More

    ಮತ್ತೆ ಚುರುಕು ಪಡೆದುಕೊಂಡ ಮಳೆ

    ಕಾರವಾರ: ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕಾಗಿದೆ. ಶನಿವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿದೆ. ಕಾರವಾರದಲ್ಲಿ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಕೆಲವು ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

    ತಾಲೂಕುವಾರು ಮಾಹಿತಿ: ಅಂಕೋಲಾದಲ್ಲಿ 27, ಭಟ್ಕಳ-25, ಹಳಿಯಾಳ-51, ಹೊನ್ನಾವರ-24, ಕಾರವಾರ- 22.2, ಕುಮಟಾ-28.7, ಮುಂಡಗೋಡ-18.2, ಸಿದ್ದಾಪುರ- 39.2, ಶಿರಸಿ-62, ಜೊಯಿಡಾ- 51, ಯಲ್ಲಾಪುರದಲ್ಲಿ 30 ಮಿಮೀ ಮಳೆಯಾಗಿದೆ.

    ಅಣೆಕಟ್ಟೆಯಿಂದ ನೀರು ಹೊರಕ್ಕೆ: ಕದ್ರಾ ಅಣೆಕಟ್ಟೆಯ ಗೇಟ್​ಗಳನ್ನು ಮತ್ತೆ ತೆರೆದು 27,200 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.ಕಳೆದ ಒಂದು ವಾರ ನಿರಂತರವಾಗಿ ಸುಮಾರು 30 ಸಾವಿರ ಕ್ಯೂಸೆಕ್​ಗೂ ಹೆಚ್ಚು ನೀರನ್ನು ಹರಿಬಿಟ್ಟು ಗೇಟ್ ಬಂದ್ ಮಾಡಲಾಗಿತ್ತು. 34.50 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯದ ಕದ್ರಾ ಅಣೆಕಟ್ಟೆಯ ನೀರಿನ ಮಟ್ಟ 32 ಮೀಟರ್​ಗೆ ತಲುಪಿದೆ. ಒಳಹರಿವು 13960 ಕ್ಯೂಸೆಕ್ ಇರುವ ಹಿನ್ನೆಲೆಯಲ್ಲಿ ಮತ್ತೆ ಗೇಟ್ ತೆರೆಯಲಾಗಿದೆ. ವಿದ್ಯುತ್ ಉತ್ಪಾದನೆ ಮಾಡಿ 20 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದು, ಒಟ್ಟಾರೆ 47 ಸಾವಿರ ಕ್ಯೂಸೆಕ್ ನೀರು ಕಾಳಿ ನದಿಗೆ ಹರಿಯುತ್ತಿದೆ. ಸೂಪಾ ಅಣೆಕಟ್ಟೆಗೆ 28121 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಅಲರ್ಟ್: ಆಗಸ್ಟ್ 19 ರವರೆಗೆ ಜಿಲ್ಲೆಯಲ್ಲಿ ಸರಾಸರಿ 115 ಮಿಮೀವರೆಗೂ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಹಳಿಯಾಳದಲ್ಲಿ ವರುಣಾರ್ಭಟ: ಹಳಿಯಾಳ ತಾಲೂಕಿನಾದ್ಯಂತ ಶನಿವಾರ ರಾತ್ರಿಯಿಂದಲೇ ನಿರಂತರ ಮಳೆ ಆರಂಭಗೊಂಡಿದೆ. ಗ್ರಾಮಾಂತರ ಭಾಗದಲ್ಲಿ ಹರಿಯುತ್ತಿರುವ ತಟ್ಟಿಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಬಂದಿದೆ. ಇನ್ನೂ ಮುರ್ಕವಾಡ ಗ್ರಾಮದಲ್ಲಿ ಮಳೆಯಿಂದಾಗಿ ರೇಣುಕಾ ಕಮಲಾಕರ ಗೌಡ ಎಂಬುವರ ವಾಸದ ಮನೆ ಕುಸಿದಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

    ಅಬ್ಬರದ ವರ್ಷಧಾರೆ: ಯಲ್ಲಾಪುರ ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ಭಾನುವಾರ ಇಡೀ ದಿನ ನಿರಂತರವಾಗಿ ಮಳೆ ಸುರಿಯಿತು. ಶನಿವಾರ ಕೆಲವೇ ಗ್ರಾಮೀಣ ಭಾಗಗಳಲ್ಲಿ ಮಾತ್ರ ಅಬ್ಬರದ ಮಳೆಯಾಗಿತ್ತು. ಆದರೆ, ಭಾನುವಾರ ತಾಲೂಕಿನಾದ್ಯಂತ ಮಳೆ ಅಬ್ಬರಿಸಿದೆ. ಗ್ರಾಮೀಣ ಭಾಗಗಳಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಪಟ್ಟಣದಲ್ಲಿ ಮಳೆ ಜೋರಾಗಿದ್ದು, ರಸ್ತೆಗಳಲ್ಲಿ ಜನರ ಓಡಾಟ, ವಾಹನಗಳ ಸಂಚಾರ ತೀರಾ ವಿರಳವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts