More

    ಮನೆ ಮನೆಗೆ ತಾಜಾ ತರಕಾರಿ ಪೂರೈಕೆ

    ರೋಣ: ಪಟ್ಟಣದ 20ನೇ ವಾರ್ಡ್​ನ ಕೃಷ್ಣಾಪೂರ ಗ್ರಾಮದಲ್ಲಿ ಕರೊನಾ ಪಾಸಿಟಿವ್ ಕೇಸ್ ದೃಢಪಟ್ಟ ಹಿನ್ನೆಲೆಯಲ್ಲಿ ತರಕಾರಿ ಟೆಂಡರ್ ಪ್ರಕಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಈ ಅನಿರೀಕ್ಷಿತ ಘಟನೆಯಿಂದ ವಿಚಲಿತನಾಗದ ರೈತನೊಬ್ಬ ತಮ್ಮ ತೋಟದಲ್ಲಿ ಬೆಳೆದ ಟೊಮ್ಯಾಟೊ ಹಾಗೂ ಬದನೆ ಕಾಯಿಯನ್ನು ವ್ಯರ್ಥ ಮಾಡದೆ ಅತ್ಯಂತ ಕಡಿಮೆ ದರದಲ್ಲಿ ಮನೆ ಮನೆಗೆ ಸರಬರಾಜು ಮಾಡುತ್ತಿದ್ದಾರೆ.

    ಪಟ್ಟಣದ ಪ್ರಗತಿಪರ ರೈತ ವಿರೂಪಾಕ್ಷಗೌಡ ಪಾಟೀಲ ಅವರು ತಮ್ಮ 10 ಎಕರೆ ತೋಟದಲ್ಲಿ ಬದನೆ ಹಾಗೂ ಟೊಮ್ಯಾಟೊ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಾಗಲೇ ಊರಲ್ಲಿ ಕರೊನಾ ಪಾಸಿಟಿವ್ ಕೇಸ್ ಕಂಡುಬಂದಿದ್ದು ಲಾಕ್​ಡೌನ್ ಮತ್ತಷ್ಟು ಬಿಗಿಯಾಗಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ತಮ್ಮ ಟ್ರ್ಯಾಕ್ಟರ್ ಮೂಲಕ ಬಡಾವಣೆಯ ಮನೆ ಮನೆಗೆ ತೆರಳಿ ಕೆ.ಜಿ. ತರಕಾರಿಗೆ 10 ರೂ.ಗಳಂತೆ ಮಾರಾಟ ಮಾಡುತ್ತಿದ್ದಾರೆ.

    ಸಂಕಷ್ಟದಲ್ಲೂ ಧೈರ್ಯ ಹೇಳುವ ರೈತ: ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ರೈತ ವಿರೂಪಾಕ್ಷಗೌಡ, ‘ಏಕಾಏಕಿ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರಿಂದ ತೋಟದಲ್ಲಿ ಬೆಳೆದು ನಿಂತ ಬದನೆ, ಟೊಮ್ಯಾಟೊವನ್ನು ವ್ಯರ್ಥ ಮಾಡುವ ಬದಲು, ನಮ್ಮ ತೋಟದಲ್ಲಿ ಕೆಲಸ ಮಾಡುವ ರೈತ ಕಾರ್ವಿುಕರ ಮೂಲಕ ಬೆಳಗ್ಗೆ ಹಾಗೂ ಸಂಜೆ ಹರಿದು ಕಡಿಮೆ ಬೆಲೆಗೆ ಪಟ್ಟಣದ ಪ್ರತಿ ಬಡಾವಣೆಯ ಮನೆಗಳಿಗೆ ತಾಜಾ ತರಕಾರಿ ತಲುಪಿಸುತ್ತಿದ್ದೇನೆ. ಕೆಲವೊಮ್ಮ ಇಂತಹ ಸಂದರ್ಭಗಳು ಬರುತ್ತವೆ, ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ಯಾವುದೇ ಕಾರಣಕ್ಕೂ ಬೆಳೆ ನಷ್ಟ ಹಾಗೂ ಬೆಳೆದ ಬೆಳೆಯನ್ನು ಮಣ್ಣು ಅಥವಾ ತಿಪ್ಪೆಪಾಲು ಮಾಡಬಾರದು. ರೈತರು ಅದನ್ನು ಸೂಕ್ತ ದರದಲ್ಲಿ ಸಾರ್ವಜನಿಕರಿಗೆ ವಿತರಿಸಿದರೆ ರೈತ ಕಷ್ಟಪಟ್ಟು ಬೆಳೆದಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.

    ಲಾಕ್​ಡೌನ್ ಆದದ್ದೇ ತಡ ಬದನೆಕಾಯಿ ಬೆಲೆ ಪ್ರತಿ ಕಿಲೋಗೆ 40 ರೂ, ಟೊಮ್ಯಾಟೊ ಬೆಲೆ ಕಿಲೋಗೆ 50 ರೂ. ಆಗಿತ್ತು. ಅನಿವಾರ್ಯವಾಗಿ ಕೊಳ್ಳಲೇಬೇಕಾಗಿತ್ತು. ಈಗ ತಾಜಾ ಬದನೆಕಾಯಿ, ಟೊಮ್ಯಾಟೊ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದೆ. ಇದರಿಂದಾಗಿ ಕೊಂಚ ನೆಮ್ಮದಿ ಎನಿಸಿದೆ.
    | ಸುವರ್ಣಾ ಬಡಿಗೇರ ಕಲ್ಯಾಣ ನಗರದ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts