More

    ಮತ್ತೆ ಮುಂದುವರಿದ ಮಳೆ ಆರ್ಭಟ

    ಹಾವೇರಿ/ರಾಣೆಬೆನ್ನೂರ: ನಗರ ಸೇರಿ ಜಿಲ್ಲಾದ್ಯಂತ ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಮಳೆ ಸುರಿಯಿತು. ಕೆಲ ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದ ಹಾಗೂ ಇನ್ನೂ ಕೆಲವೆಡೆ ಭಾನುವಾರ ನಸುಕಿನ ಜಾವದಿಂದ ಆರಂಭಗೊಂಡ ಮಳೆ ಬಿಡುವಿಲ್ಲದಂತೆ ಸುರಿಯಿತು.

    ಹತ್ತಿ, ಮೆಕ್ಕೆಜೋಳಕ್ಕೆ ರೋಗದ ಭೀತಿ: ಕಳೆದ ವಾರ ಕೂಡ ನಿರಂತರವಾಗಿ ಸುರಿದ ಮಳೆ 2-3 ದಿನದಿಂದ ತುಸು ಕಡಿಮೆಯಾಗಿತ್ತು. ಆದರೆ, ಭಾನುವಾರ ಮತ್ತೇ ನಿರಂತರವಾಗಿ ಸುರಿಯಲಾರಂಭಿಸಿದ್ದು, ರಾಣೆಬ್ನೆನೂರ ತಾಲೂಕಿನ ಕುಪ್ಪೇಲೂರ, ತುಮ್ಮಿನಕಟ್ಟಿ, ಎರೇಕುಪ್ಪಿ, ಹಲಗೇರಿ, ಸರ್ವಂದ, ಉಕ್ಕುಂದ ಸೇರಿ ವಿವಿಧ ಗ್ರಾಮಗಳ ರೈತರು ಬೆಳೆದ ಹತ್ತಿ, ಮೆಕ್ಕೆಜೋಳ ಬೆಳೆಗಳಿಗೆ ತೇವಾಂಶ ಅಧಿಕವಾಗತೊಡಗಿದೆ. ಕೆಲವೆಡೆ ಜಮೀನಿನಲ್ಲಿ ನೀರು ನಿಂತಿದ್ದು, ಬೆಳೆಗಳು ಹಾಳಾಗುವ ಪರಿಸ್ಥಿತಿ ನಿರ್ವಣವಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಅತಿವೃಷ್ಟಿಯಿಂದ ಬೆಳೆಗಳು ರೋಗಕ್ಕೆ ತುತ್ತಾಗುವ ಭೀತಿ ರೈತರಲ್ಲಿ ಆವರಿಸಿದೆ.

    ಭತ್ತಕ್ಕೆ ಹಾನಿ: ಕಳೆದ ವಾರ ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿದ ಪರಿಣಾಮ ರಾಣೆಬೆನ್ನೂರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದ ಭತ್ತದ ಬೆಳೆ ತುಂಗಭದ್ರಾ ನದಿ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಎರಡು ದಿನದಿಂದ ನೀರಿನ ಪ್ರಮಾಣ ಕೊಂಚ ತಗ್ಗಿತ್ತು. ಆದರೀಗ ಮತ್ತೆ ತುಂಗಭದ್ರಾ ನದಿಯು ಭತ್ತದ ಗದ್ದೆಗಳಿಗೆ ಹೊಂದಿಕೊಂಡು ಹರಿಯುತ್ತಿದೆ. ಸದ್ಯ ಭದ್ರಾ ಜಲಾಶಯದಿಂದ ನೀರು ಹರಿಸದಿದ್ದರೂ ಮಳೆ ನೀರಿನಿಂದಲೇ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಭದ್ರಾ ಜಲಾಶಯದಿಂದ ನೀರು ಹರಿಬಿಟ್ಟರೆ ಹಿರೇಬಿದರಿ, ಕುದರಿಹಾಳ, ಐರಣಿ, ಮೇಡ್ಲೇರಿ, ಸೋಮಲಾಪುರ, ಕೋಣತಂಬಗಿ, ಉದಗಟ್ಟಿ, ಬೇಲೂರು ಸೇರಿ ನದಿಪಾತ್ರದ ಗ್ರಾಮಗಳ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿರುವ ಭತ್ತದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts