More

    ಬೆಳಗಾವಿ ಸುವರ್ಣಸೌಧ ಬಳಿ ನಾಳೆ  -ಡ್ರೈವಿಂಗ್ ಸ್ಕೂಲ್ ಮಾಲೀಕರ ಧರಣಿ 

    ದಾವಣಗೆರೆ: ವಾಹನ ಚಾಲನಾ ತರಬೇತಿ ಶಾಲೆಗಳಲ್ಲಿಯೇ ಚಾಲನಾ ಪರವಾನಗಿ ಪರೀಕ್ಷೆ ನಡೆಸಲು ಅನುಮತಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘಗಳ ಒಕ್ಕೂಟ ಡಿ.8ರಂದು ಬೆಳಗಾವಿಯಲ್ಲಿ ಧರಣಿ ಹಮ್ಮಿಕೊಂಡಿದೆ.
    ಅಂದು ಬೆಳಗ್ಗೆ 9 ಗಂಟೆಗೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದಿಂದ ಪಾದಯಾತ್ರೆ ಮೂಲಕ ಸುವರ್ಣ ಸೌಧ ಆವರಣಕ್ಕೆ ತೆರಳಿ ಧರಣಿ ನಡೆಸಲಾಗುವುದು. ರಾಜ್ಯದ 2 ಸಾವಿರ ಡ್ರೈವಿಂಗ್ ಸ್ಕೂಲ್ ಮಾಲೀಕರು ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಫಯಾಜ್ ಅಹಮದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ದಾವಣಗೆರೆ ಜಿಲ್ಲೆಯಲ್ಲಿ 49 ಸೇರಿ ರಾಜ್ಯದಲ್ಲಿ 2 ಸಾವಿರ ಡ್ರೈವಿಂಗ್ ತರಬೇತಿ ಶಾಲೆಗಳಿವೆ. ಇದನ್ನೇ ನಂಬಿಕೊಂಡು ಅನೇಕರು ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ 2022ರಿಂದ ಮಾರಕ ನೀತಿ ಜಾರಿಗೊಳಿಸಿದೆ.
    ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ವಾಹನಗಳ ನಿರ್ವಹಣೆ, ಸಾಲದ ಕಂತುಗಳನ್ನು ಹಣಕಾಸು ಸಂಸ್ಥೆಗಳಿಗೆ ಭರಿಸಲಾಗದೆ ಸಮಸ್ಯೆಯಾಗಿದೆ. ರಾಜ್ಯ ಸಮಿತಿ ಸಾರಿಗೆ ಆಯುಕ್ತರು ಹಾಗೂ ಸರ್ಕಾರಕ್ಕೆ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾಗಿಲ್ಲ. ಸರ್ಕಾರದ ಗಮನ ಸೆಳೆಯಲು ಈಗ ಧರಣಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.
    ವಾಹನ ಚಾಲಕರಿಗೆ ರಸ್ತೆ ನಿಯಮ, ರಸ್ತೆ ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡುವ ಹಿನ್ನೆಲೆಯಲ್ಲಿ ಕಲಿಕಾ ಚಾಲನಾ ಪತ್ರ ಪಡೆಯುವ ಹಂತದಲ್ಲಿ ತರಬೇತಿ ಶಾಲೆಗಳಿಂದ ನಮೂನೆ 14 ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ತರಬೇತಿ ಶಾಲೆಗಳ ತರಬೇತಿ ಶುಲ್ಕವನ್ನು ಹೆಚ್ಚಿಸಬೇಕು.
    ಮಾಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಮಾದರಿಯಲ್ಲೇ ವಾಹನಗಳ ವರ್ಗಾಧಾರಿತ ಚಾಲನಾ ಪರವಾನಗಿ ಪತ್ರಗಳನ್ನು ಕರ್ನಾಟಕದಲ್ಲೂ ಸಿಗುವಂತೆ ಮಾಡಬೇಕು. ರಾಜ್ಯದ ಆರ್‌ಟಿಒ, ಎಆರ್‌ಟಿಒ ವ್ಯಾಪ್ತಿಯಲ್ಲಿ ವಾಹನ ತರಬೇತಿ ಶಾಲೆಗಳ ಆಶ್ರಯದಲ್ಲಿ ತರಬೇತಿದಾರರಿಗೆ ಉತ್ತಮ ತರಬೇತಿಗಾಗಿ ಡ್ರೈವಿಂಗ್ ಟ್ರಾೃಕ್ ನಿರ್ಮಿಸಲು ಸರ್ಕಾರ ಅಗತ್ಯ ಜಮೀನು ನೀಡಬೇಕು.
    ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮೋಟಾರು ವಾಹನ ನಿರೀಕ್ಷಕರು ಹಾಗೂ ಸಿಬ್ಬಂದಿ ಕೊರತೆ ನೀಗಬೇಕು. ಭ್ರಷ್ಟಾಚಾರ ನಿಯಂತ್ರಣೆ ಭಾಗವಾಗಿ ಸಿಬ್ಬಂದಿಯನ್ನು ವರ್ಷಕ್ಕೊಮ್ಮೆ ವರ್ಗಾವಣೆ ಮಾಡಬೇಕು. ಐದು ವರ್ಷಕ್ಕಿಂತ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಈಶ್ವರ್, ಕಾರ್ಯದರ್ಶಿ ತಬರೇಜ್, ಸಹ ಕಾರ್ಯದರ್ಶಿ ಪರ್ವೇಜ್, ನಾಗರಾಜ, ಎಚ್.ಎಚ್.ಅಮೀರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts