More

    ಬೆಸ್ಕಾಂ, ಗ್ರಾಪಂ ಗುದ್ದಾಟ, ನೀರಿಗಾಗಿ ಗ್ರಾಮಸ್ಥರ ಪರದಾಟ

    ಬಾಗೇಪಲ್ಲಿ: ಕೆಟ್ಟ ವಿದ್ಯುತ್ ಪರಿವರ್ತಕ ಅನ್ನು ಒಪ್ಪಿಸಿ ಹೊಸ ವಿದ್ಯುತ್ ಪರಿವರ್ತಕ ತೆಗೆದುಕೊಂಡು ಬರಲು ವಾಹನದ ಬಾಡಿಗೆ ಮತ್ತು ಖರ್ಚಿನ ವಿಚಾರವಾಗಿ ಬೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಪರಸ್ಪರ ನಿಂದನೆ, ಆರೋಪಗಳಲ್ಲಿಯೇ ಕಾಲಹರಣ ಮಾಡುತ್ತಿದ್ದು, ಎರಡು ಗ್ರಾಮಗಳ 200 ಕುಟುಂಬಗಳು ಕುಡಿಯುವ ನೀರಿಗಾಗಿ 6 ತಿಂಗಳಿನಿಂದ ಪರಿತಪಿಸುತ್ತಿವೆ.

    ತಾಲೂಕಿನ ರಾಶ್ಚೇರುವು ಗ್ರಾಪಂ ವ್ಯಾಪ್ತಿಯ ದೋರಣಾಲಪಲ್ಲಿ, ಕದಿರನ್ನಗಾರಿಕೋಟೆ ಗ್ರಾಮ ಮತ್ತು ಕಾಲನಿಯಲ್ಲಿ 200 ಕುಟುಂಬಗಳು ವಾಸವಾಗಿದೆ, ಈ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಾರ್ವಜನಿಕ ಕೊಳವೆಬಾವಿಗೆ ವಿದ್ಯುತ್ ಪೂರೈಕೆಯ ವಿದ್ಯುತ್ ಪರಿವರ್ತಕ ಕೆಟ್ಟು 6 ತಿಂಗಳಾಗಿದೆ. ಆದರೆ ಇದರತ್ತ ಬೆಸ್ಕಾಂ ಇಲಾಖೆಯಾಗಿಲಿ, ಗ್ರಾಮ ಪಂಚಾಯಿತಿಯಾಗಲಿ ತಿರುಗಿಯೂ ನೋಡಿಲ್ಲ.

    ಪಾತಪಾಳ್ಯ ಹೋಬಳಿ ಬೆಸ್ಕಾಂ ಇಲಾಖೆ ವಿಭಾಗೀಯ ಅಧಿಕಾರಿ ಹಾಗೂ ಲೈನ್ ಮೆನ್‌ಗೆ ಆರು ತಿಂಗಳ ಹಿಂದೆಯೇ ವಿದ್ಯುತ್ ಪರಿವರ್ತಕ ಕೆಟ್ಟಿರುವ ಬಗ್ಗೆ ಮಾಹಿತಿ ನೀಡಿ ರಿಪೇರಿ ಮಾಡುವಂತೆ ಮನವಿ ಮಾಡಿದ್ದೇವೆ, ಆದರೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಇದುವರೆಗೂ ರಿಪೇರಿ ಮಾಡಿಲ್ಲ.
    ರಾಮರೆಡ್ಡಿ, ಗ್ರಾಪಂ ಸದಸ್ಯ, ದೋರಣಾಲಪಲ್ಲಿ

    ಬೆಸ್ಕಾಂ ಹಾಗೂ ಗ್ರಾಪಂ ಮುಸುಕಿನ ಗುದ್ದಾಟದಲ್ಲಿ ಹೈರಾಣಾಗಿರುವ ಗ್ರಾಮಸ್ಥರು ವಿದ್ಯುತ್ ಪರಿವರ್ತಕ ರಿಪೇರಿ ಮಾಡುವಂತೆ ಎರಡೂ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇವರನ್ನ ಕೇಳಿದರೆ ಅವರತ್ತ, ಇವರನ್ನ ಕೇಳಿದರೆ ಅವರತ್ತ ಬೆರಳು ತೋರಿಸುತ್ತ ಕಾಲಹರಣ ಮಾಡುತ್ತಿದ್ದಾರೆ, ಕೊನೆಗೆ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಖಾಸಗಿ ಕೊಳವೆಬಾವಿ ಮಾಲೀಕರನ್ನು ಕಾಡಿಬೇಡಿ ಕುಡಿಯುವ ನೀರು ತಂದುಕೊಳ್ಳುತ್ತಿದ್ದಾರೆ.

    ವಿದ್ಯುತ್ ಪರಿವರ್ತಕ‌ಗಳನ್ನು ಈ ಹಿಂದೆ ಬಾಗೇಪಲ್ಲಿ ತಾಲೂಕು ಕೇಂದ್ರದಲ್ಲಿರುವ ಘಟಕದಲ್ಲೆ ಸರಿಪಡಿಸಲಾಗುತ್ತಿತ್ತು ರಿಪೇರಿ ಘಟಕ ಮುಚ್ಚಿರುವ ಕಾರಣ ಪ್ರಸ್ತುತ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಿಂದ ಸರಬರಾಜು ಮಾಡಲಾಗುತ್ತಿದೆ. ಇಲಾಖೆಯಿಂದ ಸೂಕ್ತ ವಾಹನ ಸೌಲಭ್ಯ ಇಲ್ಲದ ಕಾರಣ ವಿಳಂಬವಾಗಿದ್ದು ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ.
    ಶ್ರೀನಿವಾಸ್, ಬೆಸ್ಕಾಂ ಇಲಾಖೆ ಸೆಕ್ಷನ್ ಆಫೀಸರ್, ಪಾತಪಾಳ್ಯ ಹೋಬಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts