More

    ಮದ್ಯಪ್ರಿಯರ ಕೈಗೆಟುಕದ ಬಾಟಲಿ!

    ಹುಬ್ಬಳ್ಳಿ: ಮದ್ಯ ಮಾರಾಟಕ್ಕೆ ಅನುಮತಿ ದೊರೆತ ಮೊದಲ ದಿನವೇ ಕೋಟ್ಯಂತರ ರೂ. ಬೆಲೆಯ ತರಹೇವಾರಿ ಮದ್ಯ ಖರೀದಿಸಿ ಬೀಗಿದ್ದ ನಗರದ ಮದ್ಯಪ್ರಿಯರಿಗೆ ಎರಡನೇ ದಿನವಾದ ಮಂಗಳವಾರ ಮದ್ಯ ಕೈಗೆಟುಕದ ಹುಳಿ ದ್ರಾಕ್ಷಿಯಂತಾಗಿತ್ತು. ಬಹುತೇಕ ಬಾರ್​ಗಳಲ್ಲಿ ದಾಸ್ತಾನು ಖಾಲಿಯಾಗಿತ್ತು. ಹಾಗಾಗಿ, ಅತಿ ಕಡಿಮೆ ಹಾಗೂ ಅತಿ ಹೆಚ್ಚು ಬೆಲೆಯ ಮದ್ಯ ಮಾತ್ರ ಲಭ್ಯವಿತ್ತು. ಆದರೂ ಸರದಿ ಸಾಲು ಕಿ.ಮೀ. ದಾಟಿತ್ತು.

    ಹಲವು ಮದ್ಯದ ಅಂಗಡಿಗಳಲ್ಲಿ ಸೋಮವಾರ ಸಂಜೆ ಹೊತ್ತಿಗೆ ದಾಸ್ತಾನು ಖಾಲಿಯಾಗಿತ್ತು. ಹಾಗಾಗಿ, ಮಂಗಳವಾರ ಕೆಲ ಬಾರ್​ಗಳು ಬಾಗಿಲು ತೆರೆಯಲೇ ಇಲ್ಲ. ಮತ್ತೆ ಕೆಲವು ಬಾರ್​ಗಳಲ್ಲಿ ಎಲ್ಲ ಬ್ರ್ಯಾಂಡ್​ಗಳು ಲಭ್ಯವಿರಲಿಲ್ಲ. ಆದರೂ ಕಷ್ಟಪಟ್ಟು ಐದಾರು ತಾಸುಗಟ್ಟಲೇ ಬಿಸಿಲಲ್ಲಿ ನಿಂತು ಸಿಕ್ಕಷ್ಟು ಬಾಟಲಿ ಖರೀದಿಸಿ ಸಂಭ್ರಮಿಸಿದರು. ಹಲವೆಡೆ ಸಾಮಾಜಿಕ ಅಂತರ ಇರಲಿಲ್ಲ. ಇವರನ್ನು ಕಾಯುವುದೇ ಪೊಲೀಸರಿಗೆ ತಲೆನೋವಾಗಿತ್ತು.

    ಇಲ್ಲಿನ ಕ್ಲಬ್ ರಸ್ತೆಯ ವೈನ್ ಮಾರ್ಟ್ ಎದುರು ಕಿ.ಮೀ.ಗಟ್ಟಲೆ ಬಿಸಿಲು ಲೆಕ್ಕಿಸದೇ ಸಾಲಿನಲ್ಲಿ ನಿಂತಿದ್ದರು. ಕ್ಲಬ್ ರಸ್ತೆಯ ಮಳಿಗೆಯಿಂದ ಕೋರ್ಟ್ ವೃತ್ತದ ಪೆಟ್ರೋಲ್ ಬಂಕ್ ಸುತ್ತುವರಿದು ದೇಶಪಾಂಡೆ ನಗರದ ವಿವೇಕಾನಂದ ಆಸ್ಪತ್ರೆವರೆಗೆ ಜನ ನಿಂತುಕೊಂಡಿದ್ದರು. ನಿಂತವರಿಗೆ ಚಹಾ ಪೂರೈಸಲು ಬಂದಿದ್ದ ವ್ಯಕ್ತಿಗೆ ಭರ್ಜರಿ ವ್ಯಾಪಾರವಾಗಿತ್ತು !

    ಸಾಲಿನಲ್ಲಿ ನಿಂತ ನೀರೆಯರು : ಮದ್ಯ ಖರೀದಿಗಾಗಿ ಪುರುಷರ ಜತೆಗೆ ನೀರೆಯರೂ ಸಾಲಿನಲ್ಲಿ ನಿಂತಿದ್ದ ದೃಶ್ಯ ಇಲ್ಲಿನ ಸ್ಟೇಶನ್ ರಸ್ತೆಯ ರವಿ ವೈನ್ಸ್ ಮಳಿಗೆ ಬಳಿ ಕಂಡು ಬಂತು. ಬೆಳಗ್ಗೆಯಿಂದಲೇ ಪುರುಷರ ಸಾಲಿನಲ್ಲಿ ತಾಸುಗಟ್ಟಲೇ ನಿಂತಿದ್ದ ನೀರೆಯರು ತಮಗಿಷ್ಟವಾದ ಮದ್ಯ ಖರೀದಿಸಿ ಸಂತಸಪಟ್ಟರು.

    ಬಂದ್ ಆದರೂ ಬಾರ್ ಮುಂದೆ ಜನ: ಇಲ್ಲಿನ ದೇಶಪಾಂಡೆ ನಗರದ ಬಾಟಲ್ ಬಾಕ್ಸ್ ಮಳಿಗೆಯಲ್ಲಿ ಬಹುತೇಕ ದಾಸ್ತಾನು ಖಾಲಿಯಾಗಿತ್ತು. ಹಾಗಾಗಿ, ಮಂಗಳವಾರ ಬೆಳಗ್ಗೆ ಬಾಗಿಲು ತೆರೆದಿರಲಿಲ್ಲ. ಕೆಲ ಗಂಟೆಗಳ ನಂತರ ಬಾಗಿಲು ತೆರೆದರೂ ದುಬಾರಿ ಬೆಲೆಯ ಮದ್ಯ ಮತ್ತು ಬಿಯರ್ ಮಾತ್ರ ಲಭ್ಯವಿದೆ ಎಂದು ಹೇಳುತ್ತಿದ್ದರು. ಆದರೂ ನೂರಾರು ಗ್ರಾಹಕರು ಆಗಮಿಸಿ ಆ ಬ್ರ್ಯಾಂಡ್ ಇದೆಯಾ ? ಸ್ಟಾಕ್ ಬಂತಾ ? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳುವ ಮೂಲಕ ಮಾಲೀಕರು ಸುಸ್ತಾಗುವಂತೆ ಮಾಡಿದರು.

    ಜಿಲ್ಲೆಯಲ್ಲಿ ಸೋಮವಾರ ಮೂರುವರೆ ಕೋಟಿ ರೂ. ಮದ್ಯ ಮಾರಾಟವಾಗಿದೆ. ಅಗತ್ಯವಿದ್ದಷ್ಟು ದಾಸ್ತಾನು ಇದೆ. ಹೊಸ ದರದ ಹಿನ್ನೆಲೆಯಲ್ಲಿ ಕೆಲ ಬ್ರ್ಯಾಂಡ್​ಗಳ ಮಾರಾಟಕ್ಕೆ ಸ್ವಲ್ಪ ತಡವಾಗಿದೆ. | ಮಂಜುನಾಥ ಅರೆಗುಳಿ ಜಿಲ್ಲಾ ಉಪ ಅಧೀಕ್ಷಕ, ಅಬಕಾರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts