More

    ಮನ್ನಂಗಿಯ 19 ವರ್ಷದ ಯುವತಿಗೆ ಪಾಸಿಟಿವ್

    ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ 19 ವರ್ಷದ ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿದೆ. ಇಬ್ಬರು ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 123 ಜನರಲ್ಲಿ ಸೋಂಕು ದೃಢಗೊಂಡಿದ್ದು, ಇದರಲ್ಲಿ 35ಜನರು ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 86ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಸವಣೂರ ತಾಲೂಕು ಮನ್ನಂಗಿ ಪ್ಲಾಟ್​ನಲ್ಲಿ ತಂದೆ, ತಾಯಿಯೊಂದಿಗೆ ವಾಸವಾಗಿದ್ದಳು. 7 ದಿನಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಸಂಬಂಧಿಕರ ಮದುವೆಗೆ ಹೋಗಿದ್ದಳು. ನಂತರ ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಜೂ. 26ರಂದು ಗಂಟಲ ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಜು. 2ರಂದು ಕರೊನಾ ಪಾಸಿಟಿವ್ ವರದಿ ಬಂದಿದೆ. ಮನ್ನಂಗಿ ಪ್ಲಾಟ್​ನಲ್ಲಿ ಸೋಂಕಿತ ಯುವತಿ ವಾಸಿಸುತ್ತಿದ್ದ ಮನೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಎಂದು ಘೊಷಿಸಲಾಗಿದೆ. ಮನ್ನಂಗಿ ಪ್ಲಾಟ್​ನ್ನು ಬಫರ್ ಜೋನ್ ಎಂದು ಪರಿವರ್ತಿಸಲಾಗಿದೆ. ಸವಣೂರ ತಹಸೀಲ್ದಾರ್​ನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮನ್ನಂಗಿ ಪ್ಲಾಟ್​ನ ಯುವತಿಗೆ ಸೋಂಕು ತಗುಲಿದ್ದರಿಂದ ಸವಣೂರ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇದರಲ್ಲಿ ಐವರು ಗುಣವಾಗಿದ್ದು, ಒಟ್ಟು 14 ಪ್ರಕರಣ ಸಕ್ರಿಯವಾಗಿವೆ.

    ಇಬ್ಬರು ಗುಣವಾಗಿ ಬಿಡುಗಡೆ: ಕರೊನಾ ಸೋಂಕಿನಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವಣೂರ ತಾಲೂಕಿನ ಕಾರಡಗಿ ಗ್ರಾಮದ 38 ವರ್ಷದ ಆಶಾ ಕಾರ್ಯಕರ್ತೆ ಹಾಗೂ ಶಿಗ್ಗಾಂವಿ ದೇಸಾಯಿ ಗಲ್ಲಿಯ 45 ವರ್ಷದ ಮಹಿಳೆ ಗುಣವಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

    ಹೆಡ್​ಕಾನ್ಸ್​ಟೇಬಲ್​ಗೂ ಸೋಂಕು?

    ಹಾವೇರಿ: ನಗರದ ಜಿಲ್ಲಾಸ್ಪತ್ರೆಯ ಪೊಲೀಸ್ ಹೊರಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್​ಕಾನ್ಸ್​ಟೇಬಲ್​ಗೂ ಕರೊನಾ ಪಾಸಿಟಿವ್ ಬಂದಿರುವ ಸುದ್ದಿ ಶುಕ್ರವಾರ ಹಬ್ಬಿದೆ.

    50 ವರ್ಷದ ಪೇದೆಗೆ ಕರೊನಾ ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟಿದೆ ಎನ್ನಲಾಗಿದೆ. ಸೋಂಕು ಶಂಕಿತ ಪೇದೆ ಠಾಣೆಗೆ ಆಗಮಿಸದೇ ಇದ್ದರಿಂದ ಪೊಲೀಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಜಿಲ್ಲಾಸ್ಪತ್ರೆ ಸಿಬ್ಬಂದಿಗೆ ಆತಂಕ ಎದುರಾಗಿದೆ. ಅಲ್ಲದೆ, ಹಾನಗಲ್ಲ ಹಾಗೂ ರಾಣೆಬೆನ್ನೂರ ತಾಲೂಕಿನಲ್ಲಿಯೂ ಕೆಲವರಿಗೆ ಶುಕ್ರವಾರ ಸೋಂಕು ದೃಢಪಟ್ಟಿರುವ ಮಾಹಿತಿಯಿದೆ. ಈ ಪ್ರಕರಣಗಳು ಶುಕ್ರವಾರದ ಆರೋಗ್ಯ ಇಲಾಖೆ ಬುಲೆಟಿನ್​ನಲ್ಲಿ ಪ್ರಕಟವಾಗಿಲ್ಲ. ಶನಿವಾರದ ಬುಲೆಟಿನ್​ನಲ್ಲಿ ಬರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

    ಸೀಲ್​ಡೌನ್ ಪ್ರದೇಶ ಪರಿಶೀಲನೆ

    ಗುತ್ತಲ: ಪಟ್ಟಣದ 1ನೇ ವಾರ್ಡ್ ವ್ಯಾಪ್ತಿಯ ಚಿದಂಬರ ನಗರದಲ್ಲಿನ ಕರೊನಾ ಸೋಂಕಿತ ಆಶಾ ಕಾರ್ಯಕರ್ತೆಯ ಮನೆಯ ಹತ್ತಿರದ ಸೀಲ್​ಡೌನ್ ಪ್ರದೇಶಕ್ಕೆ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ, ತಹಸೀಲ್ದಾರ್ ಶಂಕರ ರ್ಬಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ನಿತ್ಯದ ಆಹಾರ,ತರಕಾರಿ, ಹಾಲು ಹಾಗೂ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಶಂಕರ ರ್ಬಾ, ಉಚಿತವಾಗಿ ನೀಡುವುದನ್ನು ನೀಡುತ್ತೇವೆ. ಉಳಿದಂತೆ ಕೆಲವು ವಸ್ತುಗಳನ್ನು ತಾವೇ ಹಣ ನೀಡಿ ಪಡೆದುಕೊಳ್ಳಬೇಕಾಗುತ್ತದೆ. ಕೆಲ ದಿನಗಳವರೆಗೆ ಸಹಕರಿಸಿ ಎಂದು ಸ್ಥಳೀಯರಿಗೆ ಮನವಿ ಮಾಡಿದರು.

    ಸೋಂಕಿತ ಆಶಾ ಕಾರ್ಯಕರ್ತೆಯ ಮನೆಯಲ್ಲಿನ ಜಾನುವಾರುಗಳು ಹಾಗೂ ಸೋಂಕಿತಳ ಸಹೋದರನಿಗೆ ನಿತ್ಯದ ಆಹಾರ ಇಲ್ಲದೆ ಪರದಾಡುತ್ತಿರುವ ವಿಷಯ ಗೊತ್ತಾದ ತಕ್ಷಣ ಅಧಿಕಾರಿಗಳು ಕ್ವಾರಂಟೈನ್ ಸೆಂಟರ್​ನಲ್ಲಿ ವಾಸಿಸುವ ಬಗ್ಗೆ ರ್ಚಚಿಸಿದರು. ಆದರೆ, ಮನೆಯಲ್ಲಿ ಜಾನುವಾರುಗಳು ಇರುವ ಕಾರಣ ಸೋಂಕಿತಳ ಸಹೋದರ ಕ್ವಾರಂಟೈನ್ ಸೆಂಟರ್​ಗೆ ಹೋಗಲು ನಿರಾಕರಿದರು. ಜಾನುವಾರುಗಳಿಗೆ ಮೇವು ತಂದು ಕೊಡುವ ವ್ಯವಸ್ಥೆಯನ್ನು ಪ.ಪಂ. ಮುಖ್ಯಾಧಿಕಾರಿ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದರು.

    ಸಿಪಿಐ ಸಂತೋಷ ಪವಾರ, ಪಿಎಸ್​ಐ ಮಣ್ಣಣ್ಣನವರ, ಪ.ಪಂ. ಮುಖ್ಯಾಧಿಕಾರಿ ಏಸು ಬೆಂಗಳೂರ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಗ್ರಾಮ ಲೆಕ್ಕಿಗ ಫಕೀರೇಶ ರ್ಬಾ ಇತರರಿದ್ದರು.

    ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ: ಕೇವಲ 23 ಕುಟುಂಬಗಳು ವಾಸಿಸುವ ಪ್ರದೇಶವನ್ನು ಮಾತ್ರ ಸೀಲ್​ಡೌನ್ ಮಾಡಿದ್ದರೂ ಸೂಕ್ತ ಪೊಲೀಸ್ ನಿಯೋಜನೆ ಇಲ್ಲದ ಕಾರಣ ಈ ಪ್ರದೇಶದ ಜನರು ನಿರ್ಭಯವಾಗಿ ಪಟ್ಟಣದಲ್ಲಿ ಸಂಚಾರ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಪಟ್ಟಣದಲ್ಲಿನ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಹಾಗೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts