More

    ಬೆಳೆ ಸಮೀಕ್ಷೆ ಯೋಜನೆಗೆ ಹಿನ್ನಡೆ

    ನರಗುಂದ: ‘ನನ್ನ ಬೆಳೆ ನನ್ನ ಹಕ್ಕು’ ಘೊಷಣೆಯಡಿ ರಾಜ್ಯಾದ್ಯಂತ ಆ. 10ರಿಂದ ಆರಂಭವಾಗಿರುವ ರೈತರಿಂದಲೇ ಬೆಳೆ ಸಮೀಕ್ಷೆ ಯೋಜನೆ ಕೇವಲ ಶೇ. 24ರಷ್ಟು ಮುಗಿದಿದೆ. ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರದ ಈ ಮಹತ್ವದ ಯೋಜನೆ ಗುರಿ ಸಾಧಿಸದೇ ಇರುವುದರಿಂದ ತಾಲೂಕಿನಾದ್ಯಂತ ಭಾರಿ ಹಿನ್ನಡೆ ಉಂಟಾಗಿದೆ.

    ಕೆಲ ಸಲ ಪಹಣಿಯಲ್ಲಿ ಸರಿಯಾಗಿ ಬೆಳೆ ಮಾಹಿತಿ ನಮೂದಿಸದ ಕಾರಣ ರೈತರು ಪ್ರವಾಹ, ಬರಗಾಲದ ಸಂದರ್ಭಗಳಲ್ಲಿ ಪರಿಹಾರ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಯೋಜನೆಗಳಿಂದ ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಈ ವರ್ಷ ‘ಬೆಳೆ ಸಮೀಕ್ಷೆ 2020-21’ ಎಂಬ ಮೊಬೈಲ್ ಆಪ್ ಮೂಲಕ ಆ. 24ರೊಳಗೆ ರೈತರೇ ಬೆಳೆಯ ಮಾಹಿತಿಯನ್ನು ಖುದ್ದು ದಾಖಲಿಸುವ ವ್ಯವಸ್ಥೆ ಮಾಡಿತ್ತು. ಆದರೆ, ಪ್ರಚಾರದ ಕೊರತೆ ಹಾಗೂ ವಿವಿಧ ಕಾರಣಗಳಿಂದಾಗಿ ರೈತರು ಯೋಜನೆ ಸದುಪಯೋಗಕ್ಕೆ ಮುಂದಾಗುತ್ತಿಲ್ಲ.

    ಮೊಬೈಲ್​ಫೋನ್ ಮೂಲಕ ಬೆಳೆ ಸಮೀಕ್ಷೆ ರಾಜ್ಯದಲ್ಲಿ 2017ರಿಂದಲೇ ಜಾರಿಯಾಗಿದೆಯಾದರೂ, ಮೊದಲ ಎರಡು ವರ್ಷ ಅಷ್ಟಾಗಿ ಕಾರ್ಯಾನುಷ್ಠಾನಗೊಳ್ಳಲಿಲ್ಲ. ಆದರೆ, 2019ರಲ್ಲಿ ರೈತರ ಮಾಹಿತಿ ಆಧರಿಸಿ ಬೆಳೆ ನಷ್ಟ, ವಿಮೆ ಯೋಜನೆಗೆ ಲಿಂಕ್ ಮಾಡಲಾಯಿತು. ಆದರೂ, ಸಾಕಷ್ಟು ಮಂದಿ ರೈತರು ಸಮೀಕ್ಷೆ ಮಾಡಿರಲಿಲ್ಲ. ಆದರೆ, ಈ ಬಾರಿಯ 2020-21ನೇ ಸಾಲಿಗೆ ಈ ಕಾರ್ಯವನ್ನು ಸರ್ಕಾರ ಕಡ್ಡಾಯಗೊಳಿಸಿದೆ. ರೈತರು ಜಮೀನು, ಬೆಳೆ ವಿವರ ದಾಖಲು ಮಾಡದಿದ್ದರೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡುವುದಿಲ್ಲ ಎಂಬುದಾಗಿ ಪ್ರಕಟಣೆ ಮೂಲಕ ತಿಳಿಸಿತ್ತು.

    ಪ್ರವಾಹದಿಂದ ಸಮೀಕ್ಷೆ ಪ್ರಯಾಸ:

    ತಾಲೂಕಿನಾದ್ಯಂತ ಇದುವರೆಗೆ 32,774 ರೈತರು ಸಮೀಕ್ಷೆ ಮಾಡಿಕೊಳ್ಳಬೇಕಾಗಿತ್ತು. ಇದರಲ್ಲಿ 7786 ರೈತರು ಮಾತ್ರ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದ ಬಹಳಷ್ಟು ರೈತರ ಬಳಿ ಸ್ಮಾರ್ಟ್ ಫೋನ್​ಗಳಿಲ್ಲ. ಪ್ರವಾಹದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರೈತರ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಹಾಳಾಗಿವೆ. ಅಸ್ತವ್ಯಸ್ತಗೊಂಡ ಜೀವನವನ್ನೇ ಸರಿಪಡಿಸಲು ಹೆಣಗಾಡುತ್ತಿರುವ ಈ ಭಾಗದ ರೈತರು ಬೆಳೆ ಸಮೀಕ್ಷೆಯತ್ತ ದೃಷ್ಟಿಹರಿಸಿಲ್ಲ. ಇನ್ನೂ ಕೆಲವೆಡೆ ಇಂಟರ್​ನೆಟ್ ಸರಿಯಾಗಿ ದೊರಕುತ್ತಿಲ್ಲ. ಇದು ಕೂಡಾ ಸಮೀಕ್ಷೆ ಹಿನ್ನಡೆಗೆ ಕಾರಣವಾಗಿದೆ. ಪ್ರವಾಹಪೀಡಿತ ತಾಲೂಕಿನ ಲಖಮಾಪುರ ಗ್ರಾಮದಲ್ಲಿ ಕೇವಲ ಐವರು ರೈತರು ಬೆಳೆ ಸಮೀಕ್ಷೆ ಮಾಡಿಕೊಂಡಿದ್ದಾರೆ.

    ಪರ್ಯಾಯ ವ್ಯವಸ್ಥೆ:

    ಬೆಳೆ ಸಮೀಕ್ಷೆಗೆ ಇನ್ನೂ ಒಂದು ತಿಂಗಳು ಅವಕಾಶವಿದೆ. ಬೆಳೆ ಸಮೀಕ್ಷೆ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಎಲ್ಲ ತಾಲೂಕು ಮತ್ತು ಹೋಬಳಿ ಉಸ್ತುವಾರಿಗಳನ್ನಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ. ಆಯಾ ವ್ಯಾಪ್ತಿವಾರು ರೈತರಿಗೆ ಬೆಳೆ ದಾಖಲೆಯ ಮಾಹಿತಿ ನೀಡುತ್ತಿದ್ದಾರೆ. ರೈತರು ಮಾಹಿತಿಗೆ ಸಮೀಪದ ಗ್ರಾಮ ಲೆಕ್ಕಾಧಿಕಾರಿ, ರೈತಸಂಪರ್ಕ ಕೇಂದ್ರದ ಅಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳನ್ನು ಸಂರ್ಪಸಬಹುದು. ಆಂಡ್ರಾಯ್್ಡ ಫೋನ್ ಇಲ್ಲದ ರೈತರು ಪಿ.ಆರ್.ಗಳ (ಖಾಸಗಿ ಸಮೀಕ್ಷೆದಾರರು) ನೆರವು ಪಡೆಯಬಹುದು.

    ಇದೇ ಮೊದಲ ಬಾರಿಗೆ ರೈತರೇ ಬೆಳೆ ಸಮೀಕ್ಷೆ ನಡೆಸುತ್ತಿರುವುದರಿಂದ ಸ್ವಲ್ಪ ತೊಂದರೆಗಳಾಗಿವೆ. ಈ ಕುರಿತು ಕೃಷಿ ಇಲಾಖೆಯಿಂದ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಈ ವಿನೂತನ ವ್ಯವಸ್ಥೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ, ರೈತರು ಮುಂದೆ ಬರುತ್ತಿಲ್ಲ. ತಾಲೂಕಿನ ರೈತರು ಆದಷ್ಟು ಬೇಗ ತಮ್ಮ ಬೆಳೆಗಳ ಸಮೀಕ್ಷೆ ಮಾಡಿಕೊಳ್ಳಬೇಕು.

    ಶ್ರೀಶೈಲ ಅಂಗಶ, ಕೃಷಿ ಸಹಾಯಕ ನಿರ್ದೇಶಕ ನರಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts