More

    ಮಣ್ಣು, ನೀರು ತುಂಬಿ ಉಳುಮೆಗೆ ಕುತ್ತು

    ಕಾರವಾರ: ಚತುಷ್ಪಥ ಗುತ್ತಿಗೆ ಪಡೆದ ಐಆರ್​ಬಿ ಕಂಪನಿ ಹಾಗೂ ಅಂಕೋಲಾ ತಾಲೂಕು ಆಡಳಿತದ ನಿರ್ಲಕ್ಷ್ಯಂದಾಗಿ ಬೆಳಸೆಯ ನೂರಾರು ಕೃಷಿಕರು ತಮ್ಮ ಭೂಮಿಯಲ್ಲಿ ಉಳುಮೆ ಮಾಡದಂತಾಗಿದೆ.

    ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥಕ್ಕಾಗಿ ಬೆಳೆಸೆಯಲ್ಲಿ ಸುಮಾರು 20 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಸ್ವಾಧೀನ ಮಾಡಿಕೊಂಡ ಜಮೀನನ್ನು ಬಿಟ್ಟು ಅಕ್ಕಪಕ್ಕದ ಜಮೀನಿನಲ್ಲಿ ಮಣ್ಣು ತುಂಬಲಾಗಿದೆ. ಅಲ್ಲದೆ, ಬೆಳೆಸೆ ಹಳ್ಳಕ್ಕೂ ಮಣ್ಣು ತುಂಬಿ ಬಂದ್ ಮಾಡಲಾಗಿದೆ.

    ಇದರಿಂದ ಬೆಳಸೆಯ 320 ಎಕರೆ ಜಮೀನಿನಲ್ಲಿ ನೀರು ತುಂಬಿ ಕೃಷಿಗೆ ಅಯೋಗ್ಯವಾಗಿದೆ. ನೀರು ಈಗ ಪಕ್ಕದಲ್ಲಿರುವ ಮನೆಗಳಿಗೂ ನುಗ್ಗುತ್ತಿದೆ. ಕಳೆದ ಮಳೆಗಾಲದಲ್ಲಿ ಇದೇ ಕಾರಣಕ್ಕೆ ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು.

    ಮೂರು ಬೆಳೆ: 74 ಸರ್ವೆ ನಂಬರ್​ಗಳಲ್ಲಿ 200ಕ್ಕೂ ಅಧಿಕ ರೈತರು ಕೃಷಿ ಮಾಡಿಕೊಂಡಿದ್ದಾರೆ. ಯಾರಿಗೂ 1 ಎಕರೆಗಿಂತ ಹೆಚ್ಚು ಜಮೀನಿಲ್ಲ. ಎಲ್ಲರೂ ತುಂಡು ಜಮೀನು ಹೊಂದಿದ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಮಳೆಗಾಲದಲ್ಲಿ ಭತ್ತ ಬೆಳೆದರೆ ಎರಡನೇ ಬೆಳೆಯಾಗಿ ಶೇಂಗಾ ನಂತರ ತರಕಾರಿ ಬೆಳೆಯುತ್ತಿದ್ದರು. ಒಟ್ಟಿನಲ್ಲಿ ಇಲ್ಲಿನ ಫಲವತ್ತಾದ ಭೂಮಿಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದರು. ಈಗ ಮೂರು ವರ್ಷದಿಂದ ಇಲಾಖೆ ಎಡವಟ್ಟಿನಿಂದ ರೈತರು ಕೂಲಿ ಕೆಲಸಕ್ಕೆ ಹೋಗುವಂತಾಗಿದೆ.

    ಇಲಾಖೆ ಮೌನ: ಹಳ್ಳಕ್ಕೆ ತುಂಬಿದ ಮಣ್ಣು ಬಿಡಿಸಿಕೊಡಬೇಕು. ನೀರು ಹರಿಯಲು ಕಲ್ವರ್ಟ್, ಗದ್ದೆಗೆ ಜನ- ಜಾನುವಾರು ಓಡಾಟಕ್ಕೆ ಅಂಡರ್ ಪಾಸ್ ನಿರ್ಮಾಣ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಗ್ರಾಮಸ್ಥರು ಈ ಕುರಿತು ಸಂಬಂಧಪಟ್ಟ ಎಲ್ಲ ಇಲಾಖೆಗೆ ದೂರು ನೀಡಿದ್ದಾರೆ. ಅದೆಷ್ಟೋ ಬಾರಿ ತಹಸೀಲ್ದಾರ್ ಕಚೇರಿಗೆ ಅಲೆದು ಸೋತಿದ್ದಾರೆ. ಕೆಲ ತಿಂಗಳ ಹಿಂದೆ ತಹಸೀಲ್ದಾರರು ಗುತ್ತಿಗೆ ಕಂಪನಿಯ ಇಂಜಿನಿಯರ್​ಗಳ ಜತೆ ಸ್ಥಳ ಪರಿಶೀಲನೆ ನಡೆಸಿ ಇಲ್ಲಿಯ ಜನರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಮಳೆ ಜೋರಾದರೂ ಭರವಸೆ ಮಾತ್ರ ಈಡೇರಿಲ್ಲ. ಈಗ , ತಹಸೀಲ್ದಾರರೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎನ್ನಲಾಗಿದೆ.

    ಕೃಷಿ ಜಮೀನನ್ನು ಅತಿ ಕಡಿಮೆ ಬೆಲೆಗೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಭೂ ಸ್ವಾಧೀನವಾಗದ ನೂರಾರು ಎಕರೆ ಭೂಮಿಯಲ್ಲೂ ಕೃಷಿ ಮಾಡದಂತಾಗಿದೆ. ಇದನ್ನೇ ನಂಬಿದ ಬಡ ಕುಟುಂಬಗಳು ಜೀವನ ನಿರ್ವಹಣೆಗೆ ಏನು ಮಾಡಬೇಕು. ಇಲಾಖೆಗೆ ಅಲೆಯುವುದೇ ನಮ್ಮ ಕೆಲಸವಾ? | ಟಿ.ಕೆ.ಗೌಡ ಬೆಳಸೆ ಗ್ರಾಮಸ್ಥ

    ಕುಮಟಾ ಎಸಿ ಅವರಿಗೆ ಈ ಸಂಬಂಧ ಮಾಹಿತಿ ನೀಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಲಾಗುವುದು. | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts