More

    ಭರ್ಜರಿ ಕಾಯಿ ಹಿಡಿದ ಹುಣಸೆಮರ

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಈ ಬಾರಿ ಹುಣಸೆ ಮರಗಳು ಉತ್ತಮವಾಗಿ ಕಾಯಿ ಹಿಡಿದಿದ್ದು, ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ.

    ಒಂದು ವರ್ಷ ಉತ್ತಮವಾಗಿ ಹಣ್ಣು ಬಿಟ್ಟರೆ, ಮತ್ತೊಂದು ವರ್ಷ ಇಳುವರಿ ಕುಸಿತ. ಇದು ಹುಣಸೆ ಬೆಳೆಯ ವಿಶೇಷ. ಮುಂಗಾರು ಹಾಗೂ ಹಿಂಗಾರಿನಲ್ಲಿ ಉತ್ತಮವಾಗಿ ಮಳೆಯಾದ ಪರಿಣಾಮ ಹುಣಸೆ ಗಿಡಗಳು ಉತ್ತಮವಾಗಿ ಹೂ ಬಿಟ್ಟು, ಸಮೃದ್ಧವಾಗಿ ಕಾಯಿಗಳಿಂದ ತುಂಬಿ ತುಳುಕುತ್ತಿವೆ. ಹೂ ಬಂದಾಗ ಗಾಳಿ-ಮಳೆ ಹೆಚ್ಚಾದರೆ ಹೂ ನೆಲಕಚ್ಚುತ್ತದೆ. ಮಂಗಗಳ ಕಾಟದಿಂದ ಹುಣಸೆ ಕಾಯಿಗಳನ್ನು ರಕ್ಷಿಸುವುದು ಕೂಡ ಕಷ್ಟ. ಆದರೆ, ಈ ಕಷ್ಟಗಳ ನಡುವೆಯೂ ಈ ಬಾರಿ ಉತ್ತಮವಾಗಿ ಹುಣಸೆ ಫಸಲು ಬಂದಿದೆ.

    ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಪ್ರಮುಖ ರಸ್ತೆಗಳ ಬದಿ ಹಾಗೂ ರೈತರ ಜಮೀನುಗಳಲ್ಲಿ ಸಾವಿರಾರು ಹುಣಸೆ ಮರಗಳಿವೆ. ರಸ್ತೆ ಪಕ್ಕದ ಮರಗಳನ್ನು ಅರಣ್ಯ ಇಲಾಖೆ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ಗುತ್ತಿಗೆ ನೀಡಲಾಗುತ್ತದೆ. ರೈತರ ಜಮೀನುಗಳಲ್ಲಿನ ಮರಗಳನ್ನು ಹುಣಸೆ ವ್ಯಾಪಾರಸ್ಥರು ಗುತ್ತಿಗೆ ಪಡೆಯುತ್ತಾರೆ. ಹಳ್ಳಿಗಳಲ್ಲಿ ಹುಣಸೆ ಮರಗಳಲ್ಲಿ ಕಾಯಿ ಕಟ್ಟಿರುವ ಅಂದಾಜಿನ ಮೇಲೆ ವ್ಯಾಪಾರಿಗಳು ಖರೀದಿಸುತ್ತಾರೆ. ಹುಣಸೆ ಮರಗಳನ್ನು ಸಣ್ಣ, ಮಧ್ಯಮ ಹಾಗೂ ದೊಡ್ಡ ಮರಗಳು ಎಂದು ವಿಂಗಡಿಸಿ ಬೆಲೆ ನಿಗದಿಪಡಿಸಲಾಗುತ್ತದೆ.

    ಹಳ್ಳಿಗಳಲ್ಲಿ ಹುಣಸೆ ರೈತರಿಗೆ ಲಾಭ ತರುತ್ತಿದ್ದರೆ, ಮತ್ತೊಂದೆಡೆ ಕಾರ್ವಿುಕರಿಗೆ ಕೆಲಸ ನೀಡಲಿದೆ. ಮರ ಹತ್ತಿ ಹುಣಸೆ ಕಾಯಿ ಬಡಿಯುವ ಪುರುಷ ಕಾರ್ವಿುಕರಿಗೆ ದಿನಕ್ಕೆ 500ರಿಂದ 600 ರೂ. ವರೆಗೆ, ಉದುರಿಸಿದ ಹುಣಸೆ ಕಾಯಿಗಳನ್ನು ಆರಿಸಿ ಚೀಲಗಳಿಗೆ ತುಂಬಲು 300ರಿಂದ 350 ರೂ. ಹಾಗೂ ಹುಣಸೆ ಹಣ್ಣು ಮತ್ತು ಬೀಜಗಳನ್ನು ಬೇರ್ಪಡಿಸಲು ಪ್ರತಿ ಕಾರ್ವಿುಕರಿಗೆ 250ರಿಂದ 300 ರೂ. ನೀಡಲಾಗುತ್ತದೆ. ಹೆಚ್ಚು ಖರ್ಚಿಲ್ಲದೆ ಅಧಿಕ ಲಾಭ ಕೊಡುವ ಈ ಹುಣಸೆ ರೈತರ ಹಾಗೂ ವ್ಯಾಪಾರಿಗಳ ಪಾಲಿಗೆ ಕಲ್ಪವೃಕ್ಷವಾಗಿದೆ. ಮರ ಬಡಿಯಲು, ಹಣ್ಣು ಕುಟ್ಟಲು, ಬಾಡಿಗೆ ಬಿಟ್ಟರೆ ಉಳಿದಿದ್ದೆಲ್ಲವೂ ಲಾಭ. ಪಾಳು ಬಿದ್ದ ಜಮೀನಿನಲ್ಲೋ, ಬದುವಿನಲ್ಲಿಯೋ, ಬೇಲಿ ಸಾಲಿನ ಹುಣಸೆ ಮರಗಳು, ನೀರು, ಗೊಬ್ಬರ ಹಾಕದಿದ್ದರೂ ಬರೀ ಮಳೆಗೆ ಸಹಜವಾಗಿ ಬೆಳೆದು ಉತ್ತಮ ಫಸಲು, ಆದಾಯ ನೀಡುತ್ತವೆ.

    ಕಳೆದ ಬಾರಿಗಿಂತ ಈ ಬಾರಿ ಹುಣಸೆ ಮರಗಳು ಉತ್ತಮವಾಗಿ ಕಾಯಿ ಹಿಡಿದಿವೆ. ವರ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹುಣಸೆ ಮರಗಳನ್ನು ಗುತ್ತಿಗೆ ಹಿಡಿಯಲಾಗಿದೆ. ಮರ ಏರಿ ಹಣ್ಣು ಉದುರಿಸುವುದು ಸ್ವಲ್ಪ ಕಷ್ಟದ ಕೆಲಸ. ಕುಟ್ಟಲು, ಬಡಿಯಲು, ಬಾಡಿಗೆ, ಕಮಿಷನ್​ಗೆ ಅರ್ಧ ಹಣ ಹೋಗುತ್ತದೆ. ಆದರೂ, ಈ ವರ್ಷ ಉತ್ತಮ ಆದಾಯದ ನಿರೀಕ್ಷೆ ಇದೆ. ಕಳೆದ ವರ್ಷ ಗದಗ ಹಾಗೂ ಬೆಳಗಾವಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಹುಣಸೆ 20 ಸಾವಿರ ರೂ. ಗೆ ಮಾರಾಟವಾಗಿತ್ತು. ಈ ವರ್ಷ ಹುಣಸೆ ದರ ದಾಖಲೆ ಬರೆಯುವ ಎಲ್ಲ ಲಕ್ಷಣಗಳಿವೆ.
    | ಮಹಾದೇವಿ ಜ್ಯೋತಿ, ಕೋಚಲಾಪುರ ಗ್ರಾಮದ ಹುಣಸೆ ವ್ಯಾಪಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts