More

    ಮನೆಗೊಂದು ಗಿಡ ನೆಟ್ಟು ಪೋಷಿಸಿ, ಪೊಲೀಸ್ ಅಧಿಕಾರಿ ರಾಜೇಶ್ ಕಿವಿಮಾತು

    ಆನೇಕಲ್: ಮನೆಗೊಂದು ಗಿಡ ನೆಟ್ಟು, ಆ ಗಿಡವನ್ನು ದತ್ತು ಪಡೆದು ಪೋಷಿಸುವ ಜವಾಬ್ದಾರಿ ತೆಗೆದುಕೊಂಡರೆ ಮಾತ್ರ ಪರಿಸರ ರಕ್ಷಿಸಿ, ಆಮ್ಲಜನಕದ ಕೊರತೆ ನಿಭಾಯಿಸಲು ಸಾಧ್ಯ ಎಂದು ಪೊಲೀಸ್ ಅಧಿಕಾರಿ ಎಲ್.ವೈ.ರಾಜೇಶ್ ಕಿವಿಮಾತು ಹೇಳಿದರು.

    ಚಂದಾಪುರದ ಹೆಡ್‌ಮಾಸ್ಟರ್ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಜಲಾಂಛನ ಸಂಸ್ಥೆ ಚಂದಾಪುರದ ಹೆಡ್‌ಮಾಸ್ಟರ್ ಬಡಾವಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೃಕ್ಷಾಭಿಯಾನ ಮತ್ತು ಎಚ್.ಎಂ.ಲೇಔಟ್ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಕರೊನಾ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಸಹಸ್ರಾರು ಮಂದಿ ಮೃತಪಟ್ಟಿದ್ದನ್ನು ಕಣ್ಣಾರೆ ಕಂಡಿದ್ದೇವೆ. ಇನ್ನಾದರೂ ಮನೆಗೊಂದು ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಿ ಪರಿಸರ ಉಳಿಸಿದರೆ, ಅದು ನಮ್ಮನ್ನು ಉಳಿಸುತ್ತದೆ ಎಂದರು.

    ನೆಟ್ಟರೆ ಸಾಲದು ಪೋಷಿಸಬೇಕು: ಇತ್ತೀಚಿನ ದಿನಗಳಲ್ಲಿ ಕೆಲವರು ಗಿಡ ನೆಡುವ ಕಾರ್ಯಕ್ರಮವನ್ನು ಎಲ್ಲೋ ಒಂದು ಕಡೆ ಆಯೋಜಿಸಿ, ನೂರಾರು ಸಸಿಗಳನ್ನು ನೆಟ್ಟು ನಂತರ ಅವುಗಳ ಪೋಷಣೆಯನ್ನೇ ಮರೆತುಬಿಡುತ್ತಿದ್ದಾರೆ. ಆದರೆ ನಾವು ಸಸಿ ನೆಟ್ಟು, ಅವುಗಳ ಪೋಷಣೆಯ ಜವಾಬ್ದಾರಿಯನ್ನು ಇಲ್ಲಿನ ನಿವಾಸಿಗಳಿಗೆ ವಹಿಸಿದ್ದೇವೆ. ಅವರೆಲ್ಲರೂ ದತ್ತು ಪಡೆದ ಗಿಡಗಳನ್ನು ಮಕ್ಕಳಂತೆ ಪೋಷಿಸುತ್ತಾರೆ ಎಂಬ ನಂಬಿಕೆ ಇರುವುದಾಗಿ ಎಲ್.ವೈ.ರಾಜೇಶ್ ಹೇಳಿದರು.

    ಪೋಷಿಸುವ ಭರವಸೆ: ಹೆಡ್‌ಮಾಸ್ಟರ್ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುನಿ ತಿಮ್ಮಾರೆಡ್ಡಿ ಮಾತನಾಡಿ, ನಾನು ದತ್ತು ಪಡೆದ ಗಿಡವನ್ನು ಮಾತ್ರ ಪೋಷಿಸುತ್ತೇವೆ ಎಂಬುದು ಜವಾಬ್ದಾರಿ ಎನಿಸುವುದಿಲ್ಲ. ಬದಲಿಗೆ ಪ್ರತಿಯೊಂದು ಗಿಡವೂ ನಾನು ನೆಟ್ಟಿದ್ದೇನೆ ಎಂಬಂತೆ ಎಲ್ಲ ಸಸಿಗಳನ್ನು ಪೋಷಣೆ ಮಾಡುತ್ತೇವೆ ಎಂಬುದು ಜವಾಬ್ದಾರಿ ಎನಿಸಿಕೊಳ್ಳುತ್ತದೆ. ಈ ಜವಾಬ್ದಾರಿ ನಿಭಾಯಿಸಲು ನಾವು ಸಿದ್ಧರಿದ್ದೇವೆ ಎಂದರು.

    ಪ್ರಧಾನ ಕಾರ್ಯದರ್ಶಿ ಮಂಜುನಾಥ, ಆನೇಕಲ್ ತಾಲೂಕು ಅಧ್ಯಕ್ಷ ಗಣೇಶ್, ಸದಸ್ಯರಾದ ವಸಂತಕುಮಾರ್, ರವಿ, ಎಚ್.ಎ.ಶೇಖರ್, ಓಂಕಾರಪ್ಪ, ಹೊನ್ನಪ್ಪ, ಅಡವಿಯಪ್ಪ, ರಾಜಾರಾಂ, ಸಂತೋಷ್ ಪಾಟೀಲ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts