More

    ಭಕ್ತರು ಬಲಿಗಾಗಿ ತಂದಿದ್ದ 150 ಪ್ರಾಣಿ-ಪಕ್ಷಿಗಳ ರಕ್ಷಣೆ

    ಬೆಳಗಾವಿ: ಖಾನಾಪುರ ತಾಲೂಕಿನ ಕಕ್ಕೇರಿ ಬಿಷ್ಟಾದೇವಿ ಜಾತ್ರೆಯಲ್ಲಿ ಭಕ್ತರು ಬಲಿಗಾಗಿ ತಂದಿದ್ದ 150ಕ್ಕೂ ಅಧಿಕ ಪ್ರಾಣಿಗಳನ್ನು ರಕ್ಷಿಸಿ, ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಲಾಯಿತು.

    ಅ.4 ಮತ್ತು 5ರಂದು ಆಯುಧ ಪೂಜೆ ಮತ್ತು ವಿಜಯದಶಮಿ ಸಂದರ್ಭದಲ್ಲಿ ಕಕ್ಕೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಶಕ್ತಿ ದೇವತೆ ಭಿಷ್ಟಾದೇವಿ ಜಾತ್ರೆಯಲ್ಲಿ ಪೊಲೀಸರ ಸಹಕಾರದಿಂದ ಸಾವಿರಾರು ಪ್ರಾಣಿಗಳ ಬಲಿ ತಡೆಯುವಲ್ಲಿ ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ ಸಂಪೂರ್ಣ ಯಶಸ್ವಿಯಾಗಿದೆ.

    ಕೆಲ ಭಕ್ತರು ಕೋಳಿ ಮತ್ತು ಆಡು (ಮೇಕೆ), ಕುರಿಗಳನ್ನು ಪೊಲೀಸರ ಕಣ್ಣು ತಪ್ಪಿಸಿ ದೂರದೂರದಲ್ಲಿ ಬಲಿ ಕೊಡಲು ಪ್ರಯತ್ನಿಸಿದರಾದರೂ ಪೊಲೀಸರು ಮುಂಜಾಗ್ರತೆ ವಹಿಸಿ ಸುಮಾರು 150ಕ್ಕೂ ಹೆಚ್ಚು ಕೋಳಿ, ಆಡು ಹಾಗೂ ಕುರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪಶುಸಂಗೊಪನಾ ಇಲಾಖಾ ಅಧಿಕಾರಿಗಳ ಸುಪರ್ದಿಗೆ ಕೊಟ್ಟರು. ಕಕ್ಕೇರಿ ಜಾತ್ರಾ ಮೈದಾನದಿಂದ ಅಳ್ನಾವರ ಮತ್ತು ಬೀಡಿವರೆಗಿನ ಸುಮಾರು 15 ಕಿಮೀ ವ್ಯಾಪ್ತಿಯಲ್ಲಿ ಎಲ್ಲಿಯೂ ಪ್ರಾಣಿ ಬಲಿ ನಡೆಯಲು ಅವಕಾಶ ನೀಡಲಿಲ್ಲ. ರಕ್ಷಿಸಲ್ಪಟ್ಟ ಪ್ರಾಣಿಗಳನ್ನು ಬೆಳಗಾವಿಯ ಕಾರ್ಪೋರೇಷನ್ ಗೋಶಾಲೆಯಲ್ಲಿ ಪಾಲನೆ ಪೋಷಣೆಗಾಗಿ ಬಿಡಲಾಗಿದೆ.

    ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ ಲಕ್ಷಾಂತರ ಭಕ್ತರು ಕಕ್ಕೇರಿಗೆ ಆಗಮಿಸಿ ಭಕ್ತಿ, ಶ್ರದ್ಧೆ, ಸಮರ್ಪಣೆಯಿಂದ ತಾಯಿ ಭಿಷ್ಟಾದೇವಿ ಆರಾಧನೆ ನಡೆಸಿ ಹರಕೆ ಸಲ್ಲಿಸಿದರು. ಪ್ರಾಣಿ ಬಲಿಗೆ ಬದಲಾಗಿ ತೆಂಗಿನಕಾಯಿ ಒಡೆದು, ಎಳನೀರು ಅಭಿಷೇಕ ಮಾಡಿ, ಧೂಪ, ದೀಪ, ಕರ್ಪೂರದ ಆರತಿ, ಅಕ್ಕಿ ನೈವೇದ್ಯ, ಬಾಳೆಹಣ್ಣು, ಅರಿಶಿಣ-ಕುಂಕುಮ, ಹೂವು ಮುಂತಾದ ಮಂಗಳ ದ್ರವ್ಯಗಳಿಂದ, ಸಾತ್ವಿಕ ಪರಿಕರಗಳಿಂದ ಅಹಿಂಸಾತ್ಮಕವಾಗಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

    ಬೆಂಗಳೂರಿನ ಬಸವ ಧರ್ಮ ಜ್ಞಾನಪೀಠದ ದಯಾನಂದ ಸ್ವಾಮೀಜಿ, ಮಹಿಳಾ ಸಂಚಾಲಕಿ ಸುನಂದಾ ದೇವಿ, ಕಾರ್ಯಕರ್ತ ಶರಣಪ್ಪ ಕಮ್ಮಾರ ಸೇರಿ ನೂರಾರು ಪೊಲೀಸ್ ಸಿಬ್ಬಂದಿ ಇದ್ದರು.

    ವಾರದಿಂದ ನಿರಂತರ ಜಾಗೃತಿ: ವಿಶ್ವಪ್ರಾಣಿ ಕಲ್ಯಾಣ ಮಂಡಳಿಯು 1959ರ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾನೂನು ಅಡಿಯಲ್ಲಿ ರಾಜ್ಯ ಹೈಕೋರ್ಟ್ ಆದೇಶ ಪಡೆದು ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸುದ್ದಿ ಮಾಧ್ಯಮಗಳ ಸಹಯೋಗಯೊಂದಿಗೆ ಸುಮಾರು 12 ವರ್ಷಗಳಿಂದ ನಿರಂತರವಾಗಿ ಪ್ರಯತ್ನ ನಡೆಸಿದ್ದರಿಂದ ಪ್ರಾಣಿಬಲಿ ತಡೆ ಯಶಸ್ಸು ಕಂಡಿತು. ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯು ವ್ಯಾಪಕವಾಗಿ ಪ್ರಾಣಿಬಲಿ ತಡೆ ಕುರಿತು ಜಾಗೃತಿ ಮೂಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts