More

    ಭಯೋತ್ಪಾದನೆ ನಿಯಂತ್ರಿಸಲು ಸರ್ಕಾರ ಸಶಕ್ತ: ಆರಗ ಜ್ಞಾನೇಂದ್ರ ಹೇಳಿಕೆ, ಗ್ರಾಮಾಂತರ ಠಾಣೆ ನಿರ್ಮಾಣಕ್ಕೆ ಶಂಕುಸ್ಥಾಪನೆ

    ಕೋಲಾರ: ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಿಯಂತ್ರಿಸಲು ಸರ್ಕಾರ ಸಶಕ್ತವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

    ನಗರದಲ್ಲಿ ಭಾನುವಾರ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಭಯೋತ್ಪಾದನೆ ಈ ಕಾಲದಲ್ಲೂ ನಡೆಯುತ್ತದೆ ಎನ್ನುವುದಾದರೆ ಅದನ್ನು ಮಟ್ಟಹಾಕಲು ನಮ್ಮ ಪೊಲೀಸರು ಸಮರ್ಥರಿದ್ದಾರೆ ಎಂದರು.

    ನಗರದ ಕ್ಲಾಕ್ ಟವರ್ ಅತ್ಯಂತ ಸೂಕ್ಷ್ಮವಾದ ಪ್ರದೇಶವಾಗಿದ್ದು, ಇಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿತ್ತು. ಸಂಸದರು ಹಾಗೂ ಸಾರ್ವಜನಿಕರ ಒತ್ತಾಸೆ ಮೇರೆಗೆ ತ್ರಿವರ್ಣ ಧ್ಜಜಾರೋಹಣ ಮಾಡಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿದೆ. ಇನ್ನು ಮುಂದೆ ಅಲ್ಲಿ ರಾಷ್ಟ್ರೀಯ ಹಬ್ಬಗಳು ಹೊರತುಪಡಿಸಿ ಬೇರೆ ಯಾವುದೇ ಧರ್ಮಗಳ ಚಟುವಟಿಕೆ ನಡೆಸಲು ಅವಕಾಶ ನೀಡುವುದಿಲ್ಲ ಎಂದರು.

    ಸಾರ್ವಜನಿಕ ಸ್ಥಳಗಳಲ್ಲಿ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ಧ್ವಜ ಹಾರಿಸುವಂತಿಲ್ಲ, ಅಲ್ಲಿ ಏನಿದ್ದರೂ ರಾಷ್ಟ್ರಧ್ವಜ ಮಾತ್ರ ಹಾರಾಡಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲ ಜನಾಂಗದವರನ್ನು ವಿಶ್ವಾಸಕ್ಕೆ ಪಡೆದು ವಿವಾದ ಬಗೆಹರಿಸಿ ಶಾಂತಿ ಪಾಲನೆಗೆ ಶ್ರಮಿಸಿರುವುದರಿಂದ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದರು.

    ಜಿಲ್ಲೆಯ ವೇಮಗಲ್ ಮತ್ತು ನರಸಾಪುರದಲ್ಲಿ ಸಂಚಾರ ದಟ್ಟಣೆ ಹಾಗೂ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ತಮ್ಮ ಗಮನಕ್ಕೆ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವೆ. ಅಗತ್ಯವಿದ್ದಲ್ಲಿ ಹೊರ ಠಾಣೆ ತೆರೆಯಲು ಬದ್ಧ ಎಂದು ಉತ್ತರಿಸಿದರು.
    ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಕೋಲಾರ ಎಸ್ಪಿ ಡಿ.ದೇವರಾಜ್, ಕೆಜಿಎಫ್ ಎಸ್ಪಿ ಧರಣಿದೇವಿ ಇದ್ದರು.

    ಸಂಸದರಿಗೆ ರಕ್ಷಣೆ: ಕ್ಲಾಕ್ ಟವರ್‌ನಲ್ಲಿ ರಾಷ್ಟ್ರಧ್ವಜ ಹಾರಲು ಕಾರಣಕರ್ತರಾಗಿರುವ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಸಾಮಾಜಿಕ ಜಾಲತಾಣ ಹಾಗೂ ದೂರವಾಣಿ ಮೂಲಕ ಬೆದರಿಕೆ ಹಾಕಿರುವುದು ತಮ್ಮ ಗಮನಕ್ಕೆ ಬಂದಿದೆ. ಇಂತಹ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ, ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಜೈಲೂಟದ ರುಚಿ ತೋರಿಸುತ್ತೇವೆ ಎಂದು ತಿಳಿಸಿದರು. ಸಂಸದರಿಗೆ ಜೀವ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ಒದಗಿಸಲಾಗುತ್ತದೆ. ಕೇವಲ ಸಂಸದರಿಗೆ ಮಾತ್ರವಲ್ಲ ಶಾಸಕರಿಗೆ ಬೆದರಿಕೆ ಹಾಕಿದರೂ ಸುಮ್ಮನೆ ಬಿಡಲ್ಲ. ನಮ್ಮ ರಾಜ್ಯದಲ್ಲಿ ಎಲ್ಲ ಜಾತಿ,ಧರ್ಮದವರು ಒಟ್ಟಾಗಿ ಬಾಳುತ್ತಿದ್ದಾರೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು, ನಮ್ಮ ಸರ್ಕಾರ ತಪ್ಪಿಸ್ಥರನ್ನು ಕಾನೂನು ಶಿಕ್ಷೆಗೆ ಒಳಪಡಿಸುತ್ತದೆ ಎಂದರು.

     

    ತಜ್ಞರ ಸಲಹೆ ಪಡೆದು ತೀರ್ಮಾನ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಆಳವಡಿಸುವಂತೆ ಅನೇಕರು ಸಲಹೆ ನೀಡಿದ್ದಾರೆ. ಇದರ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ವಿರೋಧ ಪಕ್ಷದವರು ಸರ್ಕಾರದ ಆದೇಶ ಬರುವ ಮುನ್ನವೇ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಪಠ್ಯದಲ್ಲಿ ಗೀತೆ ಅಳವಡಿಸಿದರೆ ನೈತಿಕ ಶಿಕ್ಷಣಕ್ಕೆ ಅನುಕೂಲವಾಗುತ್ತದೆ, ಶಿಕ್ಷಣ ತಜ್ಞರು ಏನು ಹೇಳುತ್ತಾರೋ ಕಾದು ನೋಡೋಣ ಎಂದರು.

    ಸಚಿವ ಸಂಪುಟ ವಿಸ್ತರಣೆ ಇಲ್ಲ: ನಮ್ಮ ಪಕ್ಷದ ವರಿಷ್ಠರು ಸೂಚಿಸಿದರೆ ಸಂಪುಟ ವಿಸ್ತರಣೆ ಆಗುತ್ತದೆ. ಆದರೆ ಸದ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗದು ಎಂದ ಸಚಿವರು ಪ್ರತಿಕ್ರಿಯಿಸಿದರು. ಸರ್ಕಾರ ಚೆನ್ನಾಗಿ ನಡೆಯುತ್ತದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಭಿನ್ನಮತ ಬಂಡಾಯ ಇಲ್ಲವೇ ಇಲ್ಲ, ಮುಖ್ಯಮಂತ್ರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

    ಮಳೆ ಅಡ್ಡಿ: ಗ್ರಾಮಾಂತರ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ಗೃಹ ಸಚಿವರು ಮಳೆ ಅಡ್ಡಿಯಿಂದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

    200 ಕೋಟಿ ರೂ.ವೆಚ್ಚದಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣ

    ಕೋಲಾರ: ರಾಜ್ಯದಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಶೆಡ್‌ಗಳ ರೀತಿಯಲ್ಲಿ ಇರುವ 100 ಪೊಲೀಸ್ ಠಾಣೆಗಳ ಕಟ್ಟಡಗಳನ್ನು ಕಟ್ಟಲು ರಾಜ್ಯ ಸರ್ಕಾರದಿಂದ ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು
    ನಗರದಲ್ಲಿ ಭಾನುವಾರ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಗ್ರಾಮಾಂತರ ಠಾಣೆಯ ನೂತನ ಕಟ್ಟಡದ ಭೂಮಿಪೂಜೆಯಲ್ಲಿ ಭಾಗವಹಿಸಿ ಮಾತನಾಡಿ, ನಾಗರಿಕತೆ ಬೆಳೆದಂತೆ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಠಾಣೆಗಳು ಅವಶ್ಯಕವಾಗಿದೆ ಎಂದರು.

    ಗ್ರಾಮಾಂತರ ಠಾಣೆ ಕಟ್ಟಡ ಕಾಮಗಾರಿ ಕಾಲ ಮಿತಿಯಲ್ಲಿ ಮುಗಿಸಬೇಕು. ಗುಣಮಟ್ಟದಲ್ಲಿ ರಾಜಿ ಇಲ್ಲ, ಅಧಿಕಾರಿಗಳು ಕಾಮಗಾರಿಯಲಿ ಲೋಪವಾಗದಂತೆ ಎಚ್ಚರವಹಿಸಬೇಕು ಎಂದರು.

    ಕೋಲಾರ ಜಿಲ್ಲೆಯ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಜನರ ಮಾನ, ಪ್ರಾಣ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆಗಾಗಿ ಅಗತ್ಯ ಸಿಬ್ಬಂದಿ ಒದಗಿಸಲಾಗುವುದು ಎಂದರು.

    ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಜಿಲ್ಲೆಯಲ್ಲೇ ದೊಡ್ಡ ಠಾಣೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೇಸುಗಳ ಸಂಖ್ಯೆ ಕಡಿಮೆಯಾಗಬೇಕು. ದೇಶದ್ರೋಹಿಗಳನ್ನು ಸೆದೆಬಡೆಯುವಂತಹ ಕೆಲಸ ಮಾಡಬೇಕು. ಪೊಲೀಸ್ ಇಲಾಖೆಯ ಎಲ್ಲಾ ಠಾಣೆಗಳು ನೂತನ ಕಟ್ಟಡಗಳಾಗಬೇಕು. ಕೇಸ್ ಗಳನ್ನು ದಾಖಲಿಸುವುದು ಮುಖ್ಯವಲ್ಲ. ಪ್ರಕರಣಗಳಲ್ಲಿ ಭಾಗಿಯಾರುವ ಜನರಿಗೆ ತಕ್ಕ ಶಿಕ್ಷೆಯಾಗಬೇಕು, ಅಗತ್ಯವಿದ್ದಾಗ ಮಾತ್ರ ರಾಜಿ ಮಾಡಿಸಬೇಕೆಂದರಲ್ಲದೆ, ಉತ್ತಮವಾದ ತರಬೇತಿ ಕೇಂದ್ರ ಜಿಲ್ಲೆಗೆ ಬೇಕಾಗಿದೆ ಎಂದು ಗೃಹ ಸಚಿವರನ್ನು ಒತ್ತಾಯಿಸಿದರು.

    ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿದರು. ಶಾಸಕ ಕೆ.ಶ್ರೀನಿವಾಸಗೌಡ, ಕೋಲಾರ ಎಸ್ಪಿ ಡಿ.ದೇವರಾಜ್, ಕೆಜಿಎಫ್ ಎಸ್ಪಿ ಧರಣಿದೇವಿ, ಮುಖ್ಯ ಇಂಜಿನಿಯರ್ ಗೌಡಯ್ಯ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ನಿರ್ದೇಶಕರಾದ ಅಪ್ಪಿ ನಾರಾಯಣಸ್ವಾಮಿ, ಮಮತಮ್ಮ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಅರುಣಮ್ಮ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts