More

    ಬೋಧನೆಯಲ್ಲಿ ತಂತ್ರಜ್ಞಾನ ಅವಶ್ಯ

    ಹುಕ್ಕೇರಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಬೋಧನೆ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳನ್ನು ರೂಪಿಸಲು ವಿಶ್ವನಾಥ ಕತ್ತಿ ಧರ್ಮಾರ್ಥ ಹಾಗೂ ರಾಜೇಶ್ವರಿ ಕತ್ತಿ ಚಾರಿಟೇಬಲ್ ಟ್ರಸ್ಟ್‌ನಿಂದ ಡಿಜಿಟಲ್ ಸೌಲಭ್ಯ ಒದಗಿಸಿದ ಮಾಜಿ ಸಚಿವ ದಿ.ಉಮೇಶ ಕತ್ತಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಕಾರ್ಯ ಶ್ಲಾಘನೀಯ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಹೇಳಿದರು.

    ತಾಲೂಕಿನ ಬೆಲ್ಲದ ಬಾಗೇವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಸೋಮವಾರ ಡಿಜಿಟಲ್ ಬೋರ್ಡ್ ಉದ್ಘಾಟಿಸಿ ಮಾತನಾಡಿ, ನಾನು ಮತ್ತು ನನ್ನ ಸೋದರರಿಬ್ಬರೂ ವಿದೇಶದಲ್ಲಿ ಅಧ್ಯಯನ ಮಾಡುವಾಗ ಅಲ್ಲಿನ ಶಾಲೆಗಳನ್ನು ಗಮನಿಸಿ ಅಂತಹ ವ್ಯವಸ್ಥೆ ನಮ್ಮಲ್ಲೂ ಇರಬೇಕೆಂದು ಪ್ರಧಾನ ಗುರು ಮುಚಖಂಡಿ ಅವರಿಗೆ ತಿಳಿಸಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ನಮ್ಮ ಯೋಜನೆ ವಿಳಂಬವಾಗಿತ್ತು. ಈ ವಿಷಯ ನಮ್ಮ ದೊಡ್ಡಪ್ಪ ದಿ.ಉಮೇಶ ಕತ್ತಿ ಹಾಗೂ ಅವರ ಸೋದರ ರಮೇಶ ಕತ್ತಿ ಅವರಿಗೆ ಗೊತ್ತಾಗಿ ಪ್ರಾಯೋಗಿಕವಾಗಿ ನಮ್ಮ ಗ್ರಾಮದಲ್ಲಿ ಎರಡು ಡಿಜಿಟಲ್ ಕ್ಲಾಸ್ ಪ್ರಾರಂಭಿಸಲು ನಮ್ಮ ಅಜ್ಜ, ಅಜ್ಜಿ ಹೆಸರಿನ ಟ್ರಸ್ಟ್‌ನಿಂದ ಈ ಸೌಲಭ್ಯ ನೀಡಿದರು. ಇದೀಗ ಅದು ಸಾಕಾರಗೊಂಡಿದೆ. ಜತೆಗೆ ಡಿಜಿಟಲ್ ಗ್ರಂಥಾಲಯ (ಇ-ಲೈಬ್ರರಿ) ಸಹ ಪ್ರಾರಂಭಿಸುವ ಚಿಂತನೆ ಇದೆ ಎಂದರು.

    ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಮಾತನಾಡಿ ಮುಂಬರುವ ದಿನಗಳಲ್ಲಿ ಹುಕ್ಕೇರಿ ಮತಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆ ಕೈಗೊಳ್ಳಲು ನಮ್ಮ ಕುಟುಂಬದ ಟ್ರಸ್ಟ್‌ನಿಂದ ಸಹಕರಿಸುವುದಾಗಿ ತಿಳಿಸಿದ ಅವರು ಒಟ್ಟಾರೆ ನಮ್ಮ ಕ್ಷೇತ್ರದ ಶಾಲೆ ಹಾಗೂ ಮಕ್ಕಳ ಪ್ರತಿಭೆ ರಾಜ್ಯದ ಜನರ ಗಮನ ಸೆಳೆಯುವಂತಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು.

    ಶಿಕ್ಷಕರ ಸಂಘಟನೆ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಿದ್ರಾಮ ಲೋಕನ್ನವರ ಮಾತನಾಡಿ, ಕತ್ತಿ ಸಹೋದರರ ಜನ್ಮ ದಿನದ ನಿಮಿತ್ತ ನೀಡಿದ ಕೊಡುಗೆ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ. ಜನ್ಮದಿನದಂದು ಶಾಲೆಗಳಿಗೆ ಆಧುನಿಕ ಸೌಲಭ್ಯದ ಕೊಡುಗೆ ನೀಡಿದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರವಾಗುತ್ತದೆ ಎಂದರು. ಶಾಲಾ ಸಿಬ್ಬಂದಿ ಹಾಗೂ ವಿವಿಧ ಮುಖಂಡರು ಪೃಥ್ವಿ ಮತ್ತು ಪವನ ಕತ್ತಿ ಅವರನ್ನು ಸತ್ಕರಿಸಿದರು.

    ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಾಹುರಕರ, ಉಪಾಧ್ಯಕ್ಷ ಗಂಗಪ್ಪ ನಾಂವಿ, ಸಿದ್ಲಿಂಗಯ್ಯ ಕಡಹಟ್ಟಿ ಹಾಗೂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರಾದ ಸಂತೋಷ ಮುಗಳಿ, ನಿಂಗಪ್ಪ ಮಾಳಗಿ, ಮುಖಂಡರಾದ ಮಹಾನಿಂಗ ಶೆಟ್ಟಿ, ಮಲ್ಲಣ್ಣ ಕಣಗಲಿ, ವಲಯ ಅರಣ್ಯಾಧಿಕಾರಿ ಮಹಾಂತೇಶ ಸಜ್ಜನ, ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ, ಎಸ್.ಡಿ.ನಾಯಿಕ, ಸರ್ಕಾರಿ ನೌಕರರ ಸಂಘಟನೆ ರಾಜ್ಯ ಸಹ ಕಾರ್ಯದರ್ಶಿ ಮಹಾಂತೇಶ ನಾಯಿಕ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎನ್.ಎಸ್.ದೇವರಮನಿ, ಬಿ.ಬಿ.ಅಂಗಡಿ, ಎಚ್.ಎಲ್.ಪೂಜೇರಿ ಮತ್ತಿತರರಿದ್ದರು. ಪ್ರಧಾನ ಗುರುಗಳಾದ ಕೆ.ಸಿ.ಮುಚಖಂಡಿ ಸ್ವಾಗತಿಸಿದರು. ಅನಿಲ ಹಂಜಿ, ಶೋಭಾ ಚೌಗಲಾ ನಿರೂಪಿಸಿದರು. ಪಿ.ಜಿ.ರಾಯ್ಕರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts