More

    ಭೂತಾಯಿಗೆ ರೈತರಿಂದ ಚರಗದ ನೈವೇದ್ಯ

    ರೋಣ: ಉತ್ತರ ಕರ್ನಾಟಕದಲ್ಲಿ ರೈತರ ಪ್ರಮುಖ ಹಬ್ಬ ಎಳ್ಳಮಾವಾಸ್ಯೆಯನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

    ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಂಡು, ಬುತ್ತಿ ಕಟ್ಟಿಕೊಂಡು ಜಮೀನುಗಳಿಗೆ ತೆರಳಿ ರೈತರು ಭೂಮಿತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಚರಗ ಚಲ್ಲಿದರು.

    ಹೆಣ್ಣು ಮಕ್ಕಳು ಜೋಳದ ಹೊಲದಲ್ಲಿ ಬನ್ನಿ ಮರ ಹಾಗೂ ಪಾಂಡವರಿಗೆ ಪೂಜೆ ಸಲ್ಲಿಸಿದರು. ಬಾನದ ನೈವೇದ್ಯವನ್ನು ಬೆಳೆಗಳಿಗೆ ಅರ್ಪಿಸಿದರು. ನಂತರ ಎಲ್ಲರೂ ಮರದ ಕೆಳಗೆ ಕುಳಿತು ಸಜ್ಜೆ ಕಡಬು, ಪುಂಡಿಪಲ್ಲೆ, ಶೇಂಗಾ ಹೋಳಿಗೆ, ಎಳ್ಳಿನ ಹೋಳಿಗೆ, ಸಜ್ಜಿ ಹಾಗೂ ಜೋಳದ ಖಡಕ್ ರೊಟ್ಟಿ, ಶೇಂಗಾ, ಅಗಸಿ, ಚಟ್ನಿ, ಅನ್ನ, ಸಾಂಬಾರು, ಹಪ್ಪಳ, ಸಂಡಿಗೆ ಸೇರಿ ವಿವಿಧ ಭಕ್ಷ್ಯಳನ್ನು ಸವಿದು ಸಂಭ್ರಮಪಟ್ಟರು.

    ಬೆಳೆ, ಎತ್ತುಗಳಿಗೆ ವಿಶೇಷ ಪೂಜೆ

    ಮುಂಡರಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ರೈತರು ಬುಧವಾರ ಎಳ್ಳಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ಚಕ್ಕಡಿ, ಟ್ರ್ಯಾಕ್ಟರ್ ಮೊದಲಾದ ವಾಹನಗಳಲ್ಲಿ ಹೊಲಗಳಿಗೆ ರೈತರು ತಮ್ಮ ಹೊಲದಲ್ಲಿ ಐದು ಕಲ್ಲುಗಳಿಂದ ಪಾಂಡವರನ್ನು ಪ್ರತಿಷ್ಠಾಪಿಸಿ ಅವುಗಳಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಬೆಳೆ ಹಾಗೂ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಎತ್ತುಗಳಿಗೆ ಬೆಲ್ಲ ಕೊಬ್ಬರಿ ತಿನ್ನಿಸಿದರು. ಬಳಿಕ ವಿವಿಧ ಬಗೆಯ ಖಾದ್ಯಗಳ ಸವಿ ಸವಿದರು.

    ಸರಳ, ಸಾಂಪ್ರದಾಯಿಕ ಆಚರಣೆ

    ಲಕ್ಷ್ಮೇಶ್ವರ: ಮುಂಗಾರಿನಲ್ಲಿ ಪ್ರವಾಹ, ಅತಿವೃಷ್ಟಿ, ಕರೊನಾ ಹಾವಳಿ ಮತ್ತು ಹಿಂಗಾರಿನಲ್ಲಿ ಅಕಾಲಿಕ ಮಳೆಯಿಂದ ಬೆಳೆಹಾನಿ ಅನುಭವಿಸಿ ಸಂಕಷ್ಟದಲ್ಲಿರುವ ರೈತ ಸಮುದಾಯ ಬುಧವಾರ ಲಕ್ಷ್ಮೇಶ್ವರ ಸೇರಿ ತಾಲೂಕಿನ ಅಲ್ಲಲ್ಲಿ ಎಳ್ಳಮಾವಾಸ್ಯೆಯನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

    ಹಿಂಗಾರಿನಲ್ಲಿನ ಬೆಳೆಗಳು ತೆನೆ, ಕಾಯಿ ಕಟ್ಟಿ ಫಲ ಕೊಡುವ ಹಂತದಲ್ಲಿ ಭೂತಾಯಿಗೆ ಉಡಿ ತುಂಬಿ, ಧನ್ಯತೆಯ ಭಾವದೊಂದಿಗೆ ಪೂಜೆ ಸಲ್ಲಿಸಿದರು. ಹಿಂಗಾರಿ ಬೆಳೆಗಳಾದ ಜೋಳ, ಕಡಲೆ, ಗೋದಿ, ಕುಸುಬೆ ಬೆಳೆದ ಜಮೀನುಗಳಿಗೆ ಮನೆ ಮಂದಿ, ಬಂಧುಗಳು, ನೆರೆಹೊರೆಯವರೆಲ್ಲ ಸೇರಿ ಟ್ರ್ಯಾಕ್ಟರ್, ಚಕ್ಕಡಿ ಮತ್ತಿತರ ವಾಹನಗಳಲ್ಲಿ ತೆರಳಿ ಸಹಭೋಜನ ಸವಿಯುತ್ತಾರೆ.

    ಪಾಂಡವರ ಪ್ರತಿಷ್ಠಾಪಿಸಿ ಪೂಜೆ

    ಡಂಬಳ: ರೈತರು ಹಿಂಗಾರಿಯಲ್ಲಿ ಬಿತ್ತನೆ ಮಾಡಿದ ಜೋಳ, ಕಡಲೆ, ಗೋಧಿ ಬೆಳೆಗಳ ನಡುವೆ ಪಾಂಡವರನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಿ, ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

    ಡಂಬಳ ವ್ಯಾಪ್ತಿಯ ಯಕ್ಲಾಸಪೂರ, ಹೈತಾಪೂರ, ಜಂತ್ಲಿಶಿರೂರು, ಕದಾಂಪುರ, ಪೇಠಾಲೂರು, ಮೇವುಂಡಿ, ಹಳ್ಳಿಕೇರಿ, ಹಳ್ಳಗುಡಿ, ವೆಂಟಾಪುರ, ಬರದೂರ, ಸೇರಿದಂತೆ ರೈತಾಪಿ ಮಂದಿ ಚಕ್ಕಡಿ, ಆಟೋ, ಟ್ರ್ಯಾಕ್ಟರ್​ಗಳಲ್ಲಿ ಹೊಲಗಳಿಗೆ ತೆರಳಿ ಸಹಭೋಜನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts