More

    ಬೆಡ್, ಆಕ್ಸಿಜನ್ ಕೊರತೆ ಆಗದಂತೆ ಕ್ರಮ ವಹಿಸಿ

    ಬೆಳಗಾವಿ: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಲಭ್ಯವಿರುವ ಬೆಡ್‌ಗಳ ಮಾಹಿತಿಯನ್ನು ಪ್ರತಿದಿನ ವೆಬ್‌ಸೈಟ್ ಮೂಲಕ ಜನರಿಗೆ ನೀಡಬೇಕು. ಆಕ್ಸಿಜನ್, ರೆವ್ೆಡೆಸಿವಿರ್ ಮತ್ತಿತರ ಔಷಧೋಪಕರಣಗಳ ಕೊರತೆ ಉಂಟಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ವಸತಿ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಅಗತ್ಯ ಚಿಕಿತ್ಸೆ ಒದಗಿಸುವುದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಸೇರಿ ಎಲ್ಲ ಹಿರಿಯ ಅಧಿಕಾರಿಗಳ ಜತೆ ಮಂಗಳವಾರ ವರ್ಚುವಲ್ ಸಭೆ ನಡೆಸಿ ಮಾತನಾಡಿದರು. ಎಲ್ಲ ತಾಲೂಕುಗಳಲ್ಲಿ ಕರೊನಾ ಕೇರ್‌ಸೆಂಟರ್ ಪ್ರಾರಂಭಿಸಬೇಕು. ಕೋವಿಡ್ ಸೊಂಕಿತ ರೋಗಿಗಳಿಗೆ ಹಾಸಿಗೆ ಕೊರತೆಯಾಗದಂತೆ ವಸತಿ ಶಾಲೆ/ವಸತಿ ನಿಲಯಗಳನ್ನು ಸಜ್ಜುಗೊಳಿಸಬೇಕು. ಸಣ್ಣ-ಸಣ್ಣ ಮನೆ ಇದ್ದವರಿಗೆ ಕ್ವಾರಂಟೈನ್‌ನಲ್ಲಿಡುವ ಪರಿಸ್ಥಿತಿ ಎದುರಾದರೆ ಅವರನ್ನು ವಸತಿ ನಿಲಯ/ ಶಾಲೆಗಳಲ್ಲಿ ಕ್ವಾರಂಟೈನ್‌ನಲ್ಲಿಟ್ಟು ಆರೈಕೆ ಮಾಡಬೇಕು ಎಂದು ಸೂಚಿಸಿದರು.

    ಪರಸ್ಪರ ವಿನಿಮಯ ಅಗತ್ಯ: ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಆಕ್ಸಿಜನ್ ಕೊರತೆಯ ಬಗ್ಗೆ ಬಹಳಷ್ಟು ವರದಿಗಳು ಬರುತ್ತಿವೆ. ಆದ್ದರಿಂದ ಜಿಲ್ಲೆಯಲ್ಲಿ ಲಭ್ಯವಿರುವ ಆಕ್ಸಿಜನ್ ದಾಸ್ತಾನು, ದೈನಂದಿನ ಬಳಕೆ ಹಾಗೂ ತುರ್ತು ಸಂದರ್ಭದಲ್ಲಿ ಪೂರೈಕೆ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಲಭ್ಯವಿರುವ ವೆಂಟಿಲೇಟರ್ ಸೌಲಭ್ಯ ಸಮರ್ಪಕ ಬಳಕೆಗೆ ಅಗತ್ಯವಿರುವ ತಂತ್ರಜ್ಞರನ್ನು ನೇಮಿಸಿಕೊಳ್ಳಬೇಕು. ಅಕ್ಕಪಕ್ಕದ ಜಿಲ್ಲೆಗಳ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಆಕ್ಸಿಜನ್ ಇತರ ಸೌಲಭ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಲಸಿಕೆ ನೀಡಲು ನಿರ್ದೇಶನ: ಮಾಧ್ಯಮ ಪ್ರತಿನಿಧಿಗಳು, ಮನೆ ಮನೆಗೆ ಸಿಲಿಂಡರ್ ಪೂರೈಸುವವರಿಗೆ, ಕ್ಷೌರಿಕರು, ಅಗಸ ವೃತ್ತಿಯಲ್ಲಿ ತೊಡಗಿರುವವರಿಗೆ ಕರೊನಾ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಬೇಕು. ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಅನುದಾನ ಲಭ್ಯವಿದೆ. ಒಂದು ವೇಳೆ ಹಣಕಾಸು, ಔಷಧೋಪಕರಣಗಳ ಖರೀದಿ ಸೇರಿ ಸರ್ಕಾರದಿಂದ ಯಾವುದೇ ರೀತಿಯ ನೆರವು ಅಗತ್ಯವಿದ್ದರೆ ತಕ್ಷಣ ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಅವರು, ಆಕ್ಸಿಜನ್ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳು ಹಾಗೂ ಚಿಕಿತ್ಸಾ ಸೌಲಭ್ಯಗಳ ಮಾಹಿತಿಯನ್ನು ವೆಬ್ ಸೈಟ್ ಮೂಲಕ ಸಾರ್ವಜನಿಕರಿಗೆ ನೀಡಲು ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಹೋಬಳಿ ಮಟ್ಟದಲ್ಲೂ ಕೇಂದ್ರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸುಮಾರು 4 ಸಾವಿರ ಬೆಡ್‌ಗಳು ಲಭ್ಯವಾಗಿರುತ್ತವೆ. ಅದರಲ್ಲಿ 1,909 ಆಕ್ಸಿಜನ್ ವ್ಯವಸ್ಥೆ ಕಲ್ಪಿಸಬಹುದಾದ ಬೆಡ್‌ಗಳು, 179 ಐಸಿಯು ಬೆಡ್, 137 ಐಸಿಯು ಜತೆಗೆ ವೆಂಟಿಲೇಟರ್ ಸೌಲಭ್ಯ ಹೊಂದಿರುವ ಬೆಡ್‌ಗಳಿವೆ. ಅದಲ್ಲದೆ. 77 ಹೈಫ್ರೋ ಆಕ್ಸಿಜನ್ ಹಾಗೂ 543 ಹೈಫ್ರೋ ನೇಸಲ್ ಆಕ್ಸಿಜನ್ ಸೌಲಭ್ಯ ಹೊಂದಿರುವ ಬೆಡ್‌ಗಳಿವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು. ಅದರಲ್ಲಿ ಒಂದು ಸಾವಿರ ಬೆಡ್‌ಗಳಿಗೆ ನಿರಂತರವಾಗಿ 24 ಗಂಟೆಗಳ ಕಾಲ ಆಕ್ಸಿಜನ್ ಒದಗಿಸುವ ಸಾಮರ್ಥ್ಯವಿದೆ ಎಂದು ತಿಳಿಸಿದರು. ಲಸಿಕಾಕರಣದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಶೇ.40 ಲಸಿಕಾಕರಣವಾಗಿದೆ. 32 ಸಾವಿರ ಲಸಿಕೆಗಳು ಜಿಲ್ಲೆಗೆ ಸದ್ಯದಲ್ಲಿಯೇ ಪೂರೈಕೆಯಾಗಲಿವೆ. ಪ್ರತಿ ತಾಲೂಕು ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದ್ದು, ಅಗತ್ಯಬಿದ್ದರೆ ಹೋಬಳಿ ಮಟ್ಟದಲ್ಲಿ ಕೂಡ ಇಂತಹ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

    ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆಯನ್ನು ಆಧರಿಸಿ 47 ಆಸ್ಪತ್ರೆಗಳಿಗೆ ರೆಮ್‌ಡೆಸಿವಿರ್ ಒದಗಿಸಲಾಗುತ್ತಿದೆ. ಸದ್ಯಕ್ಕೆ ಆಕ್ಸಿಜನ್ ಹಾಗೂ ರೆಮ್‌ಡೆಸಿವಿರ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ನಗರ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್.ವಿ.ದರ್ಶನ್,
    ಜಿಲ್ಲಾ ವೈದ್ಯಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಡಾ.ಬಿ.ತುಕ್ಕಾರ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ ಹಾಗೂ ಕಂದಾಯ, ತುರ್ತು ಸೇವೆಗಳಿಗೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts