More

    ಮತ್ತೊಬ್ಬ ಬಾಂಗ್ಲಾ ಪ್ರಜೆ ಬಂಧನ

    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರವನ್ನೇ ಬೆಚ್ಚಿ ಬೀಳಿಸಿದ್ದ ರಾಜನಗರದ ಔಷಧ ವ್ಯಾಪಾರಿ ವೆಂಕಣ್ಣ ಬಣವಿ ಹತ್ಯೆ, ದರೋಡೆ ಪ್ರಕರಣದಲ್ಲಿ ಬಾಂಗ್ಲಾದೇಶ ಮೂಲದ ಮತ್ತೊಬ್ಬ ಪ್ರಜೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಬಾಂಗ್ಲಾದೇಶ ಪಿರಿಶಪುರ ಜಿಲ್ಲೆ ಚಾಂದಿಪುರ ಮೂಲದ ಇಲಿಯಾಶ ಶಿಕಾರಿ ಎಂಬಾತ ಬಂಧಿತ ಆರೋಪಿ. ದರೋಡೆ ಪ್ರಕರಣವೊಂದರಲ್ಲಿ ಕೇರಳದ ಕಣ್ಣೂರು ಪೊಲೀಸರು ಈತನನ್ನು ಇತ್ತೀಚೆಗೆ ಬಂಧಿಸಿದ್ದು, ನಗರದ ವೆಂಕಣ್ಣ ಬಣವಿ ಹತ್ಯೆ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ‘ವಿಜಯವಾಣಿ’ಗೆ ಖಚಿತಪಡಿಸಿವೆ.

    ವೆಂಕಣ್ಣ ಅವರ ಹತ್ಯೆಗೈದಿದ್ದ ದರೋಡೆಕೋರರ ಜಾಡು ಹಿಡಿದು ಹೊರಟಿದ್ದ ಅಶೋಕನಗರ ಠಾಣೆ ಅಂದಿನ ಇನ್ಸ್​ಪೆಕ್ಟರ್ ಜಗದೀಶ ಹಂಚಿನಾಳ ದೆಹಲಿ ಪೊಲೀಸರ ಸಹಾಯದಿಂದ 2019ರ ಆಗಸ್ಟ್ 12ರಂದು ಪ್ರಮುಖ ಆರೋಪಿ ಬಾಂಗ್ಲಾ ಮೂಲದ ಮಾಣಿಕ್ ಅಲಿಯಾಸ್ ಇಮ್ರಾನ್ ಎಂಬಾತನನ್ನು ಬಂಧಿಸಿದ್ದರು. ವಿಚಿತ್ರ ಮಾದಕ ವ್ಯಸನಿಯಾಗಿದ್ದ ಇಮ್ರಾನ್​ನನ್ನು ಹುಬ್ಬಳ್ಳಿ ಪೊಲೀಸರು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಕರೆ ತಂದು, ನಂತರ ಕಾರಿನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಬರುವಾಗ ಗಾಜು ಒಡೆದು ರಂಪಾಟ ಸೃಷ್ಟಿಸಿದ್ದ.

    ಅಕ್ರಮವಾಗಿ ನುಸುಳಿದ್ದರು: ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿದ್ದ ಐವರು ದರೋಡೆಕೋರರು ದೇಶದ ಪ್ರಮುಖ ನಗರಗಳಲ್ಲಿ ದರೋಡೆ ಮಾಡುತ್ತಿದ್ದರು. ಒಂದು ನಗರದಲ್ಲಿ ದರೋಡೆ ಮಾಡಿ ಮತ್ತೊಂದು ನಗರಕ್ಕೆ ಪರಾರಿಯಾಗುತ್ತಿದ್ದರು. ಇವರ ವಿರುದ್ಧ ದೆಹಲಿ, ರಾಜಸ್ಥಾನದ ಕಿಶನ್​ಗಂಜ್, ಛತ್ತೀಸ್​ಘಡದ ರಾಯಾಪುರ, ಕೇರಳದ ಎರ್ನಾಕುಲಂ ಸೇರಿ ಹತ್ತಾರು ಕಡೆ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಪ್ರಮುಖ ಆರೋಪಿಯನ್ನು ಬಂಧಿಸುತ್ತಿದ್ದಂತೆ ಉಳಿದವರು ಬಾಂಗ್ಲಾಕ್ಕೆ ಪರಾರಿಯಾಗಿದ್ದರು.

    ಘಟನೆ ಹಿನ್ನೆಲೆ: 2019ರ ಜನವರಿ 22ರಂದು ರಾತ್ರಿ ಮನೆಗೆ ನುಗ್ಗಿದ ಐವರು ದರೋಡೆಕೋರರು, ವೆಂಕಣ್ಣ- ವನಮಾಲಾ ದಂಪತಿಯ ಕೈಕಾಲು ಕಟ್ಟಿ ಹಾಕಿದ್ದರು. ವೆಂಕಣ್ಣ ಅವರ ಮೇಲೆ ರಾಡ್​ನಿಂದ ಮನಬಂದಂತೆ ಥಳಿಸಿ ಹತ್ಯೆಗೈದಿದ್ದರು. ನಂತರ 10,90,000 ರೂ. ಮೌಲ್ಯದ ಚಿನ್ನಾಭರಣ, 25,000 ರೂ. ನಗದು ಕದ್ದು ಪರಾರಿಯಾಗಿದ್ದರು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts