More

    ಮಣ್ಣು ಕುಸಿದು ಕಾರ್ಮಿಕ ದುರ್ಮರಣ

    ತಿ.ನರಸೀಪುರ: ತಾಲೂಕಿನ ಸುಜ್ಜಲೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿದ್ದ ಕೊಳವೆ ಬಾವಿಗೆ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಮಣ್ಣು ಕುಸಿದು ಕಾರ್ಮಿಕ ಭಾನುವಾರ ಸಾವಿಗೀಡಾಗಿದ್ದಾನೆ.


    ಚಾಮರಾಜನಗರ ಜಿಲ್ಲೆ ಬಿಎಂಕೆ ಹುಂಡಿ ಗ್ರಾಮದ ಲೇಟ್ ಮಹದೇವೇಗೌಡ ಅವರ ಪುತ್ರ ಮಲ್ಲೇಶ್(34) ಮೃತಪಟ್ಟ ಕಾರ್ಮಿಕ.


    ಸುಜ್ಜಲೂರು ಗ್ರಾಮದ ನಿಂಗಪ್ಪ ಅವರ ಜಮೀನಿನಲ್ಲಿ ನೀರೆತ್ತುವ ಮೋಟಾರ್‌ಗೆ ಹಾಕಲಾಗಿದ್ದ ಕೇಸಿಂಗ್ ಪೈಪ್ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಹೊಸ ಕೇಸಿಂಗ್ ಪೈಪ್ ಅಳವಡಿಸಲು ಜೆಸಿಬಿ ಯಂತ್ರದ ಮೂಲಕ ಹಳ್ಳ ತೋಡಲಾಗಿತ್ತು. ಭಾನುವಾರ ಬೆಳಗ್ಗೆ ಕೂಲಿಕಾರ್ಮಿಕ ಮಲ್ಲೇಶ್, ಮಾಧು ಹಾಗೂ ಜಮೀನಿನ ಮಾಲೀಕ ನಿಂಗಪ್ಪ ಕೇಸಿಂಗ್ ಪೈಪ್ ಹಾಕಲು ಶಿಥಿಲಗೊಂಡ ಪೈಪಿನ ಸುತ್ತ ಇದ್ದ ಮಣ್ಣನ್ನು ತೆಗೆಯಲು ಹೋದಾಗ ಹಠಾತ್ ಆಗಿ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಮೂವರೂ ಮಣ್ಣಿನಡಿ ಸಿಲುಕಿಕೊಂಡರು.

    ಕೂಡಲೇ ಸ್ಥಳದಲ್ಲಿದ್ದವರು ಮಣ್ಣಿನಡಿ ಸಿಲುಕಿದ್ದ ಜಮೀನು ಮಾಲೀಕ ನಿಂಗಪ್ಪ ಹಾಗೂ ಮಾಧು ಅವರನ್ನು ಕಂದಕದಿಂದ ಮೇಲೆತ್ತಿದರು. ಆದರೆ ತೀವ್ರವಾದ ಆಳದಲ್ಲಿ ಸಿಲುಕಿ ಮಣ್ಣಿನಿಂದ ಮುಚ್ಚಿಹೋಗಿದ್ದ ಮಲ್ಲೇಶ್ ಅವರನ್ನು ಮೇಲೆತ್ತಲಾಯಿತಾದರೂ ಅಷ್ಟರಲ್ಲಾಗಲೇಮೃತಪಟ್ಟಿದ್ದರು. ಗಾಯಗೊಂಡ ಮಾಧು ಹಾಗೂ ನಿಂಗಪ್ಪ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು.


    ಮಲ್ಲೇಶ್ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದು, ಶವದ ಮುಂದೆ ತಾಯಿಯ ರೋದನ ಮುಗಿಲು ಮುಟ್ಟಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts