More

    ಮಠಗಳಿಂದ ಸಂಸ್ಕೃತಿ, ಸಂಸ್ಕಾರ ತಿಳಿಸುವ ಕಾರ್ಯ

    ಹಾವೇರಿ: ಇಂದು ನಮ್ಮಲ್ಲಿ ನಾಗರಿಕತೆ ಬೆಳೆದಿದ್ದು, ಸಂಸ್ಕೃತಿ ಮರೆಯಾಗುತ್ತಿದೆ. ಸಂಸ್ಕೃತಿ, ಸಂಸ್ಕಾರ ತಿಳಿಸುವ ಮಹತ್ತರ ಕಾರ್ಯವನ್ನು ನಮ್ಮ ಮಠಗಳು ಮಾಡುತ್ತಿವೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದ ಹುಕ್ಕೇರಿ ಮಠದಲ್ಲಿ ಲಿಂ. ಶಿವಬಸವ ಸ್ವಾಮಿಗಳ 74ನೇ ಹಾಗೂ ಲಿಂ. ಶಿವಲಿಂಗ ಸ್ವಾಮಿಗಳ 11ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ನಮ್ಮೂರು ಜಾತ್ರೆಯ 3ನೇ ದಿನದ ಧಾರ್ವಿುಕ ಸಮಾರಂಭದಲ್ಲಿ ಅವರು ಮಾತನಾಡಿದರು.

    ನಮ್ಮ ಉತ್ಕೃಷ್ಟವಾದ ಪ್ರೀತಿಯೇ ಭಕ್ತಿಯಾಗಿದೆ. ಭಕ್ತಿ ಹಾಗೂ ಭಾವದಿಂದ ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಯುತ್ತದೆ. ಭಕ್ತಿ, ಸಂಸ್ಕಾರ, ಸಂಸ್ಕೃತಿಯಿಲ್ಲದ ಕಡೆಯಲ್ಲಿ ಅಹಂಭಾವ ಹೆಚ್ಚುತ್ತದೆ. ಬರ್ವ ದೇಶ ಗುಡ್ಡಗಾಡಿನಿಂದ ಕೂಡಿದೆ. ಅಲ್ಲಿ ಒಂದೇ ಒಂದು ಪೊಲೀಸ್ ಠಾಣೆಯಿಲ್ಲ. ಅಲ್ಲಿನ ಜನ ಪ್ರತಿ ರಾತ್ರಿ ಒಂದು ಕಟ್ಟೆಯಲ್ಲಿ ಸೇರಿ ತಮಗೆ ಬಿದ್ದ ಕನಸನ್ನು ಹಂಚಿಕೊಳ್ಳುತ್ತಾರೆ. ಕನಸಿನಲ್ಲಿ ಯಾರಿಗಾದರೂ ಕೇಡು ಬಗೆದಿದ್ದರೆ ಅವರ ಮನೆಗೆ ಹೋಗಿ ಹಣ್ಣು ಕೊಟ್ಟು ಕ್ಷಮೆ ಕೋರುತ್ತಾರೆ. ಕನಸಿಗೂ ಅವರು ಬೆಲೆ ಕೊಟ್ಟು ತಮ್ಮಲ್ಲಿರುವ ಅಹಂ ತೊರೆಯುತ್ತಾರೆ. ಹೀಗಾಗಿ ಅಲ್ಲಿ ವ್ಯಾಜ್ಯಗಳೇ ಬಂದಿಲ್ಲ. ನಮ್ಮಲ್ಲಿಯೂ ಭಕ್ತಿ ಬೆಳೆದರೆ ಅಹಂ ನಾಶವಾಗುತ್ತದೆ ಎಂದು ಹೇಳಿದರು.

    ಹುಕ್ಕೇರಿಮಠಕ್ಕೆ ತನ್ನದೇ ಆದ ಪರಂಪರೆಯಿದೆ. ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಶತಮಾನಗಳಿಂದ ಮಾಡುತ್ತ ಬಂದಿದೆ. ಇಲ್ಲಿನ ಪೂಜ್ಯರು ಅದಕ್ಕೆ ಭವ್ಯ ಪರಂಪರೆ ಹಾಕಿಕೊಟ್ಟಿದ್ದಾರೆ. ಇಲ್ಲಿಗೆ ಬರುವ ಭಕ್ತರ ಬದುಕಿನಲ್ಲಿ ಜ್ಯೋತಿ ಬೆಳಗಿಸಿ ಸನ್ಮಾರ್ಗ ತೋರುತ್ತಿದ್ದಾರೆ ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಮಾಜವನ್ನು ತಿದ್ದುವ ಉದ್ದೇಶದಿಂದ ಮಠಗಳು ಆರಂಭಗೊಂಡವು. ಆದರೆ, ಇಂದು ಅವುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನೀಯ. ನಾವೆಲ್ಲರೂ ಸಮರ್ಪಣಾ ಮನೋಭಾವದಿಂದ ಮಠಗಳನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕು ಎಂದರು.

    ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಜು ನದಾಫ ಅವರನ್ನು ಮಠದಿಂದ ಸನ್ಮಾನಿಸಲಾಯಿತು. ಕನ್ನಡ ಕೋಗಿಲೆ ಸಿಜನ್ 2ರ ವಿಜೇತ ಖಾಸಿಂ ಅಲಿ ಬಿದರಗಡ್ಡಿ ಸಂಗೀತ ಪ್ರಸ್ತುತಪಡಿಸಿದರು.

    ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಸೇಡಂನ ಕೊತ್ತಲ ಬಸವೇಶ್ವರ ಮಠದ ಸದಾಶಿವ ಸ್ವಾಮೀಜಿ, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯರು, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಶಾಸಕ ನೆಹರು ಓಲೇಕಾರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಎಸ್​ಪಿ ಕೆ.ಜಿ. ದೇವರಾಜ್, ಜಿ.ಪಂ. ಸಿಇಒ ರಮೇಶ ದೇಸಾಯಿ, ಬಸವರಾಜ ಅರಬಗೊಂಡ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಡಾ. ಬಸವರಾಜ ಕೇಲಗಾರ, ಪ್ರಕಾಶ ಶೆಟ್ಟಿ, ತಮ್ಮಣ್ಣ ಮುದ್ದಿ, ಶಿವಪ್ಪ ಗುಂಜೆಟ್ಟಿ ಇತರರಿದ್ದರು. ಎಸ್.ಎಸ್. ಮುಷ್ಠಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಕೆ.ಆರ್. ನಾಶೀಪುರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts