More

    ಮಟನ್ ಪ್ರಿಯರಿಗೆ ಕಹಿಯಾದ ದರ

     ಉಡುಪಿ: ಕಳೆದ ಕೆಲವು ದಿನಗಳಿಂದ ಆಡು/ಕುರಿ ಮಾಂಸ (ಮಟನ್) ದರ ಗಗನಕ್ಕೇರಿದೆ. ಕೆಲ ದಿನಗಳ ಹಿಂದಷ್ಟೇ 400-450 ರೂಪಾಯಿ ಇದ್ದ ಕೆ.ಜಿ. ದರ ಈಗ 600ರ ಗಡಿ ತಲುಪಿದೆ. ಕರಾವಳಿಯ ಮಾರುಕಟ್ಟೆಯಲ್ಲಿ ಮಟನ್‌ಗೆ ವಿಶೇಷ ಬೇಡಿಕೆ ಸಾಮಾನ್ಯ. ಆದರೆ ದರ ಏರಿಕೆಯಿಂದಾಗಿ ಕೆಲವು ದಿನಗಳಿಂದ ಮಾರಾಟ ಕುಂದಿದೆ. ಕಾರವಾರ, ಉಡುಪಿ, ಮಂಗಳೂರು ಭಾಗದಲ್ಲಿ ಹೋಲ್‌ಸೇಲ್ ಮತ್ತು ಸಣ್ಣ ವ್ಯಾಪಾರಿಗಳ ಅಂಗಡಿಗಳು ಸಾವಿರಕ್ಕೂ ಮೇಲಿವೆ. ನಗರ ಭಾಗದಲ್ಲಿ ಹೋಲ್‌ಸೇಲ್ ವ್ಯಾಪಾರ ಹೆಚ್ಚಿದ್ದರೆ ನಗರ ಭಾಗದಲ್ಲಿ ಸಣ್ಣ ಮತ್ತು ಮಧ್ಯಮ ವಹಿವಾಟು ನಡೆಯುತ್ತದೆ. ಈಗ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಮಟನ್‌ಗೆ 550 ರೂ, ಸ್ಪೆಷಲ್‌ಗೆ 600 ರೂ. ದರವಿದೆ. ವಾರದ ಹಿಂದೆ ಕೆ.ಜಿ.ಗೆ 400ರಿಂದ 450 ರೂ. ಇತ್ತು. ಬಳಿಕ 500ರಿಂದ 550 ರೂ. ಗಡಿ ದಾಟಿ 600 ರೂಪಾಯಿಗೆ ತಲುಪಿದೆ.

    ಹೊರ ರಾಜ್ಯದಿಂದ ಪೂರೈಕೆ: ಕರಾವಳಿ ಜಿಲ್ಲೆಗಳಿಗೆ ಉತ್ತರ ಕರ್ನಾಟಕ ಭಾಗದಿಂದ ಕುರಿಗಳು ಪೂರೈಕೆಯಾಗುತ್ತವೆ. ಜತೆಗೆ ಮಹಾರಾಷ್ಟ್ರ (ಬಾಂಬೆ ಸಿಟಿ ಮಾರ್ಕೆಟ್), ಗುಜರಾತ್ ಜೈಪುರದಿಂದಲೂ ಬರುತ್ತದೆ. ರಾಜ್ಯ ಮತ್ತು ಹೊರ ರಾಜ್ಯದಿಂದ ಬರುವ ಕುರಿಗಳನ್ನು ವ್ಯಾಪಾರಿಗಳು ಎರಡು ವಿಭಾಗದಲ್ಲಿ ವರ್ಗೀಕರಿಸುತ್ತಾರೆ. ಕರ್ನಾಟಕ ಸ್ಥಳೀಯ ಬ್ರೀಡ್‌ಗೆ ಕಪ್ಪು ಕುರಿ, ಹೊರ ರಾಜ್ಯದ ಕುರಿಗೆ ಬಿಳಿ ಕುರಿ ಎನ್ನಲಾಗುತ್ತದೆ. ಉತ್ತರ ಕರ್ನಾಟಕ, ಮಂಡ್ಯ ಭಾಗದ ಕುರಿಗಳಿಗೆ ಬೇಡಿಕೆ ಮತ್ತು ದರ ಹೆಚ್ಚಿದೆ. ಬನ್ನೂರು ಸ್ಪೆಷಲ್ ಕುರಿ ಮಾಂಸ ಬಹು ಬೇಡಿಕೆಯದ್ದು.

     ದರ ಏರಿಕೆಗೆ ಕಾರಣಗಳೇನು?: ಕರ್ನಾಟದಲ್ಲಿ ಕುರಿ ಸಾಕಾಣಿಕೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಹೊರ ರಾಜ್ಯಗಳಿಂದ ತರಬೇಕಾಗಿದೆ. ಮಹಾರಾಷ್ಟ್ರ, ಗುಜರಾತ್‌ನಿಂದ ಬರುವ ಕುರಿಗಳಿಗೆ ಸಾರಿಗೆ ವೆಚ್ಚ ದುಪ್ಪಟ್ಟಾಗುತ್ತದೆ. ಜಿಎಸ್‌ಟಿ, ಮಳಿಗೆ ಬಾಡಿಗೆ ಏರಿಕೆಯಾಗಿರುವುದು, ಇತ್ತೀಚೆಗೆ ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಪೂರೈಕೆ ವ್ಯವಸ್ಥೆಗೆ ತೊಡಕಾಗಿರುವುದು ಕೂಡ ದರ ಏರಿಕೆಗೆ ಕಾರಣ ಎನ್ನುತ್ತಾರೆ ಮಟನ್ ವ್ಯಾಪಾರಿಗಳು.

    ಕಳೆದ ಕೆಲವು ದಿನಗಳಿಂದ ಮಟನ್ ದರ ಏರಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಕುಂದಿದೆ. ಹೇಳಿಕೊಳ್ಳುವಷ್ಟು ವ್ಯಾಪಾರವಿಲ್ಲ. ಡಿಸೆಂಬರ್ 31 ಮತ್ತು ಹೊಸ ವರ್ಷ ಆಚರಣೆ ಒಂದೆರಡು ದಿನ ಮಟನ್ ಮಾರಾಟ ಉತ್ತಮವಾಗಿದೆ. ಈಗ ಮತ್ತೆ ಅದೇ ಪರಿಸ್ಥಿತಿ ಮುಂದುವರಿದಿದೆ. ಉತ್ತರ ಕರ್ನಾಟಕ ಮತ್ತು ಹೊರ ರಾಜ್ಯಗಳಿಂದ ಕುರಿ ಪೂರೈಕೆಯಾಗುತ್ತವೆ. ಜಿಎಸ್‌ಟಿ, ಸಾಗಾಟ ವೆಚ್ಚ ದುಬಾರಿಯಾಗಿರುವುದು ಬೆಲೆ ಏರಿಕೆಗೆ ಕಾರಣ.
    – ರಮೇಶ್ ಮಂಡಲ್‌ಕರ್, ಆದಿ ಉಡುಪಿ, ಮಟನ್ ಶಾಪ್ ಮಾಲೀಕ

    ನಾವು ಮಂಗಳೂರಿನ ಮಂಡಿಯಿಂದ ಮಟನ್ ತಂದು ವ್ಯಾಪಾರ ಮಾಡುತ್ತೇವೆ. ಕೆಲದಿನಗಳಿಂದ ಮಾರುಕಟ್ಟೆ ದರ 550ರಿಂದ 600 ರೂ. ಆಗಿದೆ. ಸ್ಟಾಕ್ ಬಾರದ ಕಾರಣ ಮಟನ್ ದರ ಏರಿಕೆಯಾಗಿದೆ ಎಂದು ಮಂಡಿ ವ್ಯಾಪಾರಿಗಳು ಹೇಳುತ್ತಾರೆ. ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
    ಮುಸಾಫರ್, ಮಟನ್ ವ್ಯಾಪಾರಿ, ಕಾವೂರು, ಮಂಗಳೂರು


    – ಅವಿನ್ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts