More

    ಮತ್ತೆ ಹೊಂದಾಣಿಕೆ ರಾಜಕಾರಣ!

    ರಾಯಣ್ಣ ಆರ್.ಸಿ. ಬೆಳಗಾವಿ

    ಸಪ್ತನದಿಗಳ ಬೀಡು, ಸಾಧು-ಸಂತರ ಪಾದಸ್ಪರ್ಶದ ಪುಣ್ಯಭೂಮಿ, ಸಕ್ಕರೆ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಸಮೀಪಿಸುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ರಾಜಕೀಯದ ಗಾಳಿ ಜೋರಾಗಿ ಬೀಸಲಾರಂಭಿಸಿದೆ.

    ನಿರಂತರವಾಗಿ ಅಧಿಕಾರದಲ್ಲಿರುವ ಜಿಲ್ಲೆಯ ಕೆಲವು ರಾಜಕೀಯ ಮುಖಂಡರು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವುದಕ್ಕಾಗಿ ಹಾಗೂ ಈ ಚುನಾವಣೆಯಲ್ಲಿಯೂ ಪ್ರಚಂಡ ಜಯ ಗಳಿಸುವುದಕ್ಕಾಗಿ ವಿವಿಧ ಆಮಿಷಗಳ ಸುರಿಮಳೆಗಳನ್ನೇ ಹರಿಸುತ್ತಿದ್ದಾರೆ. ಇದಕ್ಕೆ ನಿತ್ಯವೂ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ದೊರೆಯುತ್ತಿರುವ ‘ದುಡ್ಡಿನ ಗಂಟು’ಗಳೇ ಸಾಕ್ಷಿಯಾಗಿವೆ.

    ಸಕ್ಕರೆ ಜಿಲ್ಲೆಯಲ್ಲಿ ಶುಗರ್‌ಲಾಬಿ ಮುಖಾಂತರ ರೈತರನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಮತ್ತು ಅಭಿವೃದ್ಧಿ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಬೆರಳನಿಕೆಯಷ್ಟು ಮುಖಂಡರು, ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಿ, ಗೆದ್ದು ಬರುತ್ತಾರೆ. ಆದರೆ ಇನ್ನುಳಿದ ಜಿಲ್ಲೆಯ ಬಹಳಷ್ಟು ನಾಯಕರು, ಹೊಂದಾಣಿಕೆ ರಾಜಕಾರಣದ ಮೂಲಕವೇ ತಮ್ಮ ‘ಕುರ್ಚಿ’ ಉಳಿಸಿಕೊಳ್ಳುವುದಕ್ಕಾಗಿ ರಾಜಕೀಯ ಚದುರಂಗದಾಟದಲ್ಲಿ ಮಗ್ನರಾಗಿದ್ದಾರೆ.

    ಹೇಗಾದರೂ ಮಾಡಿ ರಾಜಕೀಯದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎನ್ನುವ ಯುವ ಮುಖಂಡರಿಗೆ ರಾಜಕೀಯದ ಹಿರಿಯ ಮುಖಂಡರ ನಡೆಯ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಬೇಸರ ವ್ಯಕ್ತವಾಗುತ್ತಿದೆ.

    ನಾಯಕರ ಸುತ್ತ ಪ್ರದಕ್ಷಿಣೆ: ಕೆಲವು ನೂತನ ಆಕಾಂಕ್ಷಿಗಳು, ಹಾಲಿ-ಮಾಜಿಗಳು (ಬಿಜೆಪಿ-ಕಾಂಗ್ರೆಸ್) ಟಿಕೆಟ್ ಕೊಡಿಸಿ ಎಂದು ಅಂಗಲಾಚುತ್ತ ತಮ್ಮ ಹಿರಿಯ ರಾಜಕೀಯ ನಾಯಕರ ದುಂಬಾಲು ಬಿದ್ದಿದ್ದಾರೆ. ದುಡ್ಡಿನ ಬಲ ಉಳ್ಳ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರು-ದೆಹಲಿಯಲ್ಲಿ ಠಿಕಾಣಿ ಹೂಡಿ, ತಮ್ಮ ನಾಯಕರ ಸುತ್ತಮುತ್ತ ‘ಪ್ರದಕ್ಷಿಣೆ’ ಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

    ಕಾಂಗ್ರೆಸ್ ಮತ್ತು ಬಿಜೆಪಿಯ ಮಾಜಿ ಶಾಸಕರು ಕೂಡ ಟಿಕೆಟ್ ಪಡೆಯುವುದಕ್ಕಾಗಿ ಹರಸಾಹಸ ಮಾಡುತ್ತಿದ್ದರೆ, ಕೆಲವರು ತಮಗೆ ಟಿಕೆಟ್ ದೊರೆಯದಿದ್ದರೆ, ತಮ್ಮ ವಿರೋಧಿಗಳಿಗೂ ಟಿಕೆಟ್ ದೊರೆಯದಿರಲಿ ಎಂದು ಟಿಕೆಟ್ ತಪ್ಪಿಸುವುದಕ್ಕಾಗಿ ತೆರೆ-ಮೆರೆಯಲ್ಲಿ ಷಡ್ಯಂತ್ರ ಹೆಣೆಯುವುದು, ಆರೋಪ-ಪ್ರತ್ಯಾರೋಪ ಮಾಡುವುದು ಜೋರಾಗಿ ನಡೆಯುತ್ತಿದೆ.

    13 ಬಿಜೆಪಿ, 5 ಕಾಂಗ್ರೆಸ್: ರಾಜ್ಯದಲ್ಲಿಯೇ ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ 18 ವಿಧಾನಸಭೆ ಕ್ಷೇತ್ರಗಳಲ್ಲಿ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನ ಗೆದ್ದಿತ್ತು, ಕಾಂಗ್ರೆಸ್ 5 ಸ್ಥಾನ ಗೆಲ್ಲುವ ಮೂಲಕ ಹೀನಾಯ ಸೋಲು ಅನುಭವಿಸಿತ್ತು. ಈಗಲೂ ಟಿಕೆಟ್ ಹಂಚಿಕೆಯಲ್ಲಿ ಗೆಲ್ಲುವ ಕುದುರೆಗಳಿಗೆ ಅಳೆದು ತೂಗಿ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪರಿಸ್ಥಿತಿ ಅದೇ ರಾಗ ಅದೇ ಹಾಡು ಎಂಬಂತಾಗಲಿದೆ. ಜಿಲ್ಲೆಯ ರಾಜಕಾರಣದಲ್ಲಿ ಸಹಕಾರಿ ರಂಗದ ಪ್ರಭಾವ, ಶುಗರ್ ಲಾಬಿ, ಭಾಷೆಯ ಲಾಬಿ, ಜಾತಿ ಲಾಬಿ, ಹಣಬಲ-ತೋಳ್ಬಲದ ಪ್ರಯೋಗವೂ ನಡೆಯಲಿದೆ.

    ‘ಡಬಲ್ ಗೇಮ್’ ರಾಜಕಾರಣಿಗಳ ಮೇಲೆ ಕೆಂಗಣ್ಣು: ಈಗಾಗಲೇ ಆಡಳಿತ ಪಕ್ಷದಲ್ಲಿ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸುವ ರಾಜಕೀಯ ನಾಯಕರ ನಡೆಗಳ ಮೇಲೆ ಕೇಂದ್ರ ಹಾಗೂ ರಾಜ್ಯದ ಗುಪ್ತಚರ ಸಂಸ್ಥೆಗಳು, ಪಕ್ಷದ ಆಂತರಿಕ ಸಲಹೆಗಾರರು, ರಾಜಕೀಯ ಪರಿಣತರು ಹದ್ದಿನ ಕಣ್ಣಿಟ್ಟು ‘ಡಬಲ್ ಗೇಮ್’ ಮಾಡುವ ರಾಜಕಾರಣಿಗಳ ಚಲನವಲನ ಗಮನಿಸುತ್ತಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.

    ಸೋತವರಿಗೆ ಟಿಕೆಟ್ ಇಲ್ಲ: ಆಡಳಿತಾರೂಢ ಭಾರತೀಯ ಜನತಾ ಪಕ್ಷದಲ್ಲಿ ಈಗಾಗಲೇ ಒಂದೆರಡು ಬಾರಿ ಸೋತಿರುವ ಮಾಜಿ ಶಾಸಕರಿಗೆ, ಮಾಜಿ ವಿಧಾನ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡುವುದು ಸೂಕ್ತವಲ್ಲ. ಗೆಲ್ಲುವ ಉಮೇದುವಾರರಿಗೆ ಮಾತ್ರ ಟಿಕೆಟ್ ನೀಡಬೇಕು. ಕೆಲವರು ಪಾರ್ಟಿ ಫಂಡ್ ಮೇಲೆ ಕಣ್ಣಿಟ್ಟು ಚುನಾವಣೆಗೆ ಸ್ಪರ್ಧಿಸುವ ‘ಮಹಾಶಯರು’ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಬಿಜೆಪಿಯೂ ಅಂತವರನ್ನು ದೂರವಿಡಬೇಕು ಎಂದು ಆರ್‌ಎಸ್‌ಎಸ್ ಹಿರಿಯ ಮುಖಂಡರು ಸಲಹೆ ಮಾಡಿರುವುದು ಕೆಲವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts