More

    ಮತ್ತೆ 160 ಜನರಿಗೆ ಮತದಾನದ ಅರ್ಹತೆ

    ಶಿರಸಿ: ಪ್ರತಿಷ್ಠಿತ ಜಿಲ್ಲಾ ಮಧ್ಯವರ್ತಿ ಬ್ಯಾಂಕ್​ಗಳಲ್ಲಿ ಒಂದಾದ ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್​ನ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಕೊನೇ ಕ್ಷಣದಲ್ಲಿ ಕೋರ್ಟ್​ನಿಂದ ಮತದಾನದ ಅವಕಾಶ ಪಡೆದ ಮತದಾರರೇ ಸ್ಪರ್ಧಿಗಳ ಹಣೆಬರಹ ನಿರ್ಧರಿಸುವುದು ಬಹುತೇಕ ಖಚಿತವಾಗಿದೆ.

    ನ. 11ರಂದು ನಡೆಯಲಿರುವ ಚುನಾವಣೆಗೆ 287 ಮತದಾರರು ಅರ್ಹತೆಯ ಪಟ್ಟಿಯಲ್ಲಿದ್ದರು. ಬ್ಯಾಂಕ್​ನ ಬೈಲಾ ಪ್ರಕಾರ ವಿವಿಧ ಕಾರಣಗಳಿಂದ 300ರಷ್ಟು ಮತದಾರರು ಮತದಾನದಿಂದ ಹೊರಗುಳಿಯುವಂತಾಗಿತ್ತು. ಇದನ್ನು ಪ್ರಶ್ನಿಸುವ ಜತೆ ಮತದಾನಕ್ಕೆ ಅವಕಾಶ ಕೋರಿ ಬಹುತೇಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇವರಲ್ಲಿ ಸಕಾರಣ ನೀಡಿದ 160ಕ್ಕೂ ಹೆಚ್ಚು ಮತದಾರರಿಗೆ ಮತದಾನಕ್ಕೆ ಅವಕಾಶ ಸಿಕ್ಕಿದೆ. ಕೊನೇ ಕ್ಷಣದ ಈ ಅವಕಾಶ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ನಿಶ್ಚಿತವಾಗಿದೆ.

    ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರ ಹಾಗೂ ಹಾಲು ಉತ್ಪಾದಕರ/ ಕಾರ್ವಿುಕರ/ ಕೂಲಿಕಾರರ/ ಇತರ ಸಹಕಾರಿ ಸಂಘಗಳ (ಫಾರ್ವಿುಂಗ್ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಿಗೆ ಅವಕಾಶ ಲಭಿಸಿದೆ. ಉಳಿದಂತೆ ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲೂ ಹೆಚ್ಚಿನ ಮತದಾರರಿಗೆ ಅವಕಾಶ ನೀಡಲಾಗಿದೆ. ಅರ್ಹ 287 ಮತದಾರರ ಜತೆ ಈಗ ಕೋರ್ಟ್ ಅವಕಾಶ ನೀಡಿದ 160ರಷ್ಟು ಮತದಾರರು ಸ್ಪರ್ಧಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

    ಹೊಸಬರ ತಂತ್ರ: ಈ ಹಿಂದಿನ ನಿರ್ದೇಶಕರು ತಮ್ಮ ಕ್ಷೇತ್ರ ವ್ಯಾಪ್ತಿ ಮತದಾರರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದ ಕಡೆ ಅಂಥ ಮತದಾರರನ್ನು ಸೆಳೆಯಲು ಹೊಸ ಸ್ಪರ್ಧಿಗಳು ಕಸರತ್ತು ನಡೆಸಿದ್ದರು. ಇದರೊಂದಿಗೆ ನಿರ್ದೇಶಕರ ಕಾರಣಕ್ಕೆ ಮತದಾನದಿಂದ ವಂಚಿತವಾಗುತ್ತಿದ್ದ ಹಲವು ಮತದಾರರಿಗೆ ಕೋರ್ಟ್ ಮೆಟ್ಟಿಲೇರಿ ಹಕ್ಕು ಪಡೆಯುವಂತೆ ಮಾಡುವಲ್ಲಿ ಹೊಸ ಸ್ಪರ್ಧಿಗಳ ರಣತಂತ್ರ ಅಡಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ಪುನರಾಯ್ಕೆ ಬಯಸಿ ಸ್ಪರ್ಧಿಸಿರುವ ಈ ಹಿಂದಿನ ಕೆಲವು ನಿರ್ದೇಶಕರಿಗೆ ಆತಂಕ ತಂದಿದೆ.

    ಹೋಟೆಲ್ ರಾಜಕಾರಣ
    ಹೊನ್ನಾವರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶಿವಾನಂದ ಕಡತೋಕಾ ಮತ್ತು ಮಹಾಬಲೇಶ್ವರ ಹೆಗಡೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾರಣ ಮತದಾರರನ್ನು ಹೋಟೆಲ್​ನಲ್ಲಿ ಉಳಿಸಿ ನೇರವಾಗಿ ಮತದಾನಕ್ಕೆ ಕರೆತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಮತದಾನಕ್ಕೂ ಮುನ್ನ ಬೆಂಬಲಿಗರ ಮನಪರಿವರ್ತನೆಗೆ ಅವಕಾಶ ನೀಡದಂತೆ ಕಡತೋಕಾ ಅವರು ತಮ್ಮ ಗೆಲುವಿಗೆ ಕಾರಣವಾಗಲಿರುವ 13 ಬೆಂಬಲಿಗರನ್ನು ಹುಬ್ಬಳ್ಳಿಯ ಹೋಟೆಲ್​ವೊಂದರಲ್ಲಿ ಇರಿಸಿದ್ದಾಗಿ ಮೂಲಗಳು ಮಾಹಿತಿ ನೀಡಿವೆ.

    ಕಣದಲ್ಲಿನ ಸ್ಪರ್ಧಿಗಳು
    ಶಿರಸಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ರಾಮಕೃಷ್ಣ ಕಡವೆ ಹಾಗೂ ಜಿ.ಆರ್. ಹೆಗಡೆ ಬೆಳ್ಳೆಕೇರಿ, ಸಿದ್ದಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಷಣ್ಮುಖ ಗೌಡ ಹಾಗೂ ವಿವೇಕ ಭಟ್ಟ ಗಡಿಹಿತ್ಲು, ಮುಂಡಗೋಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲಿ ರವಿಚಂದ್ರ ದುಗ್ಗಳ್ಳಿ ಹಾಗೂ ಎಲ್.ಟಿ. ಪಾಟೀಲ, ಕುಮಟಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶ್ರೀಧರ ಭಾಗ್ವತ್ ಮತ್ತು ಗಜಾನನ ಪೈ, ಅಂಕೋಲಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ವಿಜಯ ಕುಮಾರ ನಾಯಕ ಮತ್ತು ಬೀರಣ್ಣ ನಾಯಕ, ಹೊನ್ನಾವರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶಿವಾನಂದ ಕಡತೋಕಾ ಮತ್ತು ಮಹಾಬಲೇಶ್ವರ ಹೆಗಡೆ, ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಜಿ.ಆರ್. ಹೆಗಡೆ ಸೋಂದಾ, ಗಿರೀಶ ಭಟ್ಟ, ಚಂದ್ರು ದೇವಾಡಿಗ, ವಿನಾಯಕ ಹೆಗಡೆ, ಔದ್ಯೋಗಿಕ ಸಹಕಾರಿ ಸಂಘಗಳ (ನೇಕಾರರ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಿಂದ ಜಿ.ಟಿ. ಹೆಗಡೆ ತಟ್ಟಿಸರ ಮತ್ತು ವಿಶ್ವನಾಥ ಭಟ್ಟ ಹೊನ್ನಾವರ, ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಮೋಹನದಾಸ ನಾಯಕ, ವಸಂತ ನಾಯಕ, ಎಸ್.ಎಂ. ಹೆಗಡೆ ಮಾನೀಮನೆ, ಹಾಲು ಉತ್ಪಾದಕರ/ ಕಾರ್ವಿುಕರ/ ಕೂಲಿಕಾರರ/ ಇತರ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸುರೇಶ್ಚಂದ್ರ ಕೆಶಿನ್ಮನೆ ಮತ್ತು ಭಾಸ್ಕರ ಹೆಗಡೆ ಕಾಗೇರಿ ಕಣದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts