More

    ಬೆಳೆ ವಿಮೆ, ಪರಿಹಾರ ಸಮಸ್ಯೆ ನಿವಾರಿಸಿ

    ಹಾನಗಲ್ಲ: 2015-16ರಿಂದ ಇಲ್ಲಿಯವರೆಗಿನ ಬೆಳೆ ವಿಮೆ ಹಣದ ವಿವರಗಳನ್ನು ಜಿಲ್ಲೆಯ ಕೃಷಿ ಅಧಿಕಾರಿಗಳು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿ, ರೈತರ ಖಾತೆಗೆ ಹಣ ತಲುಪಿಸುವ ವ್ಯವಸ್ಥೆ ಕೈಗೊಳ್ಳಬೇಕು ಎಂದು ರೈತ ಸಂಘ ಆಗ್ರಹಿಸಿತು.

    ಪಟ್ಟಣದಲ್ಲಿ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬ್ಯಾಂಕ್ ಅಧಿಕಾರಿಗಳು ಮತ್ತು ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಬೆಳೆ ವಿಮೆ, ಪರಿಹಾರದ ಸಮಸ್ಯೆ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಯಿತು.

    ವಿಷಯ ಪ್ರಸ್ತಾಪಿಸಿದ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, 2015-16ರಲ್ಲಿ ಕೆಲವು ರೈತರು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ವಿಮೆ ಕಂತು ಕಟ್ಟಿದ ಪರಿಣಾಮ, ಪರಿಹಾರದ ವ್ಯತ್ಯಾಸದ ಹಣ ವಿವಿಧ ಬ್ಯಾಂಕ್​ಗಳಲ್ಲಿ ಸೇರಿ ಒಟ್ಟು 1.86 ಕೋಟಿ ರೂ. ಉಳಿದಿದೆ. ಆದರೆ, ಇದನ್ನು ಅಧಿಕಾರಿಗಳು ರೈತರಿಗೆ ವಿತರಿಸದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

    2018-19ರ ಮುಂಗಾರು ಹಂಗಾಮಿನಲ್ಲಿ ಕ್ರಾಪ್ ವೆರಿಫಿಕೇಶನ್ ಪೆಂಡಿಂಗ್ ಎಂದು ತಾಲೂಕಿನ 1320 ರೈತರಿಗೆ 3 ಕೋಟಿ ರೂ. ಮತ್ತು ತೋಟಗಾರಿಕೆ ಬೆಳೆಗಳ ವೆರಿಫಿಕೇಶನ್ ಪೆಂಡಿಂಗ್ ಎಂದು 1130 ರೈತರಿಗೆ ಬೆಳೆ ವಿಮೆ ಪಾವತಿಯಾಗಿಲ್ಲ. ಕೂಡಲೆ ಈ ಸಮಸ್ಯೆ ಪರಿಹರಿಸಿ, ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ, 2015-16ರ ವಿಮೆ ಪರಿಹಾರ ಸಮಸ್ಯೆ ಕುರಿತು ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸಲಾಗಿದೆ. ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ, ಹಣ ಖಾತೆಗೆ ಜಮಾ ಮಾಡಲು ಆದೇಶಿಸಿದ್ದಾರೆ. 2018-19ರಲ್ಲಿನ 1320 ಹಾಗೂ 1130 ರೈತರ ಪ್ರಕರಣದಲ್ಲಿ ತಂತ್ರಾಂಶದಲ್ಲಿ ಆಗಿರುವ ನ್ಯೂನತೆ ಸರಿಪಡಿಸಲು ಆಯುಕ್ತರ ಕಚೇರಿಗೆ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದರು.

    ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಬೇಸಿಗೆಯಲ್ಲಿ ತೋಟಗಾರಿಕೆ ಇಲಾಖೆ ಬೆಳೆ ಸಮೀಕ್ಷೆ ಕೈಗೊಳ್ಳದಿರುವುದರಿಂದಾಗಿ ಹಣ್ಣು-ತರಕಾರಿ ಬೆಳೆದ ರೈತರಿಗೆ ಕೋವಿಡ್ ಪರಿಹಾರ ವಿತರಿಸಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯಲ್ಲಿದ್ದರೆ ಬೆಳೆಗೆ ಮಾತ್ರ ಪರಿಹಾರ ವಿತರಿಸಲು ಸರ್ಕಾರ ಸೂಚಿಸಿದ್ದರಿಂದ ಸಾವಿರಾರು ಜನ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಅಂಥ ರೈತರಿಗೆ ಕೂಡಲೇ ಪರಿಹಾರದ ಹಣ ವಿತರಿಸಬೇಕು ಎಂದು ಆಗ್ರಹಿಸಿದರು.

    ಸಂಘದ ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಘೊಷಿಸಲಾದ ಸಾಲಮನ್ನಾ ಯೋಜನೆಯಡಿ, ಎಲ್ಲ ದಾಖಲಾತಿ ಸಲ್ಲಿಸಿದ್ದರೂ ಹಲವರು ಈ ಯೋಜನೆಯಿಂದ ಹೊರಗುಳಿದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಸಾಲಮನ್ನಾ ಆಗದಿರುವ ಫಲಾನುಭವಿಗಳ ಪಟ್ಟಿ ಮತ್ತೊಮ್ಮೆ ಕಳಿಸಬೇಕಿತ್ತು. ಆದರೆ, ಅವರು ಕಳಿಸದಿರುವುದರಿಂದ ಈಗ ಸಮಸ್ಯೆ ಎದುರಾಗಿದೆ. ಇದಕ್ಕೆ ಯಾರು ಜವಾಬ್ದಾರರು ? ಬ್ಯಾಂಕ್ ಅಧಿಕಾರಿಗಳೇ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

    ಸಭೆಯಲ್ಲಿ ನೀರಾವರಿ ಕೆರೆಗಳ ದುರಸ್ತಿ, ಲೋಕೋಪಯೋಗಿ ಇಲಾಖೆ ರಸ್ತೆಗಳ ಬದಿ ಬೆಳೆದ ಜಂಗಲ್ ಕಟಾವು, ಪಂಪ್​ಸೆಟ್​ಗಳಿಗೆ ಗುಣಮಟ್ಟದ ವಿದ್ಯುತ್ ವಿತರಣೆ ಕುರಿತು ರ್ಚಚಿಸಲಾಯಿತು.

    ರೈತ ಮುಖಂಡರಾದ ಮಹೇಶ ವಿರುಪಣ್ಣನವರ, ರಾಜೀವ ದಾನಪ್ಪನವರ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ, ಉಮೇಶ ಮೂಡಿ, ಶಂಭುಗೌಡ ಪಾಟೀಲ, ಶ್ರೀಧರ ಮಲಗುಂದ, ಬಾಬಣ್ಣ ವರ್ದಿ, ಕರಬಸಪ್ಪ ಆಲದಕಟ್ಟಿ, ನಿಂಗನಗೌಡ ಗಿರೇಗೌಡ್ರ, ಚನ್ನಪ್ಪ ಪಾವಲಿ, ಮಲ್ಲನಗೌಡ ಪಾಟೀಲ, ಎಸ್​ಬಿಐ ಶಿವಮೊಗ್ಗ ವಿಭಾಗೀಯ ಅಧಿಕಾರಿ ಪ್ರಭಾಕರ ಮಲ್ಯ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಎಸ್.ಎಸ್. ಜಿಂಗಾಡೆ, ಎಂ.ಐ. ಪಟ್ಟಣಶೆಟ್ಟಿ, ಎನ್. ಶಿವಮೂರ್ತಿ, ಮಂಜುನಾಥ ಬಣಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts