More

    ಭಾರತ ವಿಶ್ವಗುರುವಾಗಿಸಲು ತಾಯಂದಿರನ್ನು ಎಚ್ಚರಿಸೋಣ

    ಚಿತ್ರದುರ್ಗ: ದೇಶದ ಗತವೈಭವ ಪುನರ್‌ ಪ್ರತಿಷ್ಠಾಪಿಸಲು, ಭಾರತ ವಿಶ್ವಗುರುವಾಗಿಸಲು ನಮ್ಮ ತಾಯಂದಿರನ್ನು ಎಚ್ಚರಿಸೋಣ. ಅತ್ಯಾಚಾರ-ಅನಾಚಾರ, ಮೇಲು-ಕೀಳು, ಭಾಷಾ ಗಲಾಟೆ ಹೀಗೆ.. ಎಲ್ಲ ಅನಿಷ್ಠ ಆಚರಣೆಗಳನ್ನೂ ನಿರ್ಮೂಲನೆಗೊಳಿಸಲು ಪಣ ತೊಡೋಣ ಎಂದು ಆರೆಸ್ಸೆಸ್ಸ್ ಉತ್ತರ ಹಾಗೂ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್‌ ಅರುಣ್‌ಕುಮಾರ್‌ ಸಲಹೆ ನೀಡಿದರು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಿತ್ರದುರ್ಗ ನಗರ ಘಟಕದಿಂದ ವಿಜಯದಶಮಿ ಅಂಗವಾಗಿ ಭಾನುವಾರ ನಡೆದ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪಾತ್ರವೂ ಹೆಚ್ಚಿದೆ. ಹೀಗಾಗಿ ಜನಸಂಖ್ಯೆಯಲ್ಲಿ ಶೇಕಡಾ ಅರ್ಧದಷ್ಟಿರುವ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

    ನವರಾತ್ರಿ ಮಹೋತ್ಸವದಲ್ಲಿ ನವರೂಪಗಳಲ್ಲಿ ತಾಯಿ ದುರ್ಗಾ ಮಾತೆಯನ್ನು ಪೂಜಿಸುತ್ತೇವೆ. ಆರಂಭದಲ್ಲಿ ಶಾಂತ, ಕೋಮಲ ರೂಪದಲ್ಲಿ ಕಾಣುವ ದೇವಿಯೂ ಕೊನೆಗೆ ರೌದ್ರರೂಪಿಣಿಯಾಗಿ ದುಷ್ಟರನ್ನು ಸಂಹರಿಸಿ, ಶಿಷ್ಟರ ರಕ್ಷಕಿಯಾಗಿದ್ದಾಳೆ. ಆದ್ದರಿಂದ ದೇವಿ ಸ್ವರೂಪವಾದ ತಾಯಿ, ಅಕ್ಕ-ತಂಗಿಯರಿಗೆ ಪ್ರೋತ್ಸಾಹಿಸೋಣ. ದೇಶದೊಳಗಿನ ತಾಯಂದಿರನ್ನು ಸಬಲರನ್ನಾಗಿ ಮಾಡೋಣ ಎಂದರು.

    ಆರ್‌ಎಸ್‌ಎಸ್‌ ಶತಾಬ್ದಿಯ ಸನಿಹದಲ್ಲಿರುವ ಸಂದರ್ಭದಲ್ಲಿ ಹಿಂದು ಸಮಾಜಕ್ಕೆ ಅಂಟಿರುವ ಕಳಂಕಗಳನ್ನು ತೊಡೆದು ಹಾಕಲು ಶರೀರವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಎಲ್ಲ ಸ್ವಯಂ ಸೇವಕರು ಎಂತಹ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.

    ಸ್ವರ್ಗ ಸುಖಕ್ಕಾಗಿ ಬದುಕನ್ನೇ ನರಕವಾಗಿಸಿಕೊಂಡು, ವಿಶ್ವದೊಳಗೆ ದುಷ್ಕೃತ್ಯಕ್ಕೆ ಮುಂದಾಗಿ, ದುಷ್ಟ ಶಕ್ತಿಗಳು ದ್ವೇಷ ಪ್ರವೃತ್ತಿ ಬೆಳೆಸುತ್ತಿವೆ. ಆದರೆ, ಆರ್‌ಎಸ್‌ಎಸ್‌ ಎಂದಿಗೂ ಈ ಕೆಲಸ ಮಾಡಿಲ್ಲ. ಹಿಂದು ಧರ್ಮ ರಕ್ಷಣೆಯೊಂದೇ ನಮ್ಮ ಪ್ರಮುಖ ಉದ್ದೇಶ. ದ್ವೇಷ ಮಾಡಿದವರು ನಾಶವಾಗುತ್ತಿರುವ ನಿದರ್ಶನ ಸಾಕಷ್ಟಿವೆ ಎಂದರು.

    570 ವರ್ಷ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಭವ್ಯ ಮಂದಿರ ಉದ್ಘಾಟನೆ ಜನವರಿ ತಿಂಗಳಲ್ಲಿ ನಡೆಯಲಿದೆ. ಈ ವೇಳೆ ಹಿಂದು ಸಮಾಜ ತನ್ನೆಲ್ಲಾ ದೌರ್ಬಲ್ಯ ಮೆಟ್ಟಿ ನಿಲ್ಲಬೇಕು. ಜಾತಿ, ಭಾಷೆ, ಪ್ರಾಂತದ ಬೇಧ ಮರೆಯಬೇಕು ಎಂದು ಸಲಹೆ ನೀಡಿದರು.

    ನಗರ ಸಂಘ ಚಾಲಕ ಎಸ್.ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ಜಿಲ್ಲಾ ಪ್ರಚಾರಕ ಶ್ರೀನಾಥ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್, ಕೊಟ್ಲಾ ದೇವರಾಜ್, ಜಿಲ್ಲಾ ಬೌದ್ಧಿಕ್ ಪ್ರಮುಖ್ ರಾಮ್‌ಕಿರಣ್, ಜಿಲ್ಲಾ ವ್ಯವಸ್ಥಾ ಪ್ರಮುಖ್ ನವೀನ್, ಸಹ ವ್ಯವಸ್ಥಾ ಪ್ರಮುಖ್ ಉದಯ್, ನಗರ ಕಾರ್ಯವಾಹ ಚಂದನ್, ಸಹ ಕಾರ್ಯವಾಹ ಜಯದೇವ್, ನಗರ ವ್ಯವಸ್ಥಾ ಪ್ರಮುಖ್ ದರ್ಶನ್ ಇತರರಿದ್ದರು.

    ಆಕರ್ಷಕ ಪಥ ಸಂಚಲನ: ವೇದಿಕೆ ಕಾರ್ಯಕ್ರಮದ ನಂತರ ಹೊಳಲ್ಕೆರೆ ರಸ್ತೆ ಬರಗೇರಮ್ಮ ದೇಗುಲದಿಂದ 200ಕ್ಕಿಂತ ಹೆಚ್ಚು ಗಣವೇಷ ಧರಿಸಿದ ಸ್ವಯಂ ಸೇವಕರು ಪಥ ಸಂಚಲನ ನಡೆಸಿದರು. ಬುರುಜನಹಟ್ಟಿ, ಚಿಕ್ಕಪೇಟೆ, ಆನೆಬಾಗಿಲು, ಗಾಂಧಿ, ಸಂಗೊಳ್ಳಿರಾಯಣ್ಣ ವೃತ್ತ ಮಾರ್ಗವಾಗಿ ಸಂಚರಿಸಿ ಬರಗೇರಮ್ಮ ದೇಗುಲದ ಬಳಿ ಸಮಾರೋಪಗೊಂಡಿತು. ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮುಖಂಡರಾದ ಜಿ.ಎಸ್.ಅನಿತ್‌ಕುಮಾರ್, ಎಂ.ಸಿ.ರಘುಚಂದನ್, ಮುಖಂಡರಾದ ಎಸ್.ಆರ್.ಗಿರೀಶ್, ವೆಂಕಟೇಶ್ ಯಾದವ್, ಹನುಮಂತೇಗೌಡ, ನವೀನ್, ಬಜರಂಗದಳ ಪ್ರಾಂತ ಸಹ ಸಂಚಾಲಕ ಪ್ರಭಂಜನ್ ಸೇರಿ ಇತರರಿದ್ದರು. ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಬಿವಿಪಿ ಪ್ರಮುಖ ಡಾ.ಲೇಪಾಕ್ಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts