More

    ಭಾಷಾ ಅಭಿವೃದ್ಧಿ ಕರಡು ವಿಧೇಯಕಕ್ಕೆ ಶಾಸಕರು ಬೆಂಬಲ ನೀಡಿ

    ಕಾರವಾರ: ಭಾಷಾ ವಿವಾದ ತಡೆಯಲು ಸಹಕಾರಿಯಾಗಲಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕರಡು ವಿಧೇಯಕಕ್ಕೆ’ ಎಲ್ಲ ಶಾಸಕರೂ ಬೆಂಬಲ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಒತ್ತಾಯಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅಧ್ಯಕ್ಷತೆಯ ಕರ್ನಾಟಕ ಕಾನೂನು ಆಯೋಗಕ್ಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ನೇತೃತ್ವದಲ್ಲಿ ಕರಡು ಪ್ರತಿ ಸಲ್ಲಿಸಲಾಗಿದೆ. ಮುಂಬರುವ ವಿಧಾನಸಭೆ ಅಧಿವೇಶದನದಲ್ಲಿ ಕರಡು ಮಂಡನೆಯಾಗುವ ಸಾಧ್ಯತೆ ಇದೆ ಎಂದರು.

    ಸರ್ಕಾರದಿಂದ ಅನುದಾನ ಪಡೆದ ಎಲ್ಲ ಸಂಸ್ಥೆಗಳು ಆಹ್ವಾನ ಪತ್ರಿಕೆಗಳನ್ನು ಕನ್ನಡದಲ್ಲೇ ಮುದ್ರಿಸಬೇಕು. ರಾಜ್ಯಪಾಲರ ಆದೇಶಗಳು ಕನ್ನಡದಲ್ಲೇ ಇರಬೇಕು. ಸದನದಲ್ಲಿ ಈ ಹಿಂದೆ ಚರ್ಚೆಯಾದ ವಿಷಯಗಳು ಕನ್ನಡಕ್ಕೆ ತರ್ಜುಮೆ ಆಗಬೇಕು. ಮುಂದೆ ಕನ್ನಡದಲ್ಲೇ ದಾಖಲಾಗಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ನ್ಯಾಯಾಲಯಗಳಲ್ಲಿ ಕೂಡ ಕನ್ನಡದಲ್ಲೇ ತೀರ್ಪು ನೀಡಿ, ಅವು ಕನ್ನಡದಲ್ಲೇ ದಾಖಲಾಗಬೇಕು. ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಬಳಕೆಯ ಬಗ್ಗೆ, ಸರ್ಕಾರದಿಂದ ಸಬ್ಸಿಡಿ ಪಡೆಯುವ ಕಂಪನಿಗಳು ಕನ್ನಡಿಗರಿಗೆ, ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮೀಸಲಾತಿ ನೀಡಬೇಕು ಎಂದು ಅದರಲ್ಲಿ ತಿಳಿಸಲಾಗಿದೆ.

    ಕನ್ನಡಕ್ಕೆ ಸಂಬಂಧಿಸಿ ನಿಯಮಗಳ ಉಲ್ಲಂಘನೆ ಮಾಡಿದರೆ ನೀಡಬೇಕಾದ ಶಿಕ್ಷೆಯ ಬಗ್ಗೆ ಸರೋಜಿನಿ ಮಹಿಷಿ ವರದಿಯಲ್ಲಿ ಉಲ್ಲೇಖವಿರಲಿಲ್ಲ. ಈ ಕರಡು ಮಸೂದೆಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವಂಥ ಅವಕಾಶಗಳನ್ನೂ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಈ ಕರಡು ಕಾಯ್ದೆಯಾಗಿ ಜಾರಿಯಾದಲ್ಲಿ ರಾಜ್ಯದಲ್ಲಿ ಭಾಷಾ ವಿವಾದ ತಡೆಯಲು ಸಹಕಾರಿಯಾಗಲಿವೆ. ಸರ್ಕಾರಿ ಕಚೇರಿಗಳ ನಾಮಫಲಕಗಳು, ರಸ್ತೆಗಳ ಹೆಸರು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಅದರೊಂದಿಗೆ ಇಂಗ್ಲಿಷ್ ಬಳಸಬಹುದು. ಆದರೆ, ಬೇರೆ ಭಾಷೆಗಳಿಗೆ ಅವಕಾಶವಿಲ್ಲ ಎಂದು ಕರಡು ಪ್ರತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು. ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಜಾರ್ಜ್ ಫರ್ನಾಂಡಿಸ್, ವೆಂಟು ಮಾಸ್ತರ್, ರಾಮಾ ನಾಯ್ಕ, ಮುರ್ತಜಾ ಅನಿಹೊಸೂರು, ರಾಮಾ ನಾಯ್ಕ, ಬಾಬು ಶೇಖ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts