More

    ಮಕ್ಕಳಿಗೂ ವಿಶೇಷ ತರಬೇತಿ

    ಧಾರವಾಡ: ಜಿಲ್ಲೆಯ ವಿವಿಧ ಕೈಗಾರಿಕೆಗಳಲ್ಲಿ ಖಾಲಿ ಇರುವ ಉದ್ಯೋಗ, ಅಗತ್ಯ ಮಾನವ ಸಂಪನ್ಮೂಲ ಹಾಗೂ ಕೌಶಲಾಭಿವೃದ್ಧಿ ಹೊಂದಿದ ಉದ್ಯೋಗಾಕಾಂಕ್ಷಿಗಳ ಮಾಹಿತಿ ಒಳಗೊಂಡ ಜಿಲ್ಲಾ ಮಟ್ಟದ ಕ್ರಿಯಾ ಯೋಜನೆ ರೂಪಿಸಲಾಗುವುದು. 14 ರಿಂದ 18 ವರ್ಷದೊಳಗಿನ ಮಕ್ಕಳಿಗೂ ವಿಶೇಷ ತರಬೇತಿ ನೀಡುವ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಧಾರವಾಡ ಜಿಲ್ಲೆಯಿಂದ ಪ್ರಾರಂಭಿಸಲಾಗುವುದು ಎಂದು ರಾಜ್ಯ ಕೌಶಲಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೌಶಲ ಮಿಷನ್ ಕುರಿತ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವಾಣಿಜ್ಯೋದ್ಯಮ ಸಂಸ್ಥೆ, ಉದ್ಯಮಗಳೊಂದಿಗೆ ಜಿಲ್ಲಾಡಳಿತ ರ್ಚಚಿಸಿ ಯಾವ ಹಂತದ ಕಾರ್ವಿುಕರು ಎಷ್ಟು ಸಂಖ್ಯೆಯಲ್ಲಿ ಅಗತ್ಯವಿದೆ ಎಂಬ ಮಾಹಿತಿ ಸಂಗ್ರಹಿಸಬೇಕು. ಉದ್ಯಮಗಳು, ಕೌಶಲಾಭಿವೃದ್ಧಿ ಕೇಂದ್ರಗಳು ಹಾಗೂ ಇಲಾಖೆಗಳು ಜಿಲ್ಲಾಡಳಿತದೊಂದಿಗೆ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದರು.

    ನೋಂದಾಯಿತ ತರಬೇತಿ ಕೇಂದ್ರಗಳ ಜತೆ ಸರ್ಕಾರದಿಂದಲೂ ತರಬೇತಿ ನೀಡುವ ಉದ್ದೇಶವಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಮುಂದುವರಿಸಿ ತರಬೇತಿ ನೀಡಲಾಗುವುದು. ಗೋಕುಲ ಕೈಗಾರಿಕೆ ಪ್ರದೇಶದಲ್ಲಿ ಆರಂಭಿಕವಾಗಿ ತರಬೇತಿ ನೀಡಲಾಗುವುದು. ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಒಂದೆಡೆ ಸೇರಿ ಕಾರ್ಯಕ್ರಮಗಳನ್ನು ಸಮಗ್ರವಾಗಿ ಜಾರಿಗೊಳಿಸಬೇಕು ಎಂದರು.

    ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 7,694 ಕೌಶಲಾಭಿವೃದ್ಧಿ ಗುರಿ ಹೊಂದಿದ್ದು, ಈವರೆಗೆ 6,396 ಸಾಧಿಸಲಾಗಿದೆ. ಖಾಸಗಿ, ಸರ್ಕಾರೇತರ ಅಭಿವೃದ್ಧಿ ಸಂಸ್ಥೆಗಳು ಬಹುತೇಕ ಹೊಲಿಗೆ, ಡಾಟಾ ಎಂಟ್ರಿ ತರಬೇತಿ ನೀಡುತ್ತಿವೆ. ಈ ಸಾಂಪ್ರದಾಯಿಕ ತರಬೇತಿಗಳ ಜತೆಗೆ ಹೊಸ ತರಬೇತಿ ಕಾರ್ಯಕ್ರಮ ರೂಪಿಸಬೇಕು. ಯಾವ ಕ್ಷೇತ್ರದಲ್ಲಿ ಬೇಡಿಕೆ ಇದೆ ಎಂಬುದನ್ನು ಗುರುತಿಸಿ ಆ ರಂಗದಲ್ಲಿ ಸಾಮರ್ಥ್ಯ ಹೆಚ್ಚಿಸುವ ಅಗತ್ಯವಿದೆ ಎಂದರು.

    ಕೈಗಾರಿಕೆಗಳು ತನ್ನ ನೌಕರರಿಗೆ ನಿಯಮಾನುಸಾರ ಸಮರ್ಪಕ ಸಂಬಳ, ಭತ್ಯೆ ನೀಡಬೇಕು. ಮಹಿಳಾ ಉದ್ಯೋಗಿಗಳಿಗೆ ಮೇಲ್ವಿಚಾರಣೆ ಹೆಸರಿನಲ್ಲಿ ತೊಂದರೆ ನೀಡದಂತೆ ಅವರೊಂದಿಗೆ ವಿಶ್ವಾಸದಿಂದ ವರ್ತಿಸುವ ನುರಿತ ಮಹಿಳಾ ಮೇಲ್ವಿಚಾರಕಿಯರನ್ನು ನೇಮಿಸಿ ಅವರಿಗೆ ಆಪ್ತ ಸಮಾಲೋಚನೆಯ ಕೌಶಲ ಕಲಿಸಬೇಕು ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಕೌಶಲಾಭಿವೃದ್ಧಿ ಪ್ರಾಧಿಕಾರದ ಸಲಹೆಗಾರ ಅಮಲನ್, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಚಂದ್ರಪ್ಪ, ಕೈಗಾರಿಕಾ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ, ಸಿಡಾಕ್​ನ ಚಂದ್ರಶೇಖರ ಅಂಗಡಿ, ವಿವಿಧ ಉದ್ಯಮ, ಸಂಸ್ಥೆಗಳ ಪ್ರತಿನಿಧಿಗಳು, ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರರು ಇದ್ದರು.

    ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ನಿರಂತರವಾಗಿ ಕೌಶಲಾಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಹಾಗೂ ಹಂತಗಳನ್ನು ಆಧರಿಸಿ ಜಿಲ್ಲಾ ಮಟ್ಟದ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು.

    | ದೀಪಾ ಚೋಳನ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts