More

    ಭಾರಿ ಮಳೆಗೆ ಹೆಸರು ಬೆಳೆ ಹಾನಿ

    ಉಪ್ಪಿನಬೆಟಗೇರಿ: ಬುಧವಾರ ಸಂಜೆ ಹಾಗೂ ಗುರುವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರೈತರು ಒಣ ಹಾಕಿದ ಹೆಸರು ಕಾಳುಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ನೂರಾರು ಕ್ವಿಂಟಾಲ್ ಹೆಸರು ತೊಪ್ಪೆಯಾಗಿ ಲಕ್ಷಾಂತರ ರೂ. ಹಾನಿಯಾಗಿದೆ.

    ಕಳೆದ ವರ್ಷ ನಿರಂತರ ಮಳೆಯಿಂದಾಗಿ ಬಿತ್ತನೆ ಮಾಡದೆ ಬಿಟ್ಟಿದ್ದ ಬೀಜ, ಗೊಬ್ಬರ ಬಳಸಿ ರೈತರು ಹೆಸರು, ಉದ್ದು, ಶೇಂಗಾ, ಹತ್ತಿ, ಅಲಸಂದಿ ಬಿತ್ತನೆ ಮಾಡಿದ್ದರು. ಬೆಳೆಯೂ ಉತ್ತಮವಾಗಿಯೇ ಬಂದಿತ್ತು. ಆದರೆ, ಸತತ ಮಳೆಯಿಂದಾಗಿ ಬೆಳೆಗಳೆಲ್ಲ ನೆಲಕಚ್ಚಿವೆ. ಅದರಲ್ಲಿಯೇ ಅಳಿದುಳಿದ ಹೆಸರುಕಾಳುಗಳನ್ನು ಮಷಿನ್ ಮೂಲಕ ಬೇರ್ಪಡಿಸಿ ಒಣ ಹಾಕಿದ್ದರು. ಕೆಲವರು ಹೊಸಪೇಟಿ ಓಣಿಯಲ್ಲಿರುವ ಈದ್ಗಾ ಮೈದಾನದಲ್ಲಿ ಕಸ, ಕಡ್ಡಿಗಳನ್ನು ಬೇರ್ಪಡಿಸಿ ರಾಶಿ ಹಾಕಿದ್ದರು. ಮಳೆಯ ರಕ್ಷಣೆಗಾಗಿ ತಾಡಪತ್ರಿಗಳಿಂದ ಮುಚ್ಚಿದ್ದರು. ಆದರೆ, ಗುರುವಾರ ನಸುಕಿನ ವೇಳೆ ಸುರಿದ ಭಾರಿ ಮಳೆಯಿಂದಾಗಿ ಹೆಸರಿಗೆ ನೀರು ನುಗ್ಗಿದೆ. ಕಾಳುಗಳೆಲ್ಲ ಗಂಟುಕಟ್ಟಿ ಬೂದು ಬಣ್ಣಕ್ಕೆ ತಿರುಗಿದೆ. ನೂರಾರು ಕ್ವಿಂಟಾಲ್​ನಷ್ಟು ಕಾಳು ತೊಪ್ಪೆಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಸ್ಥಳೀಯ ರೈತ ಅಜಿತ ಛಬ್ಬಿ ಇತರರ ಅಳಲು ತೋಡಿಕೊಂಡಿದ್ದಾರೆ. ಬೀಜ, ಗೊಬ್ಬರ, ಆಳುಗಳೆಂದು ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಈಗ ಕೈಗೆ ಬಂದದ್ದು ಬಾಯಿಗೆ ಬರದಂತಾಗಿದೆ. ಹೆಸರು, ಉದ್ದು, ಹತ್ತಿ ಬೆಳೆಗಳು ಹಾಳಾಗಿ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕಿದೆ.

    ಮಳೆಯಿಂದ ನೆಲಕಚ್ಚಿದ ಬೆಳೆಯಲ್ಲಿ ಉಳಿದ ಅಲ್ಪ ಸ್ವಲ್ಪ ಹೆಸರು ಕಾಯಿಯನ್ನು ಕಟಾವು ಮಾಡಿ ಒಕ್ಕಣೆಗೆಂದು ಈದ್ಗಾ ಮೈದಾನದಲ್ಲಿ ಒಣ ಹಾಕಿದ್ದೇವು. ಬುಧವಾರ ಸಂಜೆ ಸುರಿದ ಭೀಕರ ಮಳೆಗೆ ಹೆಸರು ಕಾಳಿನ ರಾಶಿಯಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪರಿಹಾರ ಒದಗಿಸಬೇಕು.

    | ಶಿವನಪ್ಪ ಹಟ್ಟಿ ಹನುಮನಕೊಪ್ಪ ರೈತ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts