More

    ಬ್ಯಾರಿಕೇಡ್ ಇಟ್ಟಿರೋದು ಸರಿಸೋಕಾ?

    ಹುಬ್ಬಳ್ಳಿ: ಬಿಟ್ಟು ಬಿಟ್ಟು ಕಾಡುವ ಕರೊನಾ ಮಹಾಮಾರಿಯ ಭಯ. ಅದೇ ಕಾರಣಕ್ಕೆ ನಿರ್ದಿಷ್ಟ ಪ್ರದೇಶವನ್ನು ಸೀಲ್ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಸರ್ಕಾರದ ದಾಖಲೆಗಳಲ್ಲೇನೋ ಸೀಲ್​ಡೌನ್ ಆಗಿದೆ. ಇಲ್ಲಿ ನೋಡಿದರೆ, ರಸ್ತೆಗೆ ಹಾಕಿರುವ ಬ್ಯಾರಿಕೇಡ್ ಅನ್ನು ಸಲೀಸಾಗಿ ಸರಿಸಿಕೊಂಡು ಬೈಕ್ ದಾಟಿಸಿಕೊಂಡು ಹೋಗುವ ಪುರುಷ-ಮಹಿಳಾ ಸವಾರರ ಸಾಲು ಸಾಲು…

    ನಗರದ ಕೇಶ್ವಾಪುರ ಆಜಾದ್ ಕಾಲನಿ ಬಳಿ ಶನಿವಾರ ಇಂಥ ದೃಶ್ಯ ಸಾಮಾನ್ಯವಾಗಿತ್ತು. ಕಾಲನಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಆದರೆ, ಆ ಪ್ರದೇಶಕ್ಕೆ ಸಲೀಸಾಗಿ ಹೋಗುವ-ಬರುವ ವ್ಯಕ್ತಿಗಳ ವರ್ತನೆ ಇಡೀ ಸೀಲ್​ಡೌನ್ ಪ್ರದೇಶವನ್ನು ಅಣಕಿಸುವಂತೆ ಕಂಡುಬಂತು.

    ಕಳೆದ ಕೆಲ ದಿನಗಳಿಂದ ಲಾಕ್​ಡೌನ್ ನಿಯಮಗಳನ್ನು ಉಲ್ಲಂಘಿಸಿ ಬೈಕ್, ಆಟೋ, ಕಾರು ಸವಾರರು ಹಾಗೂ ಪಾದಚಾರಿಗಳು ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಂಚರಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ.

    ಈ ಮಧ್ಯೆ ಕೇಶ್ವಾಪುರ ಆಜಾದ್ ಕಾಲನಿಯ ಬಾಲಕಿಯೊಬ್ಬಳಲ್ಲಿ ಕರೊನಾ ಸೋಂಕು ಪತ್ತೆಯಾದ ಕಾರಣ ಇಡೀ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಆದರೆ, ಕೇಶ್ವಾಪುರ ಬೆಂಗೇರಿ ಸಂತೆ ಮೈದಾನ ಬಳಿಯ ಎಸ್​ಬಿಐ ಎದುರು ಹಾಕಿರುವ ಬ್ಯಾರಿಕೇಡ್ ಮತ್ತು ರಮೇಶ ಭವನ ಎದುರಿನ ಬ್ಯಾರಿಕೇಡ್​ಗಳಲ್ಲಿ ಮಾತ್ರ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವುದು ಕಾಣುತ್ತದೆ. ಉಳಿದ ಕಡೆಗಳಲ್ಲಿ, ಸುಲಭವಾಗಿ ಸರಿಸಬಹುದಾದ ಬ್ಯಾರಿಕೇಡ್​ಗಳಷ್ಟೇ ಇವೆ.

    ಆಜಾದ್ ಕಾಲನಿ ಪ್ರವೇಶಿಸುವ ಸವೋದಯ ವೃತ್ತದಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿದ್ದರೂ ಕಳೆದೆರೆಡು ದಿನಗಳಿಂದ ಅಲ್ಲಿ ಪೊಲೀಸರು ಇಡೀ ದಿನ ಇರುವುದಿಲ್ಲ. ಶುಕ್ರವಾರವಷ್ಟೇ ಸವೋದಯ ವೃತ್ತದ ಬಳಿಯ ಬ್ಯಾರಿಕೇಡ್ ಒಳಗಿನಿಂದ ಜನರು ನುಸುಳುತ್ತಿರುವ ಚಿತ್ರವನ್ನು ‘ವಿಜಯವಾಣಿ’ ವರದಿ ಸಹಿತ ಪ್ರಕಟಿಸಿತ್ತು. ಶನಿವಾರ ಮಧ್ಯಾಹ್ನ ಸಹ ಬ್ಯಾರಿಕೇಡ್​ಗಳನ್ನು ತಳ್ಳಿ ಬೈಕ್ ಸವಾರರು ಯಾರ ಅಂಜಿಕೆಯೂ ಇಲ್ಲದೇ ಸೀಲ್​ಡೌನ್ ಪ್ರದೇಶದಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿತು.

    ಹೆಚ್ಚು ಸೋಂಕಿತರು ಪತ್ತೆಯಾಗಿರುವ ಕಾರಣ ಮುಲ್ಲಾ ಓಣಿ ಹಾಗೂ ಕರಾಡಿ ಓಣಿ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಅಲ್ಲಿ ಯ ಜನರು ತೊಂದರೆಗಳನ್ನು ಲೆಕ್ಕಿಸದೇ ಗರಿಷ್ಠ ಪ್ರಮಾಣದಲ್ಲಿ ಆದೇಶ ಪಾಲಿಸುತ್ತಿದ್ದಾರೆ. ಬಿಗಿ ಪೊಲೀಸ್ ಪಹರೆಯೂ ಇದೆ. ಅಂಥದ್ದೇ ಆದೇಶ ಇರುವ ಕೇಶ್ವಾಪುರ ಆಜಾದ್ ಕಾಲನಿಯಲ್ಲಿ ಮಾತ್ರ ವ್ಯತಿರಿಕ್ತ ಪರಿಸ್ಥಿತಿ ಇರುವುದು ಏಕೆ ಎನ್ನುವ ಪ್ರಶ್ನೆ ಕಾಡತೊಡಗಿದೆ.

    ಲಾಕ್​ಡೌನ್ ಆದೇಶ ಸಾರ್ವತ್ರಿಕವಾಗಿದ್ದರೂ ಸರ್ಕಾರವೇ ಕೆಲವು ವಿಷಯದಲ್ಲಿ ಸಡಿಲಿಕೆ ಮಾಡಿರುವುದು, ವಿನಾಕಾರಣ ಬೈಕ್​ನಲ್ಲಿ ತಿರುಗುವ ಕೆಲವರಿಗೆ ಹೆಚ್ಚು ಖುಷಿ ನೀಡಿದೆ. ಆಗೊಮ್ಮೆ ಈಗೊಮ್ಮೆ ಬೈಕ್, ಕಾರುಗಳನ್ನು ನಿಲ್ಲಿಸಿ ದಾಖಲೆ ಕೇಳುವ ಪೊಲೀಸರು, ಅಸಮರ್ಪಕ ಮಾಹಿತಿಯ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ನಗರದ ಪ್ರಮುಖ ರಸ್ತೆ, ಸಂಚಾರ ವೃತ್ತಗಳಲ್ಲಿ ಶನಿವಾರ ಹೆಚ್ಚಿನ ಸಂಖ್ಯೆಯ ವಾಹನಗಳು ಕಂಡುಬಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts