More

    ಮತ್ತೆ ನಾಲ್ಕು ಮಂದಿಗೆ ಸೋಂಕು



    ಗದಗ: ಗುಜರಾತ್​ನಿಂದ ಜಿಲ್ಲೆಗೆ ಆಗಮಿಸಿರುವ ಗದಗ ಬೆಟಗೇರಿ ಅವಳಿ ನಗರದ ನಾಲ್ವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

    ಮೇ 12ರಂದು ಗುಜರಾತ್ ಅಹಮದಾಬಾದ್​ನಿಂದ ಜಿಲ್ಲೆಗೆ ಆಗಮಿಸಿರುವ 9 ಜನರ ಪೈಕಿ 4 ಜನರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಉಳಿದವರ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ.

    ಜಿಲ್ಲೆಗೆ ಆಗಮಿಸಿದ ವೇಳೆ 9 ಜನರನ್ನು ಪ್ರತ್ಯೇಕ ನಿಗಾದಲ್ಲಿರಿಸಿ ಅವರ ಗಂಟಲ ದ್ರವವನ್ನು ಕೋವಿಡ್ 19 ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಪಿ 979 (62 ವರ್ಷ), ಪಿ 971 (47 ವರ್ಷ), ಪಿ 972 (44 ವರ್ಷ) ಮತ್ತು 28 ವರ್ಷದ (ಪಿ 973) ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ.

    ಸೋಂಕಿತರನ್ನು ನಗರದ ಹೊರವಲಯದಿಂದಲೇ ಕರೆದುಕೊಂಡು ಹೋಗಿ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಹೀಗಾಗಿ ಇವರಿಗೆ ಪ್ರಥಮ, ದ್ವಿತೀಯ ಸಂಪರ್ಕಗಳು ಇಲ್ಲ. ಇವರು ವಾಸಿಸುವ ಬಡಾವಣೆಯನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೊಷಿಸುವ ಪ್ರಮೇಯ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ಇಲ್ಲಿವರೆಗೆ ಒಂದು ಅಥವಾ ಎರಡು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಏಕಾಏಕಿ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.

    ಈಗಾಗಲೇ ಗುಜರಾತ್​ನಿಂದ ಆಗಮಿಸಿದ್ದ 16 ಜನರ ಪೈಕಿ ಒಬ್ಬರಿಗೆ ಪಿ-913 ದೃಢಪಟ್ಟಿದೆ. ಇದರಿಂದ ಗುಜರಾತ್​ನಿಂದ ಬಂದಿರುವ ಒಟ್ಟು 25 ಜನರ ಪೈಕಿ 5 ಜನರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ.

    ಜಿಲ್ಲೆಯ ಗಂಜಿ ಬಸವೇಶ್ವರ ಓಣಿಯ ಪಿ 514 ಪ್ರಕರಣದ ದ್ವಿತೀಯ ಸಂರ್ಪಕದಿಂದ ಸೋಂಕು ದೃಢಪಟ್ಟ ಪಿ 912, ಪಿ 913 ಸೇರಿ ಒಟ್ಟು 7 ಸಕ್ರಿಯ ಪ್ರಕರಣಗಳಿಗೆ ನಗರದ ನಿಗದಿತ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೆ 12 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಪ್ರಥಮ ಸೋಂಕಿತ ಮಹಿಳೆ 80 ವರ್ಷದ ವೃದ್ಧೆ ಮೃತಪಟ್ಟಿದ್ದು, ನಾಲ್ವರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    28 ದಿನಗಳ ನಿಗಾ ಅವಧಿ ಪೂರೈಸಿದ 474 ಜನ

    ಇದುವರೆಗೆ ಜಿಲ್ಲೆಯಲ್ಲಿ 2821 ಜನರನ್ನು ನಿಗಾ ಇರಿಸಲಾಗಿದೆ. 474 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 16 ಜನರನ್ನು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. 2973 ಜನರ ಗಂಟಲ ಮಾದರಿ ಕಳುಹಿಸಲಾಗಿದ್ದು, 2721 ವರದಿಗಳು ನಕಾರಾತ್ಮಕವಾಗಿವೆ. 85 ಮಾದರಿಗಳು ತಿರಸ್ಕೃತಗೊಂಡಿವೆ. 155 ಮಾದರಿಗಳ ವೈದ್ಯಕೀಯ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts