More

    ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಿ

    ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಚುರಪಡಿಸಲಾಗಿದ್ದು, ಅದರಲ್ಲಿ ಲೋಪದೋಷಗಳು ಕಂಡುಬಂದರೆ ದೂರು ಅಥವಾ ಮಾಹಿತಿ ನೀಡುವ ಮೂಲಕ ಮತದಾರರ ಪಟ್ಟಿಯ ಸಮರ್ಪಕ ಪರಿಷ್ಕರಣೆಗೆ ಸಹಕರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕ ಎಲ್.ಕೆ.ಅತೀಕ್ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ಮಾಡಿದರು.

    ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕ್ಕರಣೆ ಮಾಡಲಾಗುತ್ತಿದೆ. ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 8ರಂದು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಜನವರಿ 1ರಂದು ಪ್ರಕಟಿಸಲಾಗುವುದು ಎಂದರು. ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿಯೂ ಮತದಾರರ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು
    ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ಅವರಿಗೆ ಸೂಚಿಸಿದರು. ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ತಮ್ಮ ಕಾಲೇಜುಗಳಲ್ಲಿ ಮತದಾರರ ಪಟ್ಟಿಯಲ್ಲಿ ಅರ್ಹ ಯುವಕರು-ಯುವತಿಯರ ಹೆಸರು ಸೇರ್ಪಡೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

    ಜಿಲ್ಲಾದಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 4,434 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 3,255 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1,179 ಮತಗಟ್ಟೆಗಳಿವೆ. ಮತದಾರರ ಕರಡು ಪಟ್ಟಿಯನ್ನು ನ.9ರಂದು ಪ್ರಸಿದ್ಧಿಪಡಿಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಹಕ್ಕು ಮತ್ತು ಆಕ್ಷೇಪಣೆಗಳನ್ನು ನ.9ರಿಂದ ಡಿ.8ರವರೆಗೆ ಸ್ವೀಕರಿಸಲಾಗುತ್ತಿದೆ ಎಂದರು. ಕರಡು ಮತದಾರರ ಪಟ್ಟಿಯಲ್ಲಿ 19,16,797 ಪುರುಷರು ಹಾಗೂ 18,71,348 ಮಹಿಳೆಯರು ಮತ್ತು 121 ಇತರರು ಸೇರಿ ಒಟ್ಟಾರೆ 37,88,266 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಬೂತ್ ಮಟ್ಟದ ಏಜೆಂಟರ ನೇಮಕಕ್ಕೆ ಎಲ್ಲ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ಅಗತ್ಯ ಮಾಹಿತಿ ನೀಡುವಂತೆ ಶಾಸಕ ಪಿ.ರಾಜೀವ್ ತಿಳಿಸಿದರು. ಒಬ್ಬ ವ್ಯಕ್ತಿ ಒಂದೇ ಮತಕ್ಷೇತ್ರದ ಬೇರೆ ಬೇರೆ ಪಾರ್ಟ್‌ಗಳ ಮತಪಟ್ಟಿಯಲ್ಲಿ ಹೆಸರು ಹೊಂದಿರುವ ಮತದಾರರ ಹೆಸರನ್ನು ಒಂದು ಕಡೆ ತೆಗೆದುಹಾಕಲು ಯಾವ ರೀತಿ ಕ್ರಮಕೈಗೊಳ್ಳಲಾಗಿದೆ ಎಂದು ಪಿ.ರಾಜೀವ್ ಕೇಳಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಒಂದೇ ಮತಕ್ಷೇತ್ರದ ಎರಡು ಪ್ರದೇಶಗಳಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳ ಹೆಸರು ತೆಗೆದುಹಾಕುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದರು.

    ಕುಡಚಿ ಮತಕ್ಷೇತ್ರದಲ್ಲಿ ಕೆಲವು ಪ್ರದೇಶಗಳಲ್ಲಿ ಒಬ್ಬನೇ ವ್ಯಕ್ತಿಯ ಭಾವಚಿತ್ರ ಬೇರೆ ಭಾಗದ ಮತಪಟ್ಟಿಯಲ್ಲಿಯೂ ಇರುತ್ತದೆ. ಅಂತವುಗಳನ್ನು ಗುರುತಿಸಿ ಒಂದೇ ಕಡೆಯ ಮತಪಟ್ಟಿಯಲ್ಲಿ ಹೆಸರು ಉಳಿಸಲು ವಿಶೇಷ ಅಭಿಯಾನ ನಡೆಸಬೇಕು ಎಂದು ಶಾಸಕರು ಮನವಿ ಮಾಡಿದರು. ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು. ಜಿಪಂ ಸಿಇಒ ಎಚ್.ವಿ. ದರ್ಶನ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು. ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts