More

    ಭೂಕಬಳಿಕೆ ತನಿಖೆಯಾಗಲಿ- ಪಾಲಿಕೆ ಬಿಜೆಪಿ ಸದಸ್ಯರ ಆಗ್ರಹ

    ದಾವಣಗೆರೆ: ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದಲ್ಲಿ ಸರ್ಕಾರಿ ಭೂಮಿ ಕಬಳಿಕೆಯಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪಾಲಿಕೆ ಉಪ ಮೇಯರ್ ಯಶೋದಾ ಯಗ್ಗಪ್ಪ ಹಾಗೂ ಬಿಜೆಪಿ ಸದಸ್ಯರು ಸ್ಪಷ್ಟಪಡಿಸಿದರು.
    ನಗರದ ಎಸ್.ಎಸ್.ಬಡಾವಣೆ 23 ನೇ ವಾರ್ಡ್‌ನ ಖಾಲಿ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪರಿಶೀಲಿಸಿದಾಗ ವ್ಯಕ್ತಿಯೊಬ್ಬರು ಎರಡು ಡೋರ್ ನಂಬರ್‌ಗಳ ನಿವೇಶನವನ್ನು ಇಬ್ಬರಿಗೆ ಮಾರಾಟ ಮಾಡಿದ್ದಾರೆ. ಪಾಲಿಕೆಯಿಂದ ಕಳೆದ ಜೂನ್‌ನಲ್ಲಿ ಆಸ್ತಿ ವಿತರಣೆ ಮಾಡಲಾಗಿದೆ ಎಂದು ಸದಸ್ಯರಾದ ಎಸ್.ಟಿ.ವೀರೇಶ್, ಪ್ರಸನ್ನಕುಮಾರ್ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಜೂನ್‌ನಲ್ಲಿ ನಡೆದ ಅಕ್ರಮದ ಹೊಣೆಯನ್ನು ಕಾಂಗ್ರೆಸ್ಸಿಗರು ಬಿಜೆಪಿ ಮೇಲೆ ಹೊರಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರದೇ ಆಡಳಿತದಲ್ಲಿ ಅಕ್ರಮ ವಿರುದ್ಧ ತನಿಖೆಯನ್ನೇಕೆ ನಡೆಡಲಿಲ್ಲ ಎಂದು ಪ್ರಶ್ನಿಸಿದರು.
    23ನೇ ವಾರ್ಡ್‌ನ ನಿವೇಶನ ತಮ್ಮದೆಂದು ಹೇಳುವ ವ್ಯಕ್ತಿ ಯಾರು? ಅವರು ಸಲ್ಲಿಸಿರುವ ದಾಖಲೆ ಅಸಲಿಯೋ, ನಕಲಿಯೋ ಅಥವಾ ಬೇನಾಮಿಯೋ ಎಂಬುದರ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.
    ಸರ್ಕಾರಿ ಭೂಮಿ ಅಕ್ರಮ ಪರಭಾರೆ ಆಗಬಾರದೆಂಬುದು ನಮ್ಮ ನಿಲುವು. ಪಾಲಿಕೆಯಲ್ಲಿ 2013 ರಿಂದಲೂ ಭೂ ಅಕ್ರಮಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿದರು.
    ಟೇಕ್‌ಆಫ್ ಆಗದ ಸರ್ಕಾರ:
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಜಿಲ್ಲೆಯಲ್ಲಿ ಇನ್ನೂ ಟೇಕ್‌ಆಫ್ ಆಗಿಲ್ಲ. ಪಾಲಿಕೆ ಸೇರಿ ಯಾವುದೇ ಕಚೇರಿಗಳಲ್ಲಿ ಕೆಲಸಗಳು ಆಗುತ್ತಿಲ್ಲ. ಜನಸಾಮಾನ್ಯರು ಸೌಲಭ್ಯಗಳಿಗೆ ಅಲೆದಾಡುವಂತಾಗಿದೆ. ಕೂಡಲೇ ಜನರಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಎಸ್.ಟಿ.ವೀರೇಶ್ ಒತ್ತಾಯಿಸಿದರು.
    ಸುಳ್ಳು ಆರೋಪ ಮಾಡುವುದೇ ಕಾಂಗ್ರೆಸ್‌ನ ಕೆಲಸವಾಗಿದೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ವಿರುದ್ಧವೂ ಪದೇಪದೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಇದು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಸದಸ್ಯ ಬಿ.ಜೆ.ಅಜಯ್‌ಕುಮಾರ್ ಎಚ್ಚರಿಸಿದರು.
    ಪಾಲಿಕೆ ಸದಸ್ಯರಾದ ರೇಖಾ ಸುರೇಶ್, ಕೆ.ಎಂ.ವೀರೇಶ್, ಎಲ್.ಡಿ.ಗೋಣೆಪ್ಪ, ಶಿವಾನಂದ್, ಸೋಗಿ ಶಾಂತಕುಮಾರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts