More

    ಭಗವಂತನ ಋಣ ಯಾರೂ ತೀರಿಸಲಾರರು

    ಚಿತ್ರದುರ್ಗ: ವಿದ್ಯೆ-ಆಧ್ಯಾತ್ಮ ಕಲಿಸಿಕೊಟ್ಟ ಗುರು, ಜೀವ ಕೊಟ್ಟ ಭಗವಂತನ ಋಣ ಈ ಜಗತ್ತಿನಲ್ಲಿ ಯಾರೂ ತೀರಿಸಲಾರರು ಎಂದು ಕಣ್ವಕುಪ್ಪೆ ಗವಿಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಹಿರೇಗುಂಟನೂರು ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ದೇಗುಲ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿಯ ನೂತನ ಸನ್ನಿಧಾನ ಲೋಕಾರ್ಪಣೆ, ಕಳಸ ಪ್ರತಿಷ್ಠಾಪನೆಯ ಧರ್ಮ ಸಭೆಯ ಸಾನಿಧ್ಯವಹಿಸಿ ಮಾತನಾಡಿದರು.

    ವಿಶ್ವರೂಪಿಯಾದ ಭಗವಂತ ಮಾನವನಿಗೆ ಪಂಚ ತನ್ಮಾತ್ರಗಳನ್ನು ಉದಾರವಾಗಿ ಉಡುಗೊರೆ ರೂಪದಲ್ಲಿ ಕರುಣಿಸಿದ್ದಾನೆ. ಸದ್ಭಕ್ತರ ಶ್ರದ್ಧೆ, ನಿಷ್ಠೆ, ಪಾವಿತ್ರತೆಯ ಕಾಯಕಕ್ಕೆ ನಿಜಕ್ಕೂ ಮನಸೋಲುತ್ತಾನೆ ಎಂದರು.

    ಧರ್ಮ ಗುರು ತಾನು ನಿರಂತರವಾಗಿ ಮಾಡಿದ ಎಲ್ಲ ಪ್ರಕಾರದ ತಪಸ್ಸು, ಶಕ್ತಿಯನ್ನು ಶಿಷ್ಯರಿಗೆ, ಭಕ್ತರಿಗೆ ಧಾರೆಯೆರೆದು ಅವರ ಕಂಟಕ, ದುಃಖ, ದ್ವೇಷ, ಪಾಪ ಶಮನ ಮಾಡುತ್ತಾನೆ. ಹೀಗಾಗಿ ಗುರುವಿನ ಋಣವನ್ನು ಮರೆಯುವಂತಿಲ್ಲ ಎಂದು ಹೇಳಿದರು.

    ಸಮಾಜದಲ್ಲಿನ ಗುರು-ಹಿರಿಯರಿಗೆ ಗೌರವ, ಧರ್ಮ-ತತ್ವಾದರ್ಶ ಪಾಲನೆ, ಸತ್ಯ ನುಡಿಯುವುದು ಇವು ಸನ್ಮಾರ್ಗದಲ್ಲಿ ಸಾಗಲು ಸಹಕಾರಿಯಾಗಿವೆ. ಅದರಂತೆ ನಡೆದಾಗ ಜೀವನ ಸಾರ್ಥಕವಾಗಲಿದೆ. ಯಾರೂ ದುಶ್ಚಟಗಳಿಗೆ ದಾಸರಾಗಬೇಡಿ. ಕಷ್ಟಪಟ್ಟು ದುಡಿದು ಹಣ ಭವಿಷ್ಯ ರೂಪಿಸಿಕೊಳ್ಳಲು, ಸತ್ಕಾರ್ಯಗಳಿಗೆ ಬಳಸಿ ಎಂದು ಸಲಹೆ ನೀಡಿದರು.

    ಶಿಲ್ಪಿಗಳು ಅತ್ಯಂತ ಸುಂದರವಾಗಿ ಮಂದಿರ ನಿರ್ಮಿಸಿದ್ದಾರೆ. ಭಕ್ತರ ಮನಸ್ಸಿಗೆ ಹಿತ ನೀಡುವ ನಿಟ್ಟಿನಲ್ಲಿ ಆಂಜನೇಯಸ್ವಾಮಿ ದೇಗುಲ ಖ್ಯಾತಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬ್ರಾಹ್ಮೀ ಮುಹೂರ್ತದಲ್ಲಿ ಸ್ವಾಮಿಯ ಮೂರ್ತಿ ಮತ್ತು ಕಳಶಕ್ಕೆ ರುದ್ರಾಭಿಷೇಕ, ಅಲಂಕಾರ, ನವಗ್ರಹ ಹೋಮ ಹಾಗೂ ಜಯಾದಿ ಹೋಮ ನೆರವೇರಿಸಲಾಯಿತು. ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮುಖಂಡ ಭೀಮಸಮುದ್ರದ ಜಿ.ಎಸ್.ಮಂಜುನಾಥ್, ದ್ಯಾಮಲಾಂಬ ದೇಗುಲ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಈ.ಚಂದ್ರಣ್ಣ, ಆಂಜನೇಯಸ್ವಾಮಿ ದೇಗುಲ ಸಮಿತಿ ಅಧ್ಯಕ್ಷ ಎಸ್.ರಾಜ್‌ಕುಮಾರ್, ಚಂದ್ರಕಾಂತ್ ಎಸ್.ಪಾಟೀಲ್, ಪ್ರಭಾಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts