ಒಟ್ಟು 24 ಸರ್ಕಾರಿ ವೈದ್ಯಕೀಯ ಕಾಲೇಜ್‌ಗಳಿದ್ದು, 46 ಖಾಸಗಿ ವೈದ್ಯಕೀಯ ಕಾಲೇಜ್‌ಗಳಿವೆ. ಕೇಂದ್ರದ ನೀತಿ ಆಯೋಗದನ್ವಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಿರದ ಜಿಲ್ಲೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ದಲ್ಲಿ ಹೊಸ ವೈದ್ಯಕೀಯ ಕಾಲೇಜ್ ಪ್ರಾರಂಭ ಮಾಡುವ ಬಗ್ಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಿರದ ದಾವಣಗೆರೆ, ಉಡುಪಿ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಾಗಲಕೋಟೆ, ದಕ್ಷಿಣ ಕನ್ನಡ, ವಿಜಯನಗರ ಮತ್ತು ವಿಜಯಪುರದಲ್ಲಿ ಅನುದಾನದ ಲಭ್ಯತೆ ಆಧರಿಸಿ ಹಂತಹಂತವಾಗಿ ವೈದ್ಯಕೀಯ ಕಾಲೇಜ್ ಆರಂಭಿಸಲು ತೀರ್ಮಾನಿಸಲಾಗಿತ್ತು. ಪ್ರಾಥಮಿಕವಾಗಿ ದಾವಣಗೆರೆ, ಉಡುಪಿ, ಕೋಲಾರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜ್ ಪ್ರಾರಂಭಿಸುವ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಮಾತ್ರವಲ್ಲ, ಐಡೆಕ್ (ಐಡಿಇಸಿಕೆ) ಸಂಸ್ಥೆ ಸಹಯೋಗದೊಂದಿಗೆ ವಿಸ್ತೃತ ಯೋಜನಾ ವರದಿ ಕೂಡ ತಯಾರಿಸಲಾಗಿತ್ತು. ಆದರೆ, ಈವರೆಗೂ ಕಾಲೇಜ್ ಸ್ಥಾಪನೆಯಾಗಿಲ್ಲ.

    ರಾಜ್ಯದ ಮಾದರಿ ಆಸ್ಪತ್ರೆಯ ಖ್ಯಾತಿಯ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಬೇಕಾದ ಎಲ್ಲ ಸೌಕರ್ಯಗಳಿವೆ. ಸದ್ಯ 148 ಎಕರೆ ಜಾಗ ಇದೆ. ಕನಿಷ್ಠ 450 ಬೆಡ್ ಇರಬೇಕಿದ್ದು, ಅದಕ್ಕಿಂತಲೂ ಹೆಚ್ಚು ಅಂದರೆ 626 ಬೆಡ್‌ಗಳ ವ್ಯವಸ್ಥೆ ಇದೆ. ಅಲ್ಲದೆ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ-200, ಟ್ರೊಮಾ ಕೇರ್ ಸೆಂಟರ್-50 ಬೆಡ್, ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಬ್ಲಾಕ್ -250 ಬೆಡ್ ಮಂಜೂರಾಗಿದ್ದು, ನಿರೀಕ್ಷೆ ಮೀರಿದ ವ್ಯವಸ್ಥೆ ಇದೆ. ಇನ್ನು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಏಳು ವಿವಿಧ ವಿಭಾಗಗಳಿವೆ, ನರ್ಸಿಂಗ್ ಕಾಲೇಜ್ (ಜನರಲ್ ಮತ್ತು ಬಿಎಸ್‌ಸಿ) ಇದೆ. ತಕ್ಷಣಕ್ಕೆ ಕಾಲೇಜ್ ಆರಂಭಿಸಿದರೂ ತರಗತಿ ನಡೆಸಲು ಬೇಕಾದ ಕೊಠಡಿಗಳ ವ್ಯವಸ್ಥೆ ಇದೆ.ಪ್ರತಿ ದಿನ 1000ದಿಂದ 1500 ಒಪಿಡಿ ಹಾಗೂ 400 ಐಪಿಡಿ ಪ್ರಮಾಣ ಇದ್ದು, ಅಂಕಾಲಾಜಿ ಕೂಡ ಬರಲಿದೆ. ಸಿಟಿ ಸ್ಯ್ಕಾನ್, ಎಂಆರ್ ಐ, ಡಯಾಲಿಸಿಸ್ ಘಟಕ ಇದೆ. ಸುಸಜ್ಜಿತ ಪ್ರಯೋಗಾಲಯ ಇದೆ. ರಸ್ತೆ, ನೀರು ಸಂಪರ್ಕ ವ್ಯವಸ್ಥೆ ಹೀಗೆ ಎಲ್ಲ ಸೌಲಭ್ಯಗಳಿವೆ. ಆದರೆ, ಕಾಲೇಜ್ ಮಂಜೂರಾತಿ ಮಾತ್ರ ಬಾಕಿ ಇದೆ.

    ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ಅನುದಾನ ಮೀಸಲಿಡುವ ನಿರೀಕ್ಷೆ ಇತ್ತು. ಆದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಭಾಗದ ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ಮುತುವರ್ಜಿ ವಹಿಸಿದಂತೆ ಈ ಭಾಗದ ಜನಪ್ರತಿನಿಧಿಗಳು ಮುತುವರ್ಜಿ ವಹಿಸದಿರುವುದು ಬಜೆಟ್‌ನಲ್ಲಿ ಗೋಚರಿಸಿತು.

    ಹೊಸ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಅಂದಾಜು 610.00 ಕೋಟಿ ರೂ.ಅನಾವರ್ತಕ ವೆಚ್ಚ ಹಾಗೂ ವಾರ್ಷಿಕ 60 ಕೋಟಿ ರೂ.ಆವರ್ತಕ ವೆಚ್ಚದ ಅವಶ್ಯಕತೆ ಇದೆ. ಅದರಂತೆ ಅನುದಾನದ ಲಭ್ಯತೆ ಆಧರಿಸಿ ಕಾಲೇಜು ಆರಂಭಿಸಲಾಗುವುದು. ಪ್ರಸ್ತುತ ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ.
    ಡಾ.ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts