More

    ಬೆಳಗಾವಿಯಲ್ಲಿ ಕಸ ವಿಲೇವರಿ!

    ಬೆಳಗಾವಿ: ರಾಜ್ಯದಲ್ಲಿ ಬೆಂಗಳೂರು ಮಹಾನಗರ ಹೊರತುಪಡಿಸಿದರೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಳಗಾವಿ ಮಹಾನಗರಕ್ಕೆ ಕಪ್ಪುಚುಕ್ಕೆ ಎಂಬಂತೆ ಕಸದ ಸಮಸ್ಯೆ ಇನ್ನೂ ಕಾಡುತ್ತಿದೆ. ಮಹಾನಗರ ಪಾಲಿಕೆಯು ವಾರ್ಷಿಕ ಸ್ವಚ್ಛತೆಗಾಗಿ ಕೋಟ್ಯಂತರ ರೂ. ವ್ಯಯಿಸಿದರು ಕಸ ವಿಲೇವಾರಿ ಸಮಸ್ಯೆ ಹಾಗೆ ಉಳಿದಿದೆ.

    ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಹಸಿ ಕಸ, ಒಣ ಕಸ, ಇ-ಕಸ, ಹಾನಿಕಾರಕ ಕಸ ಸೇರಿ ಸುಮಾರು 250 ರಿಂದ 320 ಮೆಟ್ರಿಕ್ ಟನ್‌ವರೆಗೆ ಕಸ ಉತ್ಪತ್ತಿಯಾಗುತ್ತಿದೆ. ಆದರೆ, ರಾಮತೀರ್ಥ ನಗರ, ವಂಟಮೂರಿ ಕಾಲನಿ, ಉದ್ಯಮಬಾಗ್, ಆಟೋ ನಗರ ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗದೆ ಜನ ಸಮಸ್ಯೆ ಎದುರಿಸುತ್ತಿದ್ದಾರೆ.

    ಎಲ್ಲೆಂದರಲ್ಲಿ ಕಸ ಚೆಲ್ಲುವ ಪ್ರವೃತ್ತಿ ಒಂದೆಡೆಯಾದರೆ ಇನ್ನೊಂದೆಡೆ ಕಸ ವಿಲೇವಾರಿ ಸಮರ್ಪಕವಾಗದೇ ರಸ್ತೆ ಪಕ್ಕದಲ್ಲಿ, ಖಾಲಿ ನಿವೇಶನಗಳಲ್ಲೂ ಕಸ ತಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳು ತೊಂದರೆ ಅನುಭವಿಸುವುದು ತಪ್ಪಿಲ್ಲ. ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಕಸದಿಂದಾಗಿ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಪಾಲಿಕೆಯ ಕಸ ವಿಲೇವಾರಿ ಮಾಡುವ ಸಿಬ್ಬಂದಿ ಇದ್ದರೂ ಯಾರೊಬ್ಬರು ಇಲ್ಲಿ ಕಸ ತೆಗೆಯಲು ಬರುತ್ತಿಲ್ಲ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನಿರುಪಯುಕ್ತ ನೀರು ಕಸದ ರಾಶಿಗೆ ನುಗ್ಗಿ ಗಬ್ಬು ವಾಸನೆ ಹರಡುತ್ತಿದೆ. ರೋಸಿಹೋದ ಜನ ಪಾಲಿಕೆಯ ವಾರ್ಡ್ ಸದಸ್ಯರು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಮತ್ತು ಮಧ್ಯಮ ಗಾತ್ರದ 430 ಹೊಟೇಲ್‌ಗಳು, ರಸ್ತೆ ಬದಿಯಲ್ಲಿರುವ ತಳ್ಳು ಗಾಡಿ ಹೋಟೆಲ್‌ಗಳಿಂದ ನಿತ್ಯ ಸುಮಾರು 50 ಟನ್ ವರೆಗೆ ಹಸಿ, ಒಣ ಕಸ ಉತ್ಪತಿಯಾಗುತ್ತಿದೆ. ಆದರೆ, ತಳ್ಳು ಗಾಡಿ ಹೋಟೆಲ್‌ಗಳಲ್ಲಿನ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿಯೇ ಹಾಕಲಾಗುತ್ತಿದೆ. ಇದು ವಿಲೇವಾರಿ ಆಗದಿರುವ ಕಾರಣ ಗಬ್ಬು ವಾಸನೆ ಹರಡುತ್ತಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳು, ಪೌರ ಕಾರ್ಮಿಕರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.

    ಮಹಾನಗರದಲ್ಲಿ ಹಲವು ತಿಂಗಳುಗಳಿಂದ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ವಂಟಮೂರಿ ಕಾಲನಿ, ರಾಮತೀರ್ಥ ನಗರ ಕ್ರಿಕೆಟ್ ಸ್ಟೇಡಿಯಂ, ಕಣಬರ್ಗಿ ಕೆರೆ ಸುತ್ತಮುತ್ತಲಿನ ಪ್ರದೇಶದ ರಸ್ತೆ ಪಕ್ಕದಲ್ಲಿ ಬಿದ್ದಿರುವ ಕಸದಿಂದ ಗಬ್ಬು ವಾಸನೆ ಹರಡುತ್ತಿದ್ದು, ಓಡಾಡಲು ಸಾಧ್ಯವಾಗುತ್ತಿಲ್ಲ. ಮಹಾನಗರ ಪಾಲಿಕೆಯು ಸ್ವಚ್ಛತೆಗಾಗಿ ಜನರಿಂದ ಶೇ.1 ತೆರಿಗೆ ವಸೂಲಿ ಮಾಡುತ್ತದೆ. ಅಲ್ಲದೆ, ಕಸ ವಿಲೇವಾರಿಗಾಗಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ.
    | ಎನ್.ಆರ್.ಲಾತೂರ, ರಾಮತೀರ್ಥ ನಗರ ನಿವಾಸಿ

    ಮಹಾನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ. ಯಾವುದೇ ಜನವಸತಿ ಪ್ರದೇಶದಲ್ಲಿ ಕಸ ವಿಲೇವಾರಿ ಆಗದಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ವಿಲೇವಾರಿ ಮಾಡಿ ಸಮಸ್ಯೆ ಪರಿಹರಿಸಲಾಗುವುದು.
    | ಡಾ.ರುದ್ರೇಶ ಘಾಳಿ, ಪಾಲಿಕೆ ಆಯುಕ್ತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts