More

    ಮರಳಿ ಸಿಕ್ಕಿತು 30 ತೊಲ ಚಿನ್ನಾಭರಣ!

    ಗದಗ: ಒಂದಲ್ಲ, ಎರಡಲ್ಲ…. ಬರೋಬ್ಬರಿ 30 ತೊಲ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಅಪರೂಪದ ಪ್ರಕರಣ ನಗರದ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಜರುಗಿದೆ. ರೈಲ್ವೆ ಪೊಲೀಸ್ ಇಲಾಖೆ ಸಹಕಾರಕ್ಕೆ ಜಿಲ್ಲೆಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ಶನಿವಾರ ಮಧ್ಯಾಹ್ನ 1.30 ಗಂಟೆಗೆ ಗದಗದಿಂದ ಮುಂಬೈಗೆ ತೆರಳುವ ರೈಲಿನ ಮೂಲಕ ಪ್ರಯಾಣಿಸಲು ಗದಗನ ರಾಜೀವಗಾಂಧಿ ನಗರದ ನಿವಾಸಿಗಳಾದ ಮೆಹಬೂಬಸಾಬ ಫಕ್ರುಸಾಬ ಕರ್ನಾಚಿ ಮತ್ತವರ ನಾಲ್ವರು ಸಂಬಂಧಿಕರು ಹತ್ತಿದ್ದರು. ಅವರಿದ್ದ ಬೋಗಿಯಲ್ಲಿ ವಿಜಯಪುರ ಆದರ್ಶನಗರದ ಚನ್ನಬಸಪ್ಪ ಶಿವಪ್ಪ ಇಂಡಿ ಎಂಬುವರೂ ತೆರಳುತ್ತಿದ್ದರು. ಆದರೆ, ಮೆಹಬೂಬ ಕರ್ನಾಚಿ ಅವರ ರೈಲು ಟಿಕೆಟ್​ನಲ್ಲಿ ಮಾರ್ಚ್ ತಿಂಗಳ ಬದಲು ಜೂನ್ ತಿಂಗಳು ಎಂದು ನಮೂದಿಸಲಾಗಿತ್ತು. ಇದನ್ನು ಗಮನಿಸಿದ ಮೆಹಬೂಬಸಾಬ ಕರ್ನಾಚಿ ತಿಂಗಳನ್ನು ತಪ್ಪಾಗಿ ಬರೆದಿದ್ದಾರೆ ಎಂದು ವಿಚಾರಿಸಲು ರೈಲಿನಿಂದ ಕೆಳಗೆ ಇಳಿದಿದ್ದಾರೆ. ಉಳಿದ ನಾಲ್ವರು ಸಹ ಬೋಗಿಯಿಂದ ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ ಮೆಹಬೂಬಸಾಬ ಕರ್ನಾಚಿ ಅವರ ಪುತ್ರ ಮಹ್ಮದ್ ಮೆಹಫೂಜ್ ಕರ್ನಾಚಿ ತಮ್ಮ ಬ್ಯಾಗ್ ಎಂದು ತಿಳಿದುಕೊಂಡು ಚಿನ್ನಾಭರಣಗಳಿದ್ದ ಚನ್ನಬಸಪ್ಪ ಇಂಡಿ ಅವರ ಬ್ಯಾಗ್ ತೆಗೆದುಕೊಂಡ ಕೆಳಗೆ ಇಳಿದಿದ್ದಾನೆ. ಬೇರೆಯವರ ಬ್ಯಾಗ್ ತೆಗೆದುಕೊಂಡು ಬಂದಿದ್ದು ಗಮನಕ್ಕೆ ಬಂದ ಕೂಡಲೇ ಕರ್ನಾಚಿ ಕುಟುಂಬದವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಬ್ಯಾಗ್ ಒಪ್ಪಿಸಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ 30 ತೊಲ ಚಿನ್ನಾಭರಣ ಇರುವುದು ಗೊತ್ತಾಗಿದೆ ಎಂದು ರೈಲ್ವೆ ಸಿಪಿಐ ಡಿ.ವಿ. ಪಾಟೀಲ ವಿವರಿಸಿದರು.

    ಬ್ಯಾಗ್​ನಲ್ಲಿ ಚಿನ್ನಾಭರಣ ಸಿಕ್ಕಿರುವುದು ಗೊತ್ತಾದ ಕೂಡಲೇ ಪೊಲೀಸರು ಬ್ಯಾಗ್ ಕಳೆದುಕೊಂಡಿರುವ ಚನ್ನಬಸಪ್ಪ ಇಂಡಿ ಅವರನ್ನು ಸಂರ್ಪಸಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ ರೈಲು ಗದಗದಿಂದ ಐದು ಕಿಮೀ ದೂರ ತೆರಳಿದ ಮೇಲೆ ಚನ್ನಬಸಪ್ಪ ಅವರಿಗೆ ತಮ್ಮ ಬ್ಯಾಗ್ ಕಾಣಿಸದಿರುವುದು ಗಮನಕ್ಕೆ ಬಂದು ಗಾಬರಿಗೊಂಡಿದ್ದಾರೆ. ಮರುಕ್ಷಣದಲ್ಲಿಯೇ ಪೊಲೀಸರು ಚನ್ನಬಸಪ್ಪ ಅವರನ್ನು ಸಂರ್ಪಸಿ ಬ್ಯಾಗ್ ಸಿಕ್ಕಿರುವ ಮಾಹಿತಿ ನೀಡಿದ್ದಾರೆ. ಚನ್ನಬಸಪ್ಪ ಅವರು ಗದಗ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಕಳೆದುಕೊಂಡಿದ್ದ ಚಿನ್ನಾಭರಣ ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ. ಬ್ಯಾಗ್ ಸಮೇತ ಚಿನ್ನಾಭರಣ ಮರಳಿಸಿದ ಸಂತೃಪ್ತ ಭಾವ ಕರ್ನಾಚಿ ಕುಟುಂಬದವರಲ್ಲಿ ಕಂಡುಬಂದಿತು.

    ಜೀವನಪೂರ್ತಿ ದುಡಿದು ಗಳಿಸಿದ ಚಿನ್ನಾಭರಣವನ್ನು ಮರಳಿ ಪಡೆದುಕೊಂಡ ಖುಷಿಯಾಗಿದೆ. ನನ್ನ ಪುತ್ರ ಜಿಲ್ಲಾಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಾನೆ. ಕಳ್ಳರ ಕಾಟದಿಂದ ಚಿನ್ನಾಭರಣ ಮನೆಯಲ್ಲಿಡುವುದು ಬೇಡ ಎಂದು ತಂದಿದ್ದೆ. ನಾಳೆ ಮೊಮ್ಮಗನ ಜನ್ಮದಿನ ಇರುವುದರಿಂದ ವಾಪಸ್ ವಿಜಯಪುರಕ್ಕೆ ತೆರಳುವ ಸಮಯದಲ್ಲಿ ಈ ಘಟನೆ ಜರುಗಿದೆ. ಚಿನ್ನಾಭರಣವುಳ್ಳ ಬ್ಯಾಗ್ ಸಿಕ್ಕಿದ್ದು ಅತ್ಯಂತ ಸಂತೋಷ ತಂದಿದೆ. ಪೊಲೀಸರಿಗೆ, ಬ್ಯಾಗ್ ಮರಳಿಸಿದ ಕುಟುಂಬಕ್ಕೆ ಚಿರಋಣಿ.
    |ಚನ್ನಬಸಪ್ಪ ಶಿವಪ್ಪ ಇಂಡಿ, ಆದರ್ಶನಗರ, ವಿಜಯಪುರ

    ಗದಗದಿಂದ ಮುಂಬೈಗೆ ತೆರಳುತ್ತಿದ್ದೆವು.ಆದರೆ. ರೈಲ್ವೆ ಟಿಕೆಟ್​ನಲ್ಲಿ ತಿಂಗಳು ಬದಲಾಗಿದ್ದರಿಂದ ವಿಚಾರಿಸಲು ರೈಲ್ವೆ ಕಚೇರಿಗೆ ತೆರಳಿದ್ದೆ. ಆಗ ರೈಲು ಹೊರಟಿತು. ಈ ಸಂದರ್ಭದಲ್ಲಿ ನಮ್ಮವರೆಲ್ಲರೂ ರೈಲಿನಿಂದ ಇಳಿದುಕೊಂಡರು. ಆಗ ನನ್ನ ಪುತ್ರ ಬೇರೆಯವರ ಬ್ಯಾಗ್ ತೆಗೆದುಕೊಂಡು ಇಳಿದಿದ್ದ. ಇದು ಗೊತ್ತಾದ ಕೂಡಲೇ ರೈಲ್ವೆ ಪೊಲೀಸರಿಗೆ ಬ್ಯಾಗ್ ಒಪ್ಪಿಸಿದೆವು. ಆದರೆ, ಈ ಬ್ಯಾಗ್​ನಲ್ಲಿ ಏನಿತ್ತು ಎಂಬುದು ನಮಗೆ ಗೊತ್ತಿರಲಿಲ್ಲ.
    | ಮೆಹಬೂಬಸಾಬ ಫಕ್ರುಸಾಬ ಕರ್ನಾಚಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts