More

    ಮನೆಗೆ ತೆರಳಿ ಕಲಿಸಲು ಹಿಂದೇಟು

    ಶಿರಸಿ: ಅಂಗವಿಕಲ ಮಕ್ಕಳ ಸರ್ವಾಂಗೀಣ ವಿಕಾಸದ ಉದ್ದೇಶದಿಂದ ಜಾರಿಗೊಂಡ ಗೃಹಾಧಾರಿತ ಶಿಕ್ಷಣವು ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಿನ್ನೆಲೆಗೆ ಸರಿದಿದೆ.

    ಅಂಗವಿಕಲ ಮಕ್ಕಳಿಗೆ ಸಾಮಾನ್ಯ ಶಾಲಾ ತರಗತಿಗಳಲ್ಲಿ ಇತರೆ ಮಕ್ಕಳಿಗೆ ನೀಡುವ ಶೈಕ್ಷಣಿಕ ಸೌಲಭ್ಯ ಮತ್ತು ಅನುಭವವನ್ನು ಒದಗಿಸುವ ಜತೆ ಪೂರಕ ಚಟುವಟಿಕೆಗಳನ್ನು ಕೈಗೊಂಡು ಇತರೆ ಮಕ್ಕಳಂತೆ ಕಲಿಯಲು ಸಾಧ್ಯವಾಗುವ ವಾತಾವರಣ ನೀಡುವ ಸಲುವಾಗಿ ಗೃಹಾಧಾರಿತ ಶಿಕ್ಷಣ ಯೋಜನೆಯು ಕ್ಷೇತ್ರ ಸಂಪನ್ಮೂಲ ಕೇಂದ್ರದ ಮೂಲಕ ಜಾರಿಗೊಂಡಿದೆ. ತೀವ್ರ ಬುದ್ಧಿಮಾಂದ್ಯ, ಮೆದುಳಿನ ಪಾಶ್ವರ್ವಾಯು, ಆಟಿಸಂ ಮತ್ತು ಬಹುವಿಧ ಅಂಗವಿಕಲತೆ ಹೊಂದಿದವರಿಗೆ ಈ ಶಿಕ್ಷಣ ನೀಡಲಾಗುತ್ತದೆ. ಈ ವಿಕಲತೆ ಇರುವವರಿಗೆ ಶಾಲೆಗೆ ತೆರಳಲು ಸಾಧ್ಯವಾಗದ ಕಾರಣಕ್ಕೆ ಶಿಕ್ಷಕರೇ ಅಂಥವರ ಮನೆಗೆ ತೆರಳಿ ವಿಕಾಸದ ಪಾಠ ಮಾಡಬೇಕು. ಆದರೆ, ಪ್ರಸ್ತುತ ಕರೊನಾ ಕಾರಣಕ್ಕೆ ಗ್ರಾಮೀಣ ಭಾಗಕ್ಕೆ ತೆರಳಲು ವಿಶೇಷ ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ವಿಕಾಸದ ನಿರೀಕ್ಷೆಯಲ್ಲಿದ್ದ ಅಂಗವಿಕಲ ಮಕ್ಕಳ ಕನಸಿಗೆ ತಣ್ಣೀರೆರಚಿದಂತಾಗಿದೆ.

    ವಿಕಲತೆ ಮೀರದ ಮಕ್ಕಳು: ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 134 ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ 153 ಸೇರಿ ಒಟ್ಟು 287 ಮಕ್ಕಳು ಗೃಹಾಧಾರಿತ ಶಿಕ್ಷಣ ವ್ಯವಸ್ಥೆಯಡಿ ಕಲಿಕೆ ಮಾಡುತ್ತಿದ್ದಾರೆ.

    ಪ್ರ್ಟ ತಾಲೂಕಿಗೆ ಪ್ರಾಥಮಿಕ ಶಾಲಾ ವಿಭಾಗಕ್ಕೆ ಇಬ್ಬರು ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಒಬ್ಬರಂತೆ ಒಟ್ಟು 3 ವಿಶೇಷ ಶಿಕ್ಷಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಇಂಥ ವಿಶೇಷ ಶಿಕ್ಷಕರಿದ್ದಾರೆ. ಮಾಸಿಕ 7.5 ಲಕ್ಷ ರೂ.ಗೂ ಹೆಚ್ಚು ಸಂಬಳ ಶಿಕ್ಷಕರಿಗೆ ಇಲಾಖೆಯಿಂದಲೇ ನೀಡಲಾಗುತ್ತದೆ. ಈ ಶಿಕ್ಷಕರು ಸಂತ್ರಸ್ತ ಮಕ್ಕಳ ಮನೆಗೆ ತೆರಳಿ ಆ ಮಕ್ಕಳಿಗೆ ಬಟ್ಟೆ ಧರಿಸುವುದು, ಕೂದಲು ಬಾಚುವುದು, ಓದು- ಬರಹ ಗ್ರಹಿಸುವ ರೀತಿಯ ಚಟುವಟಿಕೆ, ಆರೋಗ್ಯ ಸುರಕ್ಷೆ, ಸ್ನಾಯು ಸೆಳೆತಗಳಿದ್ದರೆ ಅವುಗಳನ್ನು ಗುರುತಿಸುವುದು ಹಾಗೂ ಪರಿಹರಿಸುವುದು ಸೇರಿ ವಿವಿಧ ಚಟುವಟಿಕೆ ಮಾಡಬೇಕು. ಆದರೆ, ನಗರ ಕೇಂದ್ರಿತ ಈ ಶಿಕ್ಷಣ ಚಟುವಟಿಕೆಯಿಂದ ಗ್ರಾಮೀಣ ಭಾಗದ ಮಕ್ಕಳು ಏಳಿಗೆ ಕಾಣದಂತಾಗಿದೆ. ತಿಂಗಳಿಗೊಮ್ಮೆಯೂ ಶಿಕ್ಷಕರು ಬರದ ಕಾರಣ ಮಕ್ಕಳ ವಿಕಾಸದ ನಿರೀಕ್ಷೆಯಲ್ಲಿದ್ದ ಪಾಲಕರಿಗೂ ನಿರಾಸೆಗೆ ಕಾರಣವಾಗಿದೆ.

    ಉತ್ತಮ ಫಲ ಹೇಗೆ ಸಾಧ್ಯ?: ಗೃಹಾಧಾರಿತ ಶಿಕ್ಷಣ ವ್ಯಾಪ್ತಿಯಲ್ಲಿನ ಮಕ್ಕಳಿಗೆ ಕಲಿಕೆ ಮತ್ತು ಗ್ರಹಿಕೆಯ ಸಾಮರ್ಥ್ಯ ಅತ್ಯಂತ ತಳಮಟ್ಟದಲ್ಲಿ ಇರುತ್ತದೆ. ಮಗುವಿನ ಜೀವನದ ಕೆಲವು ಪ್ರಾಥಮಿಕ ಕೌಶಲಗಳನ್ನು ರೂಢಿಸಲು ಹಾಗೂ ಪೋಷಕರಿಗೆ ಅರಿವನ್ನು ಮೂಡಿಸಲು ಈ ವ್ಯವಸ್ಥೆ ಜಾರಿಯಾಗಿದೆ. ಆದರೆ, ಶಿಕ್ಷಕರೇ ಬರದಿದ್ದರೆ ಯೋಜನೆಯಿಂದ ಉತ್ತಮ ಫಲ ಹೇಗೆ ನಿರೀಕ್ಷಿಸಲು ಸಾಧ್ಯ? ಇಂತಹ ಶಿಕ್ಷಣ ನೈಜವಾಗಿ ಮಕ್ಕಳಿಗೆ ಸಿಗಬೇಕಾದರೆ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂಬುದು ನೊಂದ ಪಾಲಕರ ಮಾತಾಗಿದೆ.

    ಶೋಚನೀಯ ಸಂಗತಿ

    ಗೃಹಾಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುತ್ತಿರುವ ಗ್ರಾಮೀಣ ಭಾಗದ ಮಕ್ಕಳ ಪಾಡು ಯಾರಿಗೂ ಬೇಡ. ಇಂತಹ ಮಕ್ಕಳೆಡೆ ಜನರ, ಅಧಿಕಾರಿಗಳ ನಿರ್ಲಕ್ಷ್ಯದ ಜತೆ ಶಿಕ್ಷಕರ ಅಸಡ್ಡೆಯೂ ವಿಕಾಸಕ್ಕೆ ತೊಡಕಾಗಿದೆ. ತಿಂಗಳಿಗೆ 3-4 ಬಾರಿ ಬರಬೇಕಿದ್ದ ಶಿಕ್ಷಕರು ತಿಂಗಳಿಗೊಮ್ಮೆ ಮುಖ ತೋರಿಸಿದರೆ ಯಾವ ಮಗು ವಿಕಾಸ ಹೊಂದಲು ಸಾಧ್ಯ? ಪ್ರತಿ ಮಗುವಿಗೂ ನಿಗದಿತ ಚಟುವಟಿಕೆ ಮಾಡಿದರೆ ಮಾತ್ರ ಪ್ರಯೋಜನ ಸಿಗುತ್ತದೆ. ಆದರೆ, ಗ್ರಾಮೀಣ ಭಾಗಕ್ಕೆ ಶಿಕ್ಷಕರೇ ಬರದಿರುವುದು ಶೋಚನೀಯ ಸಂಗತಿ.

    – ಹೆಸರು ಹೇಳಲಿಚ್ಛಿಸದ ಪಾಲಕರು

    ಮಕ್ಕಳಿಗೆ ಸಮಸ್ಯೆ ಆಗಬಾರದು

    ಗೃಹಾಧಾರಿತ ಶಿಕ್ಷಣ ನೀಡಲು ಪ್ರತಿ ತಾಲೂಕಿಗೆ 3 ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ಇವರೇ ಆಯಾ ತಾಲೂಕಿನ ಅಂದಾಜು 35ರಿಂದ 40 ಮಕ್ಕಳ ನಿಗಾ ವಹಿಸಬೇಕು. ಸ್ಥಳ ಭೇಟಿಯ ವರದಿಯನ್ನು ಇಲಾಖೆಗೆ ನೀಡಿದರೆ ಮಾತ್ರ ಆಯಾ ತಿಂಗಳ ಸಂಬಳ ನೀಡಲಾಗುತ್ತದೆ. ಪ್ರಸ್ತುತ ಕರೊನಾ ಸಂದರ್ಭವಾರುವುದರಿಂದ ಶಿಕ್ಷಕರಿಗೆ ಗ್ರಾಮೀಣ ಭಾಗಕ್ಕೆ ತೆರಳಲು ಸಮಸ್ಯೆ ಆಗುತ್ತಿದೆ. ಏನೇ ಆದರೂ ಯೋಜನೆ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಮಸ್ಯೆ ಆಗದಂತೆ ಈ ಶಿಕ್ಷಕರು ಕಾರ್ಯ ನಿರ್ವಹಿಸುವುದು ಕಡ್ಡಾಯ.

    -ಸಿ.ಎಸ್.ನಾಯ್ಕ- ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts