More

    ಮಕ್ಕಳಲ್ಲಿ ಕಾಡುತ್ತಿದೆ ಸಂಸ್ಕಾರದ ಕೊರತೆ


    ಹಾಸನ : ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಡುತ್ತಿದ್ದು, ಅದನ್ನು ನೀಗಿಸುವ ಕೆಲಸ ಆಗಬೇಕಿದೆ ಎಂದು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎನ್.ಅಶೋಕ್ ಹೇಳಿದರು.


    ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಚನ್ನರಾಯಪಟ್ಟಣ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


    ಸಾಹಿತ್ಯದ ಬೇರುಗಳನ್ನು ಗಟ್ಟಿಗೊಳಿಸಲು ಮಕ್ಕಳನ್ನು ಆ ನಿಟ್ಟಿನಲ್ಲಿ ಬೆಳೆಸುವ ಉದ್ದೇಶ ಪರಿಷತ್ತಿಗಿದೆ. ಈವರೆಗೆ ಪರಿಷತ್ತಿನಿಂದ ನೂರಾರು ಮಕ್ಕಳು ಪ್ರೇರಣೆ ಪಡೆದಿದ್ದು, ಉತ್ತಮ ಸಾಹಿತ್ಯ ಸೃಷ್ಟಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಡುತ್ತಿದ್ದು, ಅದನ್ನು ನೀಗಿಸುವ ಕೆಲಸ ಆಗಬೇಕಿದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಘಟಕ ತೆರೆದು ಸಾಹಿತ್ಯ ಹಾಗೂ ಪರಿಸರಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಸ್ಕಾರ ತುಂಬಬೇಕಿದೆ ಎಂದು ಪರಿಷತ್ತಿನ ಪದಾಧಿಕಾರಿಗಳಿಗೆ ಮನವಿ ಮಾಡಿದರು.


    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ರಾಮೇಗೌಡ ಮಾತನಾಡಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಮುಸ್ಕಾನ್‌ಗೆ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಲಾಯಿತು.


    ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎ.ಎಲ್.ನಾಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದೇಶ್, ಸಂಚಾಲಕ ಎ.ಎಂ.ಜಯರಾಂ, ಪದಾಧಿಕಾರಿಗಳಾದ ಸೋಮಶೇಖರ್, ಸಿ.ಎಸ್.ಮನೋಹರ್, ಲಕ್ಷ್ಮೀನಾರಾಯಣ ಗುಪ್ತ, ರವಿಕುಮಾರ್ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts