More

    ಭದ್ರಾವತಿಯಲ್ಲಿ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸಡಗರ

    ಭದ್ರಾವತಿ: ಕನ್ನಡಕ್ಕೆ ಇರುವ ಮಹತ್ವ ಬೇರೆ ಯಾವ ಭಾಷೆಗೂ ಇಲ್ಲ, ಆದ್ದರಿಂದ ನಾವು ವಿಶ್ವದಲ್ಲಿ ಎಲ್ಲೇ ನೆಲೆಸಿದ್ದರೂ ನಮ್ಮ ಭಾಷೆ ಮರೆಯಬಾರದು. ಅದೇ ರೀತಿ ಬೇರೆ ಭಾಷೆಗಳನ್ನು ಪ್ರೀತಿಸಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಕಾವ್ಯಾ ಹೇಳಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜುಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನ್ಯೂಟೌನ್ ಎಸ್‌ಎವಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಭದ್ರಾವತಿ ತಾಲೂಕು 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಮಕ್ಕಳು ಇಂದು ಕೇವಲ ಓದಿಗೆ ಸೀಮಿತರಾಗದೆ ಕ್ರೀಡೆ, ಸಾಹಿತ್ಯ, ಕವನದ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಇದಕ್ಕೆ ಪಾಲಕರು ಹಾಗೂ ಶಿಕ್ಷಕರು ಸಮರ್ಥ ಮಾರ್ಗದರ್ಶನ ಮಾಡಬೇಕು. ಆ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಒಗ್ಗೂಡಿಸಿ ಅದರ ಮೂಲಕ ಜಗತ್ತಿಗೆ ಉತ್ತಮ ಕೊಡುಗೆ ಕೊಡಬೇಕು. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಇದರ ಮಧ್ಯದಲ್ಲಿನ ಬದುಕಿನಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಇಲ್ಲಿಂದ ನಿರ್ಗಮಿಸಬೇಕು ಎಂದರು.
    ಸಮ್ಮೇಳನವನ್ನು ಉದ್ಘಾಟಿಸಿದ ಮಾತನಾಡಿದ ಇಂಚರಾ, ಪಂಪ, ರನ್ನ ಅವರಂತಹ ಮೇರು ಕವಿಗಳು ಕನ್ನಡ ಭಾಷೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.
    10-12ನೇ ಶತಮಾನ ಹಳಗನ್ನಡ ಕಾಲವಾಗಿತ್ತು, ನಂತರ ಹಳಗನ್ನಡ, ನಡು ಕನ್ನಡ, ಹೊಸ ಕನ್ನಡ ಸಾಹಿತ್ಯ ಎಂದು ವಿಂಗಡಿಸಲಾಗಿದೆ. 20ನೇ ಶತಮಾನದಲ್ಲಿ ನವೋದಯ ಸಾಹಿತ್ಯ ಹೊಸ ಪ್ರಕಾರದಲ್ಲಿ ಕಾಣಿಸಿಕೊಂಡಿತು. ಬಿಎಂಶ್ರೀ ಅವರು ಹಲವಾರು ಕನ್ನಡ ಸಾಹಿತ್ಯ, ಕವನ ಸಂಕಲನಗಳನ್ನು ನೀಡಿ ಹಲವಾರು ಉಪನ್ಯಾಸ ನೀಡಿದರು. ಇದರ ಪರಿಣಾಮ ಹೊಸ ಕವಿಗಳು ಬೆಳಕಿಗೆ ಬರಲು ಕಾರಣವಾಯಿತು ಎಂದರು.
    ಸಾಹಿತ್ಯ, ಸಂಸ್ಕೃತಿಯಿಂದ ಸಮೃದ್ಧಿ: ಯಾವ ದೇಶದಲ್ಲಿ ಸಾಹಿತ್ಯ ಶ್ರೀಮಂತಿಕೆ, ಸಂಸ್ಕೃತಿ, ಸಂಸ್ಕಾರ ಆಚರಣೆಯಲ್ಲಿರುತ್ತದೆಯೋ ಆ ದೇಶ ಸಮೃದ್ಧಿಯಾಗಿರುವುದರಲ್ಲಿ ಸಂದೇ ಇಲ್ಲ. ಆದಿಚುಂಚನಗಿರಿ ಮಠದ ಶಿವಮೊಗ್ಗ ಶಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಾಲ್ಯದಲ್ಲೇ ಎಳೆಯ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಬೇಕು. ಅವುಗಳನ್ನು ಮೊಳಕೆಯಲ್ಲಿ ಚಿವುಟಬಾರದು. ಇಂತಹ ಸಂಸ್ಕೃತಿ ಎಂದಿಗೂ ಉತ್ತಮ ಲಕ್ಷಣವಲ್ಲ ಎಂದರು. ಧರ್ಮ ಬಿಟ್ಟು ಸಾಹಿತ್ಯ ಇಲ್ಲ, ಸಾಹಿತ್ಯ ಬಿಟ್ಟು ಧರ್ಮ ಇಲ್ಲ. ಇದನ್ನು ದಾಸ ಹಾಗೂ ವಚನ ಸಾಹಿತ್ಯಗಳಲ್ಲಿ ಕಾಣಬಹುದು. ಸಂಗಿತ, ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಇಲ್ಲದವರನ್ನು ಪಶುಗಳಿಗೆ ಸಮಾನ ಎನ್ನುತ್ತಾರೆ. ವೈಚಾರಿಕ ಚಿಂತನೆಗಳಿಗೆ ಹೆಸರಾದ ಖ್ಯಾತ ಕವಿ ಸಾಹಿತಿ ಕುವೆಂಪು ಅವರು ಎಂದೂ ಮಠ, ಮಂದಿರ ದೇವರನ್ನು ವಿರೋಧಿಸಲಿಲ್ಲ. ಅಲ್ಲದೆ ಅವರು ತಮ್ಮ ಮೇಲೆ ಶ್ರೀ ರಾಮಕೃಷ್ಣ ಆಶ್ರಮ ಹಾಗೂ ವಿವೇಕಾನಂದರ ಸಾಹಿತ್ಯಗಳು ಅತಿಯಾದ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ ಎಂದರು.
    ಭಾರತೀಯ ಪರಂಪರೆಗೆ ಮಹತ್ವ: ಭಾರತೀಯ ಪರಂಪರೆಗಳಲ್ಲಿ ಸಾಹಿತ್ಯಕ್ಕೆ ವಿಶೇಷವಾದ ಮಹತ್ವ ಇದೆ. ಪ್ರಪಂಚಕ್ಕೆ ನಾಗರಿಕತೆಯನ್ನು ನೀಡಿದ ದೇಶ ನಮ್ಮದು ಎಂದು ನಗರಸಭೆ ಪೌರಾಯುಕ್ತ ಮನುಕುಮಾರ್ ಹೇಳಿದರು. ಸಿಂಧು ನದಿ ನಾಗರಿಕತೆ, ವೇದ ಸಂಸ್ಕೃತಿ ನಮ್ಮ ವಿಶೇಷವಾಗಿದೆ. ವಚನ ಸಾಹಿತ್ಯ ಸಾಮಾನ್ಯ ಜನರನ್ನು ತಲುಪಿದ ಆಡು ಭಾಷೆಯ ಕನ್ನಡದ ಶ್ರೇಷ್ಠ ಸಾಹಿತ್ಯವಾಗಿದೆ. ಹಾಗಾಗಿ ಇದು ಸಮಾಜದ ಲ್ಲ ವರ್ಗದವರನ್ನು ತಲುಪಿತು ಎಂದರು. ಇಂತಹ ಸಮ್ಮೇಳನಗಳು ಮಕ್ಕಳಲ್ಲಿರುವ ಸಾಹಿತ್ಯ, ಕವಿತೆಯ ಪ್ರತಿಭೆಗಳನ್ನು ಪೋಷಿಸಿ ಬೆಳೆಸಬೇಕು. ಜತೆಗೆ ಇಂತಹ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸಿಕೊಳ್ಳಿ. ಇಲ್ಲದಿದ್ದರೆ ಸಾಹಿತ್ಯದ ಸಂಗತಿಗಳು ಕಾಲಾಂತರದಲ್ಲಿ ಮರೆಯಾಗುತ್ತದೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts