More

    ಮನೆ ಮನೆಗೆ ತಲುಪದ ತರಕಾರಿ, ದಿನಸಿ

    ವಿಜಯವಾಣಿ ಟೀಮ್ ಉತ್ತರ ಕನ್ನಡ

    ಜಿಲ್ಲೆಯ ಕಾರವಾರ, ಶಿರಸಿ, ದಾಂಡೇಲಿ ನಗರಸಭೆ, ಹಳಿಯಾಳ ಪುರಸಭೆ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ ಪಟ್ಟಣ ಪಂಚಾಯಿತಿ ಪ್ರದೇಶಗಳನ್ನು, 57 ಗ್ರಾಪಂಗಳನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿತ್ತು. ಬಹುತೇಕ ಗ್ರಾಪಂಗಳಲ್ಲಿ ದಿನಬಳಕೆ ವಸ್ತುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಕೆಲ ಶಹರ ಪ್ರದೇಶದಲ್ಲೇ ಹಲವೆಡೆ ವಸ್ತುಗಳು ತಲುಪದೆ ಇರುವುದು ಕಂಡುಬಂದಿದೆ. ಹಳಿಯಾಳ, ದಾಂಡೇಲಿ ಶಹರಗಳಲ್ಲಿ ಸಾಕಷ್ಟು ಸಮಸ್ಯೆ ಕಂಡುಬಂದಿದೆ. ಕಾರವಾರ, ಶಿರಸಿ, ಸಿದ್ದಾಪುರ ಭಾಗದಲ್ಲಿ ವ್ಯವಸ್ಥೆ ಭಾಗಶಃ ಸಮರ್ಪಕವಾಗಿದೆ. ಯಲ್ಲಾಪುರ ಹಾಗೂ ಮುಂಡಗೋಡಿನಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿರುವುದರಿಂದ ಅಂಥ ಸಮಸ್ಯೆಯಾಗಿಲ್ಲ.

    ಬಡವರಿಗೆ ಕಷ್ಟ: ಕಾರವಾರದಲ್ಲಿ ತರಕಾರಿ, ಹಣ್ಣುಗಳ ಮಾರಾಟಗಾರರು ತಳ್ಳುಗಾಡಿ ಹಾಗೂ ವಾಹನಗಳಲ್ಲಿ ಎಲ್ಲ ಪ್ರಮುಖ ರಸ್ತೆಗಳಲ್ಲಿ ಓಡಾಟ ನಡೆಸಿದ್ದಾರೆ. ದಿನಸಿ ಸಾಮಗ್ರಿಗಳ ವಾಹನದ ಓಡಾಟದ ಸಂಖ್ಯೆ ಅತಿ ಕಡಿಮೆ ಇದೆ. ಹೆಚ್ಚಿನ ಕಿರಾಣಿ ಅಂಗಡಿಕಾರರು ತಮ್ಮ ಮೊಬೈಲ್​ಗೆ ಕರೆ ಮಾಡಿದರೆ ಮನೆಗಳಿಗೇ ದಿನಸಿ ಮುಟ್ಟಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ಕನಿಷ್ಠ 500 ರೂ.ಗಿಂತ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿದಲ್ಲಿ ಮಾತ್ರ ಮನೆಗಳಿಗೆ ದಿನಸಿ ತಲುಪಿಸುತ್ತೇವೆ ಎನ್ನುತ್ತಿದ್ದಾರೆ. ಸ್ಥಿತಿವಂತರು ಹಾಗೆ ಅಗತ್ಯ ವಸ್ತು ಪಡೆಯುತ್ತಿದ್ದಾರೆ. ಒಂದೇ ಬಾರಿ ಅಷ್ಟು ಸಾಮಗ್ರಿ ಖರೀದಿಸಲು ಸಾಮರ್ಥ್ಯ ಇಲ್ಲದ ಬಡವರು ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ಬೆಲೆಯೂ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಸಿಕ್ಕಿತೋ ಎಂದು ಒಮ್ಮೆ ನೋಡಿ ಬರೋಣ ಎಂದು ಹೊರ ಹೋಗುತ್ತಿದ್ದಾರೆ. ‘ಕಳೆದ ವರ್ಷ ಲಾಕ್​ಡೌನ್​ನಲ್ಲಿ ಮನೆ ಮನೆಗೆ ಆಹಾರ, ತರಕಾರಿ, ಹಣ್ಣು, ಮೀನಿನ ವ್ಯಾಪಾರ ವ್ಯವಸ್ಥಿತವಾಗಿತ್ತು. ಆದರೆ, ಈ ಬಾರಿ ಅಷ್ಟು ವ್ಯವಸ್ಥಿತವಾಗಿಲ್ಲ. ಆದರೂ ಆಗೊಮ್ಮೆ, ಈಗೊಮ್ಮೆ ಬರುವ ಗಾಡಿಗಳಲ್ಲೇ ಖರೀದಿ ಮಾಡಿ ಜನ ದಿನದೂಡುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆ ಸದಸ್ಯ ಸಂದೀಪ ತಳೇಕರ್.

    ದಾಂಡೇಲಿಯಲ್ಲಿ ತೊಂದರೆ: ದಾಂಡೇಲಿ ನಗರದಲ್ಲಿ 31 ವಾರ್ಡ್ ಗಳಿದ್ದು, ಬಹುತೇಕ ಕಡೆಗಳಲ್ಲಿ ದಿನಸಿ, ತರಕಾರಿ ಸಾಮಗ್ರಿಗಳು ತಲುಪುತ್ತಿಲ್ಲ. ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಇಲ್ಲಿ ವ್ಯಾಪಾರಸ್ಥರಿಗೆ ಓಡಾಡಲು ಪಾಸ್ ಕೊಡುವ ವ್ಯವಸ್ಥೆಯಾಗಿಲ್ಲ. ವ್ಯಾಪಾರಸ್ಥರ ಸಭೆ ನಡೆಸಿ ಮನವೊಲಿಸುವ ಕೆಲಸವೂ ಆಗಿಲ್ಲ. ಇದರಿಂದ ಜನರು ಅಗತ್ಯ ವಸ್ತುಗಳಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ಕಂಟೇನ್ಮೆಂಟ್ ವಲಯ ಘೋಷಣೆಯಾದ ನಂತರ ಮೊದಲ ಮೂರ್ನಾಲ್ಕು ದಿನ ತರಕಾರಿಗಳು ಬಂದವು ನಂತರ ಅದೂ ಬಂದ್ ಆಯ್ತು. ದಿನಸಿಯಂತೂ ಬರದೆ ಎಷ್ಟೋ ದಿನವಾಯ್ತು ಎಂದು ಮನೆಯಲ್ಲಿ ಮಹಿಳೆಯರು ಬೊಬ್ಬೆ ಹಾಕುವ ಪರಿಸ್ಥಿತಿ ನಿರ್ವಣವಾಗಿದೆ. ಗಾಂಧಿನಗರ, ಆಜಾದ್​ನಗರ, ಮಾರುತಿನಗರ, ಗಣೇಶನಗರ, ಅಂಬೆವಾಡಿ ಸೇರಿ ವಿವಿಧೆಡೆ ಇನ್ನೂ ಒಂದು ಬಾರಿಯೂ ದಿನಸಿ ಸಾಮಗ್ರಿ ವಾಹನಗಳು ಓಡಾಡಿಲ್ಲ ಎಂಬುದು ಜನರ ಗೋಳು. ನಗರದ ಬಹುತೇಕ ಭಾಗಗಳಿಗೆ ದಿನಸಿ, ತರಕಾರಿ ದೊರೆಯುತ್ತಿಲ್ಲ ಎನ್ನುತ್ತಾರೆ ನಗರದ ನಿವಾಸಿ ಜಿಲ್ಲಾ ಇಂಟೆಕ್ ಅಧ್ಯಕ್ಷ ರಾಮಲಿಂಗ ಜಾಧವ್.

    ಹಳಿಯಾಳದಲ್ಲಿ ವ್ಯವಸ್ಥೆಯ ಅರಿವಿಲ್ಲ: ಹಳಿಯಾಳ ಗ್ರಾಮೀಣ ಭಾಗದಲ್ಲಿ ಅಗತ್ಯ ವಸ್ತುಗಳ ಸಮಸ್ಯೆ ಕಂಡುಬಂದಿಲ್ಲ. ಆದರೆ, ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಕಡೆ ಸಾಮಗ್ರಿಗಳು ತಲುಪುತ್ತಿಲ್ಲ. ಪ್ರತಿ ವಾರ್ಡ್​ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಅವರ ಮೊಬೈಲ್ ಫೋನ್ ಸಂಖ್ಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಆದರೆ, ಹೆಚ್ಚಿನ ಜನರಿಗೆ ಅದರ ಅರಿವಿಲ್ಲ. ಸುಶಿಕ್ಷಿತ ಹಾಗೂ ಸ್ಥಿತಿವಂತರು ಮಾತ್ರ ಪುರಸಭೆಯು ಸೂಚಿಸಿದ ನೋಡಲ್ ಅಧಿಕಾರಿಗೆ ಕರೆ ಮಾಡಿ ದಿನಸಿ, ತರಕಾರಿ ಪಡೆಯುತ್ತಿದ್ದಾರೆ. ಪಟ್ಟಣದ ಬಹುಪಾಲು ಜನರಿಗೆ ಪುರಸಭೆ ಆರಂಭಿಸಿದ ಈ ವ್ಯವಸ್ಥೆಯ ಅರಿವೇ ಇಲ್ಲ. ದಿನಸಿಯೂ ಬಂದಿಲ್ಲ. ಕಳೆದ ಎರಡು ದಿನಗಳಿಂದ ಪಟ್ಟಣಕ್ಕೆ ತರಕಾರಿ ಪೂರೈಕೆಯೂ ಬಂದ್ ಆಗಿತ್ತು. ಶನಿವಾರದಿಂದ ಮರು ಪ್ರಾರಂಭವಾಗಿದೆ.

    ಶಿರಸಿ, ಸಿದ್ದಾಪುರದಲ್ಲಿ ಸಮಸ್ಯೆ ಇಲ್ಲ: ಶಿರಸಿ ಭಾಗದಲ್ಲಿ ದಿನಸಿ ವ್ಯಾಪಾರಸ್ಥರು ವಾರ್ಡ್​ವಾರು ಪ್ರದೇಶಗಳನ್ನು ಹಂಚಿಕೊಂಡು ಅಗತ್ಯವಸ್ತು ಪೂರೈಕೆ ಕಾರ್ಯ ಮಾಡುತ್ತಿದ್ದಾರೆ. ಸಿದ್ದಾಪುರದಲ್ಲಿ ಎಲ್ಲ ವಾರ್ಡ್​ಗಳಿಗೂ ದಿನಸಿ, ತರಕಾರಿ ತಲುಪುತ್ತಿದೆ. ಯಲ್ಲಾಪುರ ಹಾಗೂ ಮುಂಡಗೋಡಿನಲ್ಲಿ ನಿಗದಿತ ಅವಧಿಯಲ್ಲಿ ಅಂಗಡಿ ಬಾಗಿಲು ತೆಗೆಯಲು ಹಾಗೂ ಖರೀದಿಗೆ ಇದುವರೆಗೆ ಅವಕಾಶ ನೀಡಿದ್ದರಿಂದ ಅಂಥ ಸಮಸ್ಯೆ ಕಂಡುಬಂದಿಲ್ಲ.

    ತರಕಾರಿ ಮತ್ತು ದವಸ- ಧಾನ್ಯಗಳನ್ನು ಮನೆಗಳಿಗೇ ವಿತರಣೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಒಂದು ದಿನವೂ ಸರಿಯಾಗಿ ಬಂದಿಲ್ಲ. ಜನ ಹೊರಗೆ ಹೋಗುವಂತಿಲ್ಲ. ಮನೆಗಳಿಗೂ ಸಾಮಗ್ರಿ ತಲುಪಿಲ್ಲ ಎಂದರೆ ಜೀವನ ನಡೆಸುವುದು ಹೇಗೆ ? ಇಲ್ಲಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ಸಮನ್ವಯದ ಕೊರತೆ ಕಂಡುಬರುತ್ತಿದೆ.
    | ಹರೀಶ ನಾಯ್ಕ ಕಾರ್ವಿುಕ ಮುಖಂಡ, ದಾಂಡೇಲಿ ಗಣೇಶ ನಗರ ನಿವಾಸಿ

    ವ್ಯಾಪಾರಸ್ಥರಿಗೆ ವಾಹನ ಸಮೇತ ವಿವಿಧ ಪ್ರದೇಶಗಳಿಗೆ ಓಡಾಡಲು ಅನುಮತಿ ನೀಡಬೇಕು. ಆಗ ಮಾತ್ರ ದಿನಸಿ, ಸಾಮಗ್ರಿಗಳನ್ನು ಮುಟ್ಟಿಸಲು ಸಾಧ್ಯ. ನಾವು ಅಂಗಡಿವರೆಗೆ ಬರುವುದೇ ಕಷ್ಟ. ಹೀಗಿರುವಾಗ ಜನರಿಗೆ ಅಗತ್ಯ ವಸ್ತು ಪೂರೈಸುವುದು ಎಲ್ಲಿಂದ.
    | ಚನ್ನಬಸವ ಮುರಗೋಡ ದಾಂಡೇಲಿ ವ್ಯಾಪಾರಸ್ಥ

    ದಿನಸಿ, ತರಕಾರಿ ತಲುಪಿಸುವುದು ಆಡಳಿತದ ಜವಾಬ್ದಾರಿ. ಎಲ್ಲಾದರೂ ಸಮಸ್ಯೆ ಇದ್ದರೆ ತಕ್ಷಣ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಯಾವುದೇ ಪ್ರದೇಶಕ್ಕೆ ತಲುಪದೆ ಇದ್ದಲ್ಲಿ ಜನರು ಸಂಬಂಧಪಟ್ಟ ನಗರಸಭೆ ಅಥವಾ ಪುರಸಭೆಗಳ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.|ವಿದ್ಯಾಶ್ರೀ ಚಂದರಗಿ ಎಸಿ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts