More

    ಬೇಡಿಕೆ ಈಡೇರಿಸಿಕೊಳ್ಳಲು ಸುಸಮಯ, ಶ್ರೀ ನಂಜಾವಧೂತ ಸ್ವಾಮೀಜಿ ಅಭಿಮತ ಪಾರದರ್ಶಕವಾಗಿ ಜಾತಿವಾರು ಗಣತಿಗೆ ಪಟ್ಟು

    ನೆಲಮಂಗಲ: ಒಕ್ಕಲಿಗ ಸಮುದಾಯದ ಬೇಡಿಕೆ ಈಡೇರಿಸಿಕೊಳ್ಳುವ ಸುಸಮಯ ಒದಗಿಬಂದಿದ್ದು, ಒಕ್ಕೊರಲಿನಿಂದ ಸಮುದಾಯ ಶಬ್ದ ಮಾಡಬೇಕಿದೆ ಎಂದು ತುಮಕೂರು ಜಿಲ್ಲೆಯ ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಕರೆ ನೀಡಿದರು.

    ಬೆಂಗಳೂರು ಉತ್ತರ ತಾಲೂಕು ನಗರೂರು ಗ್ರಾಮದ ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಶನಿವಾರ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ ಒಕ್ಕಲಿಗರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

    ರಾಜ್ಯದ 1 ಮತ್ತು 2ನೇ ಸ್ಥಾನದಲ್ಲಿದ್ದ ಅತಿದೊಡ್ಡ ಜನಾಂಗವನ್ನು 5, 6ನೇ ಸ್ಥಾನಕ್ಕೆ ಕೊಂಡೊಯ್ಯುವ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ. ಇದರಿಂದ ವೀರಶೈವ ಸಮುದಾಯಕ್ಕೂ ಅಪಾಯ ಎದುರಾಗಿದೆ. ಆದ್ದರಿಂದ ಸರ್ಕಾರವನ್ನು ಹೊರತುಪಡಿಸಿ ಇನ್ನೊಮ್ಮೆ ಪ್ರತ್ಯೇಕ ಸಮಿತಿ ರಚಿಸಿ ಪಾರದರ್ಶಕವಾಗಿ ಜಾತಿವಾರು ಗಣತಿ ಮಾಡಬೇಕಿದೆ ಎಂದರು.

    ಗಣತಿ ವೇಳೆ ನೀಡಿದ್ದ ಜಾತಿಯ ಕೋಡ್‌ಗಳಿಂದ ಹಲವು ವ್ಯತ್ಯಾಸಗಳಾಗಿವೆ. ಬಡತನ ರೇಖೆಗಿಂತ ಕೆಳಗಿರುವ ಸಮುದಾಯದ ಉಪಪಂಗಡಗಳನ್ನು ಒಬಿಸಿಗೆ ಸೇರಿಸಬೇಕು. ಒಕ್ಕಲಿಗ ಸಮುದಾಯಕ್ಕೆ ಶೇ.8 ರಿಂದ 11 ಮೀಸಲಾತಿ ಹೆಚ್ಚಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವುದು ನಿಗಮದ ಉದ್ದೇಶವಾಗಬೇಕು. ಮೀಸಲಾತಿ ಹೆಚ್ಚಳ ಕುರಿತಂತೆ ಎಲ್ಲ ರಾಜ್ಯ ಸರ್ಕಾರಗಳ ಸಲಹೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಳಿದ್ದು, ಸಮುದಾಯದ ಶಾಸಕರು ಸಚಿವರು ಈ ಬಗ್ಗೆ ಧ್ವನಿ ಎತ್ತಬೇಕು ಎಂದರು.

    ಇದು ಚಿಂತನಾ ಸಭೆ: ರಾಜ್ಯದ ಎಲ್ಲ ಜಿಲ್ಲೆಗಳ ಸಂಘಟನೆಗಳ ಪದಾಧಿಕಾರಿಗಳ ಚಿಂತನಾ ಸಭೆಯೇ ಹೊರತು ಇದು ಸಮಾವೇಶವಲ್ಲ. ಈ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಸೇರಿ ವಿವಿಧ ಪಕ್ಷಗಳ ಮುಖಂಡರು ಬಾರದಿರುವುದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಆದಿಚುಂಚನಗುರಿ ಮಹಾಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸ್ಪಷ್ಟಪಡಿಸಿದರು.

    ಸಮಾವೇಶ ಮಾಡುವ ಸಂದರ್ಭ ಒಕ್ಕಲಿಗರಿಗೆ ಒದಗಿಬಂದಿಲ್ಲ. ಸಮುದಾಯಕ್ಕೆ ಯಾವುದೇ ಬೇಡಿಕೆಗಳಿಲ್ಲ. ಬರಬೇಕಾಗಿರುವ ಆಶೋತ್ತರಗಳ ಬಗ್ಗೆ ಸರ್ಕಾರವನ್ನು ಕೇಳಲಾಗುತ್ತಿದೆ. ಕಾಲಕಾಲಕ್ಕೆ ಸಮುದಾಯದ ಜನಪ್ರತಿನಿಧಿಗಳು, ಅನುಭವಿಗಳ ಜತೆ ಸಮಾಲೋಚನೆ ನಡೆಸಿ ಸಮುದಾಯಕ್ಕೆ ಬರಬೇಕಿರುವ ಸವಲತ್ತುಗಳು ಹಾಗೂ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸಮುದಾಯದ ಸಂಘಟನೆಗಳಿಗೆ ತೊಂದರೆಯಾಗದಂತೆ ಒಕ್ಕೂಟ ಕೆಲಸ ಮಾಡಬೇಕು ಎಂದರು.
    ಬ್ರಾಹ್ಮಣರು, ವೀರಶೈವ ಲಿಂಗಾಯತರಂತೆ ಒಕ್ಕಲಿಗ ಸಮುದಾಯದ ಏಳಿಗೆಗೆ ಸಂಸ್ಕಾರ ಅಗತ್ಯ. ಕಾರ್ಯಸಿದ್ಧಿಗಾಗಿ ದೇವರ ಕೃಪೆ ಬೇಕಾಗಿದ್ದು, ಇಷ್ಟದೇವರು, ಕುಲದೇವರನ್ನು ನಿತ್ಯ ಪ್ರಾರ್ಥಿಸಬೇಕು. ಚಿಕ್ಕಂದಿನಿಂದಲೇ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಬೇಕು. ದುಶ್ಚಟಗಳಿಂದ ದೂರವಿರಬೇಕು. ಒಗ್ಗಟ್ಟಿನಿಂದ ಹೋರಾಟ ಮಾಡಿದಲ್ಲಿ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಪೀಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

    ವಿಜಯಪುರದ ಇಂಡಿ ಓಂಕಾರೇಶ್ವರ ಸಿದ್ಧಾರೂಢ ಮಠದ ಡಾ. ಶ್ರೀ ಸ್ವರೂಪಾನಂದ ಸ್ವಾಮೀಜಿ, ಬಸವನಹಳ್ಳಿ ಶಿವಾನಂದಾಶ್ರಮದ ಶ್ರೀ ರಮಣಾನಂದ ಸ್ವಾಮೀಜಿ, ವಿಜಯನಗರದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮಂಗಳೂರು ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಂಭುನಾಥ ಸ್ವಾಮೀಜಿ ಮತ್ತಿತರರು ಸಾನ್ನಿಧ್ಯ ವಹಿಸಿದ್ದರು.

    ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ನಾಗಣ್ಣ ಬಾಣಸವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮುನೇಗೌಡ, ಒಕ್ಕೂಟದ ಉಪಾಧ್ಯಕ್ಷ ಸೈದಾಮಿಪಾಳ್ಯರಮೇಶ್, ಗ್ರಾಮಾಂತರ ಜಿಲ್ಲಾ ಪ್ರ.ಕಾರ್ಯದರ್ಶಿ ಮಧುಸೂದನ್, ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಚೆನ್ನಪ್ಪ, ಕಾರ್ಯದರ್ಶಿ ಎನ್.ಸತೀಶ್, ಖಜಾಂಚಿ ಸುಂದರೇಶ್, ನಿರ್ದೇಶಕರಾದ ಚೆನ್ನರಾಯಪ್ಪ, ಎಚ್.ಜಿ.ರಾಜು, ನಗರಸಭೆ ಸದಸ್ಯ ಆಂಜಿನಮೂರ್ತಿ, ಎನ್.ಗಣೇಶ್, ಮುಖಂಡರಾದ ಅರಿಶಿಣಕುಂಟೆ ಮಂಜುನಾಥ್, ಶಿವಕುಮಾರ್, ಕಾರೇಹಳ್ಳಿ ಗುರುಪ್ರಕಾಶ್, ಗುರುಭವಾನಿಶಂಕರ್ ಗ್ರೂಪ್ಸ್ ಮಂಜುನಾಥ್, ಜಗದೀಶ್‌ಚೌಧರಿ, ಯ್ಯಡಾಳು ಹರ್ಷ, ಅಶೋಕ್, ಎಸ್.ವಿ.ಟಿ. ಚಂದ್ರಕುಮಾರ್, ಸಿ.ಜಿ.ಮಂಜುನಾಥ್, ರಮೇಶ್, ಸುರೇಂದ್ರ, ಶೇಖರ್, ವಕೀಲನಾರಾಯಣ್‌ಗೌಡ, ಚಂದನ್ ಮತ್ತಿತರರು ಇದ್ದರು.

    500 ವರ್ಷಗಳ ಹಿಂದೆಯೇ ವ್ಯವಸ್ಥಿತ ಬೆಂಗಳೂರು ನಗರ ನಿರ್ಮಾಣ ಮಾಡಿದ ಕೀರ್ತಿ ಸಮುದಾಯಕ್ಕೆ ಸೇರಿದ ಕೆಂಪೇಗೌಡ ಅವರಿಗೆ ಸಲ್ಲುತ್ತದೆ. ಅತಿ ಹೆಚ್ಚು ಜಾಗವನ್ನು ನಗರ ನಿರ್ಮಾಣಕ್ಕಾಗಿ ಸಮುದಾಯದ ಜನ ಕೊಡುಗೆಯಾಗಿ ನೀಡಿದ್ದಾರೆ. ಒಕ್ಕಲಿಗ ಜನಾಂಗದ ಎಲ್ಲ ಉಪಪಂಗಡಗಳಿಗೂ ಜೀವ ತುಂಬುವ ಕೆಲಸ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಾಡಿದ್ದರು. ಈಗಾಗಲೇ ಸಮುದಾಯದ ಮಠಾಧೀಶರ ಆಶಯದಂತೆ ನಿಗಮ ಸ್ಥಾಪನೆಯಾಗಿದ್ದು, ಉಳಿದ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಹಂತದಲ್ಲಿ ಶ್ರಮಿಸಲಾಗುವುದು.
    ಎಸ್.ಆರ್.ವಿಶ್ವನಾಥ್, ಶಾಸಕ

    ಮೆರವಣಿಗೆ ಮತ್ತು ಬೈಕ್ ರ‌್ಯಾಲಿ: ಸಮಾವೇಶದ ಪ್ರಯುಕ್ತ ಶನಿವಾರ ಬೆಳಗ್ಗೆ 12 ಗಂಟೆಗೆ ನಗರದ ಕೆಂಪೇಗೌಡ ವೃತ್ತ (ಕುಣಿಗಲ್) ದಿಂದ ನಗರದ ಮುಖ್ಯರಸ್ತೆಯ ಮೂಲಕ ನಗರೂರು ಗ್ರಾಮದ ವೇದಿಕೆಯವರೆಗೂ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಸಮುದಾಯದ ಜನತೆ ಮೆರವಣಿಗೆ ನಡೆಸಿದರೆ, ಸಮಾಜದ ಯುವಕರು ಬೈಕ್ ರ‌್ಯಾಲಿ ನಡೆಸಿದರು.

    ಮಾಜಿ ಪ್ರಧಾನಿಗೆ ಭಾರತರತ್ನ ನೀಡ: ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೂ ಭಾರತರತ್ನ ನೀಡುತ್ತಿರುವ ಸಂದರ್ಭದಲ್ಲಿ ದೇಶಕ್ಕಾಗಿ ಮತ್ತು ನಾಡಿನ ರೈತರಿಗಾಗಿ ಶ್ರಮಿಸಿದ ಹಾಗೂ ನೀರಾವರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರಿಗೆ ಭಾರತರತ್ನ ನೀಡುವಂತೆ ಸ್ಫಟಿಕಪುರಿ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.

    ಸರ್ಕಾರಕ್ಕೆ ಧನ್ಯವಾದ: ರಾಜ್ಯ ರಾಜಧಾನಿ ಹಾಗೂ ಇಡೀ ರಾಜ್ಯಕ್ಕೆ ಒಕ್ಕಲಿಗ ಸಮುದಾಯ ನೀಡಿರುವ ಕೊಡುಗೆ ಮತ್ತು ಜನಾಂಗದ ಅಂತಃಶಕ್ತಿಯನ್ನು ಮನಗಂಡು ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ ಸರ್ಕಾರಕ್ಕೆ ಹಾಗೂ ಈ ಬೇಡಿಕೆಯ ಬಗ್ಗೆ ಧ್ವನಿ ಎತ್ತಿದ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಸಮುದಾಯದ ಇತರ ಶಾಸಕರು, ಸಚಿವರಿಗೆ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿವಿಧ ಮಠಾಧೀಶರು, ಒಕ್ಕೂಟದ ಪದಾಧಿಕಾರಿಗಳು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts