More

    ಭಟ್ಕಳದಲ್ಲಿ ಪಶು ಆಸ್ಪತ್ರೆಗೆ ಬೀಗ

    ಭಟ್ಕಳ: ಕಳೆದ ಕೆಲ ದಿನಗಳಿಂದ ಪಟ್ಟಣದ ಪಶು ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಜಾನುವಾರುಗಳನ್ನು ಕರೆತರುವವರು ಬೀಗ ಹಾಕಿರುವ ಆಸ್ಪತ್ರೆಯನ್ನು ನೋಡಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ವಾಪಸಾಗುತ್ತಿದ್ದಾರೆ. ಆದರೆ, ಶನಿವಾರವೂ ಇಂತಹದ್ದೇ ಘಟನೆ ಪುನರಾವರ್ತನೆಯಾಗಿದ್ದರಿಂದ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸಿದರು.

    ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿರುವ ಪಶು ಆಸ್ಪತ್ರೆಯನ್ನು ಮೂರ್ನಾಲ್ಕು ದಿನಗಳಿಂದ ತೆರೆದಿಲ್ಲ ಎಂದು ಮುಂಡಳ್ಳಿಯ ಮಹಿಳೆ ನಾಗಮ್ಮ ಆರೋಪಿಸಿದರು. ಬುಧವಾರದಿಂದ ಅಸ್ವಸ್ಥಗೊಂಡಿರುವ ಕರುವನ್ನು ರಿಕ್ಷಾದಲ್ಲಿ ಇಲ್ಲಿಗೆ ಕರೆ ತಂದಿದ್ದೇನೆ. ಬೆಳಗ್ಗೆಯಿಂದ ಸಂಜೆವರೆಗೂ ಕಾದರೂ ಆಸ್ಪತ್ರೆ ಬೀಗ ತೆಗೆಯುತ್ತಿಲ್ಲ. ವಾರಕ್ಕೆರಡು ದಿನ ಸೋಮವಾರ ಮತ್ತು ಶನಿವಾರ ವೈದ್ಯರು ಲಭ್ಯರಿರುತ್ತಾರೆ ಎಂದು ಇಲ್ಲಿ ಚೀಟಿ ಬರೆದಿಡಲಾಗಿದೆ. ಶನಿವಾರ ಬೆಳಗ್ಗೆ 6 ಗಂಟೆಗೆ ಬಂದು ಕಾಯುತ್ತಿದ್ದರೂ ಮಧ್ಯಾಹ್ನದವರೆಗೂ ವೈದ್ಯರ ಸುಳಿವಿಲ್ಲ. ಆಸ್ಪತ್ರೆಯ ಇತರ ಸಿಬ್ಬಂದಿಯೂ ಬಂದು ಬಾಗಿಲು ತೆಗೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾರುಕೇರಿಯಿಂದ ಕೋಳಿ ಹಿಡಿದು ಬಂದ ವೃದ್ಧರೊಬ್ಬರು ವೈದ್ಯರು ಬರುತ್ತಾರೆ ಎಂದು ಸ್ಥಳದಿಂದ ಕದಲದೆ ಸರದಿಯಲ್ಲೆ ನಿಂತಿದ್ದರು. ತಾಲೂಕಿನ ವಿವಿಧ ಭಾಗಗಳಿಂದ ಹೀಗೆ ಹಲವರು ಜಾನುವಾರು, ಸಾಕು ಪ್ರಾಣಿಗಳನ್ನು ಚಿಕಿತ್ಸೆಗಾಗಿ ತಂದಿದ್ದರು. ವೈದ್ಯರು, ಸಿಬ್ಬಂದಿ ಬಾರದೇ ಇರುವುದರಿಂದ ಪ್ರತಿಭಟನೆ ನಡೆಸಿದರು. ಅಲ್ಲದೆ, ಮಾಧ್ಯಮದವರಿಗೆ ಮಾಹಿತಿ ನೀಡಿದರು.

    ———ಕೋಟ್​———

    ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ನಡೆಯುವ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಈಗಾಗಲೇ ಆರಂಭಗೊಂಡಿದ್ದು, ಜ. 20ರವರೆಗೆ ನಡೆಯಲಿದೆ. ಹಾಗಾಗಿ ಸಿಬ್ಬಂದಿ ಬೆಳಗ್ಗೆ ಮನೆಮನೆಗೆ ತೆರಳುತ್ತಿರುವುದರಿಂದ ಪಶು ಆಸ್ಪತ್ರೆ ಬಂದ್ ಆಗಿವೆ. ಕೂಡಲೆ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಿ ತಪಾಸಣೆ ನಡೆಸಲು ಸೂಚಿಸಲಾಗುವುದು.

    | ಬಸವರಾಜ ಜಿ. ಪಶು ವೈದ್ಯಾಧಿಕಾರಿ, ಪಶುಆಸ್ಪತ್ರೆ ಭಟ್ಕಳ

    ———–

    ಫೋಟೋ 8-ಬಿಕೆಎಲ್-2

    =========

    ಪೋಟೋ8ಶಿರಸಿ6

    ವಾರಾಂತ್ಯದ ಕರ್ಫ್ಯೂ, ಸಂಚಾರ ವಿರಳ

    ಪ್ರವಾಸಿ ತಾಣ, ದೇವಾಲಯ , ಅನವಶ್ಯಕ ಓಡಾಟ, ದಂಡ

    ಉತ್ತರ ಕನ್ನಡ: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ವಿಧಿಸಿದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾದ್ಯಂತ ಪಟ್ಟಣಗಳಲ್ಲಿ ಜನಸಂಚಾರ ಕಡಿಮೆಯಾಯಿತು.

    ದಿನಸಿ, ತರಕಾರಿ, ಹಣ್ಣು, ಮೀನು, ಮಾಂಸ, ಔಷಧ ಹಾಗೂ ಬೀದಿ ಬದಿಯ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಹೋಟೆಲ್, ಬೇಕರಿಗಳಲ್ಲಿ ಪಾರ್ಸಲ್ ವ್ಯವಸ್ಥೆ ಮಾಡಲಾಗಿತ್ತು. ಮೀನು ಮಾರುಕಟ್ಟೆಯಲ್ಲಿ ಜನಸಂದಣಿ ನೆರೆದಿತ್ತು. ಬಟ್ಟೆ, ಇಲೆಕ್ಟ್ರಾನಿಕ್ಸ್, ಮೊಬೈಲ್, ಸ್ಟೇಷನರಿ ಅಂಗಡಿಗಳು, ಗ್ಯಾರೇಜ್​ಗಳು ಬಂದಾಗಿದ್ದವು. ಜನ ಸಂಚಾರ ಎಂದಿಗಿಂತ ಕಡಿಮೆಯಾಗಿತ್ತು. ಪೊಲೀಸರು ಕೆಲ ಸರ್ಕಲ್​ಗಳಲ್ಲಿ ನಿಂತು ವಾಹನಗಳನ್ನು ತಡೆದು ಎಲ್ಲಿಗೆ ಹೋಗಲಿದ್ದೀರಿ ಎಂದು ವಿಚಾರಿಸಿದರು.

    ದಂಡದ ಬಿಸಿ: ಶಿರಸಿ ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಕೆಲ ಹೋಟೆಲ್​ಗಳಲ್ಲಿ ಪಾರ್ಸಲ್ ಸೇವೆ ನೀಡಲಾದರೂ, ಬಹಳಷ್ಟು ಹೋಟೆಲ್​ಗಳು ಮುಚ್ಚಿದ್ದವು. ಇನ್ನುಳಿದಂತೆ ಬೀದಿ ಬದಿ ತರಕಾರಿ ಮಾರಾಟ, ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ನಡೆಯಿತಾದರೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಾರುಕಟ್ಟೆಗೆ ಆಗಮಿಸಲಿಲ್ಲ.

    ಬೆಳಗ್ಗೆಯಿಂದಲೇ ಪೊಲೀಸರು ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು. ಅನಗತ್ಯವಾಗಿ ಬಂದವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮಾರುಕಟ್ಟೆಯಲ್ಲಿ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದರು.

    ಖರೀದಿ ನೆಪ: ಯಲ್ಲಾಪುರ ತಾಲೂಕಿನಲ್ಲಿ ವಾರಾಂತ್ಯ ಕರ್ಫ್ಯೂಗೆ ಶನಿವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ-ಮುಂಗಟ್ಟುಗಳು ಬಹುತೇಕ ಬಂದ್ ಇದ್ದರೂ, ಜನ ಹಾಗೂ ವಾಹನಗಳ ಓಡಾಟ ಕಡಿಮೆ ಇರಲಿಲ್ಲ. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನ ಜೋರಾಗಿಯೇ ಓಡಾಡುತ್ತಿರುವುದು ಕಂಡು ಬಂತು. ದೂರದ ಊರುಗಳ ಬಸ್​ಗಳು ಮಾತ್ರ ಸಂಚರಿಸುತ್ತಿದ್ದು, ಸ್ಥಳೀಯ ಬಸ್​ಗಳ ಓಡಾಟ ಇರಲಿಲ್ಲ. ಅನಗತ್ಯವಾಗಿ ಹೊರಬಂದರೆ ಕಠಿಣ ಕ್ರಮ ಎನ್ನುವುದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾದಂತಿತ್ತು.

    ಸ್ತಬ್ದಗೊಂಡ ಭಟ್ಕಳ: ಜನಜಂಗುಳಿಯಿಂದ ಕೂಡಿರುತ್ತಿದ್ದ ಭಟ್ಕಳ ಪಟ್ಟಣ ಸಂಪೂರ್ಣ ಸ್ತಬ್ದಗೊಂಡಿತ್ತು. ಅಗತ್ಯ ಸೇವೆಯ ಅಂಗಡಿ ಹೊರತುಪಡಿಸಿದರೆ ಉಳಿದೆಲ್ಲವೂ ಬಂದ್ ಆಗಿದ್ದವು. ಜನರು ಸ್ವಯಂಪ್ರೇರಿತರಾಗಿ ಕರ್ಫ್ಯೂಗೆ ಬೆಂಬಲ ನೀಡಿದರು. ವಾರಾಂತ್ಯದಲ್ಲಿ ಜನರಿಂದ ತುಂಬಿರುತ್ತಿದ್ದ ಮುರ್ಡೆಶ್ವರ ಬೀಚ್ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಬೆರಳೆಣಿಕೆಯ ಅಯ್ಯಪ್ಪ ವೃತಧಾರಿಗಳು, ಅಗತ್ಯ ಇರುವವರನ್ನು ಹೊರತುಪಡಿಸಿದರೆ ಮತ್ಯಾರು ಇರಲಿಲ್ಲ.

    ಉತ್ತಮ ಬೆಂಬಲ: ಸಿದ್ದಾಪುರ ತಾಲೂಕಿನಲ್ಲಿ ಕರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಿಕೇಂಡ್ ಕರ್ಪ್ಯೂಗೆ ಪಟ್ಟಣ ಪ್ರದೇಶ ಸೇರಿ ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಬೆಂಬಲ ದೊರಕಿದೆ. ಪಟ್ಟಣದಲ್ಲಿ ಅಗತ್ಯ ಸೇವೆಗಳಾದ ಔಷಧ ಅಂಗಡಿ, ದಿನಸಿ, ತರಕಾರಿ, ಮೀನು, ಮಾಂಸ, ಹಾಲಿನ ಕೇಂದ್ರಗಳು ಹಾಗೂ ಕೆಲವು ಹೋಟೆಲ್​ಗಳು ಮಾತ್ರ ತೆರೆದಿದ್ದು ಉಳಿದ ಎಲ್ಲ ಅಂಗಡಿಗಳು ಮುಚ್ಚಿದ್ದವು. ಪ್ರಭಾರಿ ತಹಸೀಲ್ದಾರ್ ರಮೇಶ ಹೆಗಡೆ, ಸಿಪಿಐ ಕುಮಾರ ಕೆ. ಅವರ ನೇತೃತ್ವದಲ್ಲಿ ಪೊಲೀಸ್, ಕಂದಾಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ತಾಲೂಕಿನಾದ್ಯಂತ ಸಂಚರಿಸಿ ವಿಕೇಂಡ್ ಕರ್ಫ್ಯೂವನ್ನು ಪರಿಶೀಲಿಸಿದರು.

    ಜನ ಸಂಚಾರವಿಲ್ಲ: ವಾರಾಂತ್ಯದ ಕರ್ಫ್ಯೂಗೆ ದಾಂಡೇಲಿ ಸಂಪೂರ್ಣ ಸ್ತಬ್ಧಗೊಂಡಿತ್ತು. ಜನಸಂಚಾರವಿಲ್ಲದೆ ಅಂಗಡಿ- ಮುಂಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಸೀಮಿತ ಬಸ್ ಸಂಚಾರವಿದ್ದ ಕಾರಣ ಜನ ವಿರಳವಾಗಿದ್ದರಿಂದ ಬಸ್ ನಿಲ್ದಾಣ, ಚನ್ನಮ್ಮ ವೃತ್ತ ಬಿಕೋ ಎನ್ನುತ್ತಿತ್ತು. ಕೆಲವೆಡೆ ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ವಿಧಿಸಿದರು.

    ಕುಮಟಾ ತಾಲೂಕಿನಲ್ಲಿಯೂ ಶನಿವಾರ ಜನ-ವಾಹನ ಸಂಚಾರ ತೀರ ಕಡಿಮೆಯಾಗಿದ್ದರೂ ಬೀದಿಬದಿ ವ್ಯಾಪಾರಿಗಳು ಹಾಗೂ ಅಗತ್ಯ ವಸ್ತುಗಳ ಮಾರಾಟಗಾರರು ನಿತ್ಯದಂತೆ ಬಾಗಿಲು ತೆರೆದು ವಹಿವಾಟು ನಡೆಸಿದರು. ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನಗಳ ತಪಾಸಣೆ ನಡೆಸಿದರು. ಆರೋಗ್ಯ ಇಲಾಖೆ ಹಾಗೂ ಪುರಸಭೆ ಜಂಟಿಯಾಗಿ ಹಲವೆಡೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಿದರು.

    ಮುಂಡಗೋಡ ಪಟ್ಟಣದ ಬಂಕಾಪುರ-ಯಲ್ಲಾಪುರ ಮತ್ತು ಹುಬ್ಬಳ್ಳಿ-ಶಿರಸಿ ರಸ್ತೆಗಳು ಜನ ಸಂಚಾರ ಮತ್ತು ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಆಗಾಗ ಓಡಾಡುತ್ತಿದ್ದ ಬೈಕ್ ಸವಾರರನ್ನು ಪೊಲೀಸರು ತಡೆದು ಕಾರಣ ವಿಚಾರಿಸಿದರು. ಅವಶ್ಯಕ ಸಾಮಗ್ರಿ ಸೇವೆ ಇತ್ತು. ಮೀನು ಮತ್ತು ಮಾಂಸದ ಮಾರುಕಟ್ಟೆಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಸಿಪಿಐ ಎಸ್.ಎಸ್. ಸಿಮಾನಿ ನೇತೃತ್ವದಲ್ಲಿ ತಾಲೂಕಿನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಹೊನ್ನಾವರದಲ್ಲಿ ಕಾರಣವಿಲ್ಲದೆ ಸಂಚರಿಸುವವರಿಗೆ ಪೊಲೀಸರು ಕಡಿವಾಣ ಹಾಕಿದರು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ನಿಗಾವಹಿಸಲಾಗಿತ್ತು. ಅನಗತ್ಯವಾಗಿ ಓಡಾಟ ನಡೆಸಿದವರ ಮೇಲೆ ಕ್ರಮ ಜರುಗಿಸಲಾಗಿದೆ. ನಾನಾ ರೀತಿಯ ನೆಪ ಹೇಳಿ ರಸ್ತೆಗಿಳಿಯುತ್ತಿರುವವರಿಗೆ ಪೊಲೀಸರಿಂದ ಬುದ್ಧಿ ಮಾತು ಹೇಳಿ ಕಳಿಸಿದರು.

    ಐವರ ವಿರುದ್ಧ ಪ್ರಕರಣ ದಾಖಲು

    ಹೊನ್ನಾವರ ತಾಲೂಕಿನಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಆರೋಪದಡಿ ಐವರ ವಿರುದ್ದ ಪ್ರಕರಣ ದಾಖಲಾಗಿದೆ. ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ಪ್ರವಾಸಿಗರನ್ನು ಶರಾವತಿ ನದಿಯಲ್ಲಿ ವಿಹಾರಕ್ಕೆ ಕರೆದುಕೊಂಡು ಹೋದ ಹಿನ್ನಲೆ ಮಾವಿನಕುರ್ವಾದ ಅಮ್ಕೂಸ್ ಗೌಡ, ಗಜಾನನ ಗೌಡ ಹಾಗೂ ಪ್ರವಾಸಿಗರಾದ ಬೆಂಗಳೂರಿನ ಪಳನಿ ಚಂದ್ರನ್ ಎಸ್., ಗೌತಮ, ಸೌಮ್ಯ ಇವರ ಮೇಲೆ ಪ್ರಕರಣ ದಾಖಲಾಗಿದೆ.

    ಶೇ. 25ರಷ್ಟು ಬಸ್ ಓಡಾಟ

    ಎನ್​ಡಬ್ಲುಕೆಆರ್​ಟಿಸಿ ಶಿರಸಿ ವಿಭಾಗದಲ್ಲಿ 400 ರಷ್ಟು ರೂಟ್​ಗಳು ದಿನವೂ ಓಡಾಡಬೇಕಿದ್ದು, ಶನಿವಾರ 5 ಗಂಟೆಯ ಹೊತ್ತಿಗೆ 90 ಬಸ್​ಗಳು ಮಾತ್ರ ಓಡಾಟ ನಡೆಸಿದ್ದವು. ರಾತ್ರಿ ಕೆಲವು ಬಸ್​ಗಳು ಓಡಾಡುವ ಸಾಧ್ಯತೆ ಇದ್ದು, ಒಟ್ಟು ಸಾಮರ್ಥ್ಯದ ಶೇ. 25ರಷ್ಟು ರೂಟ್​ಗಳು ಓಡಾಡಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಸಂಚಾರ ನಿಯಂತ್ರಕ ರಾಜಕುಮಾರ ತಿಳಿಸಿದ್ದಾರೆ.

    ಭಕ್ತರ ದಟ್ಟಣೆ ಇರದ ಗೋಕರ್ಣ

    ವಾರಾಂತ್ಯ ಕರ್ಫ್ಯೂನಿಂದಾಗಿ ಪ್ರಸಿದ್ಧ ಯಾತ್ರಾ ಸ್ಥಳ ಮತ್ತು ಪ್ರವಾಸಿ ತಾಣ ಗೋಕರ್ಣ ಸಂಪೂರ್ಣ ಸ್ತಬ್ಧವಾಗಿತ್ತು. ಕ್ಷೇತ್ರದ ಮುಖ್ಯ ರಸ್ತೆಗಳು ಜನರಿಲ್ಲದೆ ಖಾಲಿಯಾಗಿದ್ದವು. ಬೀಚ್ ಮತ್ತು ಮುಖ್ಯ ದೇವಾಲಯಗಳಲ್ಲಿ ಜನ ಹಾಗೂ ಭಕ್ತರ ಸಂಖ್ಯೆ ಕಡಿಮೆಯಿತ್ತು. ಹೀಗಾಗಿ ವಸತಿ ಗೃಹ, ಲಾಜ್, ರೆಸಾರ್ಟ್​ಗಳಲ್ಲೂ ಯಾವುದೇ ಭರಾಟೆ ಇರಲಿಲ್ಲ. ಅಗತ್ಯ ವಸ್ತುಗಳ ಅಂಗಡಿ ಮಾತ್ರ ಕಾರ್ಯ ನಿರ್ವಹಿಸಿದವು. ಮಂದಿರ ಬಳಿ ಸೇರಿ ಮುಖ್ಯ ರಸ್ತೆಯ ಎಲ್ಲ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಮಹಾಬಲೇಶ್ವರ ಮತ್ತು ಇತರ ಮುಖ್ಯ ಮಂದಿರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿತ್ತು. ಆದರೆ, ಭಕ್ತರ ದಟ್ಟಣೆ ಇರಲಿಲ್ಲ. ಮಹಾಬಲೇಶ್ವರ ಮಂದಿರದಲ್ಲಿ ನಿತ್ಯ ನಡೆಯುತ್ತಿದ್ದ ಅಮೃತಾನ್ನ ಭೋಜನ ವ್ಯವಸ್ಥೆಯನ್ನು ಸರ್ಕಾರಿ ಆದೇಶದಂತೆ ಶುಕ್ರವಾರದಿಂದ ರದ್ದು ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts