More

    ಭಯ ಮೂಡಿಸುತ್ತಿದೆ ಬಯೋಮೆಟ್ರಿಕ್

    ಬೆಳಗಾವಿ: ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಸಂಕಟ ಪಡಿತರ ಧಾನ್ಯ ತರುವಲ್ಲಿಯೂ ಮುಂದುವರಿದಿದೆ. ಬಡಜನರ ಹಸಿವು ನೀಗಿಸಲು ಸರ್ಕಾರ ನೀಡುವ ಪಡಿತರ ತರಲು ಹೋದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಜೀವಭಯ ಕಾಡತೊಡಗಿದೆ. ಇದಕ್ಕೆ ಕಾರಣ ಬಯೋಮೆಟ್ರಿಕ್ ವ್ಯವಸ್ಥೆ. ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಪಡಿತರ ವಿತರಣೆಗೆ ಬಯೋಮೆಟ್ರಿಕ್ ಕಡ್ಡಾಯವಲ್ಲ ಎಂದು ಸರ್ಕಾರ ಇತ್ತೀಚೆಗೆ ಆದೇಶವನ್ನೇ ಹೊರಡಿಸಿದೆ. ಆದರೂ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ. ಲಾನುಭವಿಗಳು ಬೆರಳಚ್ಚು ನೀಡಿಯೇ ಪಡಿತರ ಪಡೆಯುತ್ತಿದ್ದಾರೆ.

    ಸೋಂಕಿನ ಭೀತಿ: ಬಯೋಮೆಟ್ರಿಕ್ ಪದ್ಧತಿಯಿಂದ ಕರೊನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜನರು ಜೀವಭಯದಲ್ಲೇ ಪಡಿತರ ತರಲು ನ್ಯಾಯಬೆಲೆ ಅಂಗಡಿಗಳತ್ತ ಬರುತ್ತಿದ್ದಾರೆ. ಅವರೂ ಬೆರಳಚ್ಚು ನೀಡಿ ಪಡಿತರ ಪಡೆಯುವುದರಿಂದ ಸಾರ್ವಜನಿಕರಿಗಷ್ಟೇ ಅಲ್ಲದೆ, ನ್ಯಾಯಬೆಲೆ ಅಂಗಡಿಕಾರರಿಗೂ ಸೋಂಕು ಅಂಟಿಕೊಳ್ಳುವ ಭೀತಿ ಸೃಷ್ಟಿಯಾಗಿದೆ.

    14 ಲಕ್ಷ ಚೀಟಿದಾರರು: ಬೆಳಗಾವಿ ಜಿಲ್ಲೆಯಲ್ಲಿ 10,68,461 ಬಿಪಿಎಲ್, 68,926 ಅಂತ್ಯೋದಯ, 3,04,257 ಎಪಿಎಲ್ ಸೇರಿ 14,41,644 ಪಡಿತರ ಚೀಟಿದಾರರಿದ್ದಾರೆ. ಈ ಪೈಕಿ 12,09,061 ಚೀಟಿದಾರರು ನಿಯಮಿತವಾಗಿ ಪಡಿತರ ಪಡೆಯುತ್ತಿದ್ದಾರೆ. 1,752 ನ್ಯಾಯಬೆಲೆ ಅಂಗಡಿಗಳಿದ್ದು, ಮೇ 22ರ ವರೆಗೆ ಶೇ.73 ಪಡಿತರ ಹಂಚಿಕೆಯಾಗಿದೆ. 31ರ ವರೆಗೂ ಪಡಿತರ ವಿತರಿಸಲು ಸರ್ಕಾರ ಆದೇಶಿಸಿದೆ. ಮಹಾಮಾರಿ ಅಟ್ಟಹಾಸದಿಂದ ನಲುಗಿರುವ ಬಡವರಿಗೆ ರಾಜ್ಯ ಸರ್ಕಾರ ಎಂದಿನಂತೆ ಪಡಿತರ ನೀಡುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರದಿಂದಲೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ.

    ಲಿಂಕ್ ಆಗದ ಆಧಾರ್: ಆಧಾರ್‌ಗೆ ಮೊಬೈಲ್ ಸಂಖ್ಯೆ ಜೋಡಣೆ ಆಗಿರುವವರಿಗೆ ಒಟಿಪಿ ಆಧರಿಸಿ ಪಡಿತರ ವಿತರಿಸಲಾಗುತ್ತಿದೆ. ಆದರೆ, ಹಲವರ ಮೊಬೈಲ್ ಸಂಖ್ಯೆಗೆ ಈವರೆಗೆ ಆಧಾರ್ ಜೋಡಣೆಯಾಗಿಲ್ಲ. ಇಂತಹವರಿಗೆ ಒಂದು ವೇಳೆ ಪಡಿತರ ವಿತರಿಸದಿದ್ದರೆ ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಇನ್ನಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಬೆರಳಚ್ಚು ಪಡೆದು ಪಡಿತರ ವಿತರಿಸುತ್ತಿದ್ದೇವೆ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿಕಾರರು.


    ನಮ್ಮನ್ನೂ ವಾರಿಯರ್ಸ್‌ ಎಂದು ಪರಿಗಣಿಸಿ

    ಕರೊನಾತಂಕದ ಮಧ್ಯೆಯೂ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ. ನಮ್ಮನ್ನೂ ಕರೊನಾ ಸೇನಾನಿಗಳೆಂದು ಸರ್ಕಾರ ಪರಿಗಣಿಸಬೇಕು. ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಮಾಸ್ಕ್, ಸ್ಯಾನಿಟೈಸರ್, ೇಸ್‌ಶೀಲ್ಡ್ ವಿತರಿಸಬೇಕು. ಕರೊನಾದಿಂದ ಮೃತಪಟ್ಟ ಅಂಗಡಿಕಾರರಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ನ್ಯಾಯಬೆಲೆ ಅಂಗಡಿಯವರು ಒತ್ತಾಯಿಸುತ್ತಿದ್ದಾರೆ.

    ಬಹುತೇಕ ಕಡೆ ಚೀಟಿದಾರರಿಗೆ ಇಲ್ಲ ಸ್ಯಾನಿಟೈಸರ್ ವ್ಯವಸ್ಥೆ

    ಜಿಲ್ಲೆಯ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಕರೊನಾ ನಿಯಂತ್ರಣ ಮಾರ್ಗಸೂಚಿ ಪಾಲಿಸಲಾಗುತ್ತಿದೆ. ಆದರೆ, ಹಲವು ಕಡೆ ಇದನ್ನು ಗಾಳಿಗೆ ತೂರಲಾಗಿದೆ. ಪಡಿತರ ಚೀಟಿದಾರರ ಕೈಗಳನ್ನು ಸ್ಯಾನಿಟೈಸ್ ಮಾಡದೆ ಬೆರಳಚ್ಚು ಪಡೆಯಲಾಗುತ್ತಿದೆ. ಇದರಿಂದಾಗಿ ಇತರರಿಗೂ ಸೋಂಕು ತಗಲುವ ಆತಂಕ ಹೆಚ್ಚಿದೆ.

    ಕಳೆದ ವರ್ಷ ಆಧಾರ್ ಜೋಡಣೆ ಆಗದಿದ್ದರೂ ಚೀಟಿದಾರರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಿ ಪಡಿತರ ವಿತರಿಸಿದ್ದೆವು. ಆಗ ಪಡಿತರ ಹಂಚಿಕೆಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಸಲ ಆಧಾರ್ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗಷ್ಟೇ ಒಟಿಪಿ ಕಳುಹಿಸಿ ಪಡಿತರ ವಿತರಿಸಲಾಗುತ್ತಿದೆ. ಚೀಟಿದಾರರ ಕೈಗಳನ್ನು ಸ್ಯಾನಿಟೈಸ್ ಮಾಡಿಯೇ ಬೆರಳಚ್ಚು ಪಡೆಯಬೇಕೆಂದು ಸೂಚಿಸಲಾಗಿದೆ.
    | ಚನ್ನಬಸಪ್ಪ ಕೊಡ್ಲಿ. ಜಂಟಿ ನಿರ್ದೇಶಕ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಳಗಾವಿ

    ಈಗಿನ ಪರಿಸ್ಥಿತಿಯಲ್ಲಿ ಚೀಟಿದಾರರ ‘ಬೆರಳಚ್ಚು’ ಪಡೆದು ಪಡಿತರ ವಿತರಿಸುವುದು ಅಂಗಡಿಕಾರರಲ್ಲೂ ಆತಂಕ ಮೂಡಿಸಿದೆ. ಹೀಗಾಗಿ ಆಧಾರ್ ಜೋಡಣೆ ಆಗಿರದಿದ್ದರೂ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಬೇಕು. ಇಲ್ಲದಿದ್ದರೆ ಪಡಿತರ ನೀಡಿದ ಪಟ್ಟಿಯಲ್ಲಿ ಸಹಿ ಮಾಡಿಸಿಕೊಂಡು ಪಡಿತರ ವಿತರಿಸಬೇಕು ಎಂದು ಲಾನುಭವಿಗಳು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಈ ವಿಚಾರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
    | ರಾಜಶೇಖರ ತಳವಾರ ಉಪಾಧ್ಯಕ್ಷ, ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ

    | ಇಮಾಮಹುಸೇನ್ ಗೂಡುನವರ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts