More

    ಭಾರಿ ಗಾಳಿ- ಮಳೆಗೆ ಜನಜೀವನ ಅಸ್ತವ್ಯಸ್ತ

    ಗುತ್ತಲ: ಭಾರಿ ಗಾಳಿ, ಸಿಡಿಲಿನೊಂದಿಗೆ ಸೋಮವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಗುತ್ತಲ ಪಟ್ಟಣ ಹಾಗೂ ಹೋಬಳಿಯ ಜನಜೀವನ ಅಸ್ತವ್ಯಸ್ತವಾಯಿತು.

    ಬೆಳಗಿನ ಜಾವ 5 ಗಂಟೆ ಸುಮಾರಿಗೆ ಆರಂಭವಾದ ಮಳೆಯೊಂದಿಗೆ ಬಂದ ಭಾರಿ ಗಾಳಿಗೆ ಗುತ್ತಲ ಹೊರವಲಯ, ನೆಗಳೂರ, ಬೆಳವಿಗಿ, ಹಾಲಗಿ, ಕೋಡಬಾಳ, ಮರೋಳ ಸೇರಿ ವಿವಿಧ ಗ್ರಾಮಗಳಲ್ಲಿ ಗಿಡ ಮರಗಳು ಮುರಿದು ಬಿದ್ದಿವೆ. ಗುತ್ತಲ ನೆಗಳೂರ ರಸ್ತೆಯಲ್ಲಿನ ಮಾವಿನ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

    ಮೆಕ್ಕೆಜೋಳದ ರಾಶಿ ಮಳೆಗೆ ತೋಯ್ದು ಹಾನಿಯಾಗಿದೆ. ಮಾವು, ಚಿಕ್ಕು, ದಾಳಿಂಬಿ, ಪಪ್ಪಾಯಿ, ಪೇರಲ ತೋಟಗಳಿಗೆ ಹಾನಿಯಾಗಿದೆ. ಜಮೀನು ಹಸನ ಮಾಡಿಕೊಂಡಿದ್ದ ರೈತರಿಗೆ ಸೋಮವಾರದ ಮಳೆ ಬಿತ್ತನೆ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ.

    ನೆಗಳೂರ ಗ್ರಾಮದ ದುರ್ಗಮ್ಮನ ಗುಂಡಿಗೆ ಹೋಗುತ್ತಿದ್ದ ಮಳೆ ಹಾಗೂ ಚರಂಡಿ ನೀರಿಗೆ ಕೆಲ ದಿನಗಳ ಹಿಂದೆ ರೈತರು ಅಡ್ಡಲಾಗಿ ಒಡ್ಡು ಹಾಕಿದ ಪರಿಣಾಮ ಅಂಗನವಾಡಿ ಹಾಗೂ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಅಂಗನವಾಡಿಯಲ್ಲಿದ್ದ ಆಹಾರ ಸಾಮಗ್ರಿ ಹಾಗೂ ಕೆಲವು ವಸ್ತುಗಳು ತೋಯ್ದು ಹಾನಿಯಾಗಿದೆ.

    ಬಾಳೆ ಬೆಳೆಗೆ ಹಾನಿ

    ರಟ್ಟಿಹಳ್ಳಿ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಗಾಳಿ- ಮಳೆಯಿಂದಾಗಿ ಕಡೂರು ಗ್ರಾಮದ ಕುಡುಪಲಿ ರಸ್ತೆಯಲ್ಲಿ ಬಾಳೆ ಗಿಡಗಳು ಮುರಿದು ಬಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಗ್ರಾಮದ ಹನುಮಂತಪ್ಪ ನಾಗಪ್ಪ ಶಿರಗಂಬಿ ಅವರ 1 ಎಕರೆ 20 ಗುಂಟೆ, ಸಿದ್ದಪ್ಪ ಶಿರಗಂಬಿ ಅವರ 1 ಎಕರೆ 20 ಗುಂಟೆ, ರಮೇಶ ಹೊಸಮನಿ ಅವರ 2.5 ಎಕರೆ ಮತ್ತು ಶಂಕ್ರಪ್ಪ ಶಿರಗಂಬಿ 2.5 ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಮುರಿದು ಬಿದ್ದಿವೆ.

    ರೈತ ಶಂಕ್ರಪ್ಪ ಶಿರಗಂಬಿ ಮಾತನಾಡಿ, 1 ಎಕರೆಯಲ್ಲಿ ಬಾಳೆ ಬೆಳೆಯಲು ರೈತರು 60ರಿಂದ 70 ಸಾವಿರ ರೂ. ಖರ್ಚು ಮಾಡುತ್ತಾರೆ. ಬಾಳೆ ಬೆಳೆ ಫಸಲು ಕಟಾವಿನ ಹಂತದಲ್ಲಿ ಹಾನಿಯಾಗಿದೆ. ಸರ್ಕಾರ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.

    ಹಾರಿ ಹೋದ ಶೀತಲೀಕರಣ ಘಟಕಗಳ ಮೇಲ್ಛಾವಣಿ

    ಬ್ಯಾಡಗಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸುರಿದ ಮಳೆ- ಗಾಳಿಗೆ ಮೆಣಸಿನಕಾಯಿ ಶೀಥಲೀಕರಣ ಘಟಕಗಳ ಮೇಲ್ಛಾವಣಿಯ ತಗಡುಗಳು ಹಾರಿ ಹೋಗಿವೆ. ಗಾಳಿಯ ರಭಸದಿಂದಾಗಿ ಎಲೆ ಬಳ್ಳಿ ಹಾಗೂ ಪಟ್ಟಣದ ಮೂರು ಮನೆಗಳ ಗೋಡೆಗಳು ನೆಲಕ್ಕುರುಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts